ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಭೂಹಗರಣ ಮತ್ತು ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವ ಟಿಎಂಸಿ ನಾಯಕ ಶೇಖ್ ಷಹಜಹಾನ್ ಮತ್ತು ಅವರ ಸಹಚರರು ಬಡ ಬುಡಕಟ್ಟು ಕುಟುಂಬಗಳಿಂದ ಮನರೇಗಾ ವೇತನವನ್ನು ಬಲವಂತವಾಗಿ ಕಸಿದುಕೊಂಡಿದ್ದಾರೆ. ಟಿಎಂಸಿ ವಿರುದ್ಧ ಮತ ಚಲಾಯಿಸಿದ್ದಕ್ಕಾಗಿ ಅವರನ್ನು ಹಿಂಸಿಸುತ್ತಾರೆ ಎಂದು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ (ಎನ್‌ಸಿಎಸ್‌ಟಿ) ಹೇಳಿದೆ.
ಸಂದೇಶ್‌ಖಾಲಿಗೆ ಎನ್‌ಸಿಎಸ್‌ಟಿ ಉಪಾಧ್ಯಕ್ಷ ಅನಂತ ನಾಯಕ್ ನೇತೃತ್ವದ ಮೂವರು ಸದಸ್ಯರ ತಂಡ ಭೇಟಿ ನೀಡಿದ್ದು, ಬುಡಕಟ್ಟು ಸಮುದಾಯದ ಜನರ ಅಳಲನ್ನು ಆಲಿಸಿದೆ. ಆರೋಪಗಳ ಬಗ್ಗೆ ತನಿಖೆ ನಡೆಸಿದೆ. ಈ ವೇಳೆ, “ಪಶ್ಚಿಮ ಬಂಗಾಳ ಪೊಲೀಸರು ಷಹಜಹಾನ್ ಮತ್ತು ಅವರ ಸಹಚರರನ್ನು ‘ರಕ್ಷಿಸಿದ್ದಾರೆ'” ಎಂದು ದೂರುದಾರರು ತಿಳಿಸಿದ್ದಾರೆ.
ತನಿಖಾ ತಂಡ ದೆಹಲಿಗೆ ಮರಳಿದೆ. ಸರ್ಕಾರಕ್ಕೆ ವರದಿ ಸಲ್ಲಿಸಲು ಸಿದ್ದತೆ ನಡೆಸುತ್ತಿದೆ. ತಂಡ ನೇತೃತ್ವ ವಹಿಸಿದ್ದ ನಾಯಕ್ ಅವರು, “ಷಹಜಹಾನ್ ಮತ್ತು ಅವರ ಸಹಚರರಿಂದ ಬುಡಕಟ್ಟು ಮಹಿಳೆಯರಿಗೆ ಲೈಂಗಿಕ ಕಿರುಕುಳ ಮತ್ತು ಭೂಕಬಳಿಕೆಗೆ ಸಂಬಂಧಿಸಿದಂತೆ 50ಕ್ಕೂ ಹೆಚ್ಚು ದೂರುಗಳನ್ನು ಸಮಿತಿಯು ಸ್ವೀಕರಿಸಿದೆ” ಎಂದು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಸುಂದರ್‌ಬನ್ಸ್‌ನ ಗಡಿಯಲ್ಲಿರುವ ಉತ್ತರ 24 ಪರಗಣ ಜಿಲ್ಲೆಯ ನದಿಯ ಸಂದೇಶ್‌ಖಾಲಿ ಪ್ರದೇಶವು ಉದ್ವಿಗ್ನಗೊಂಡಿದೆ. ಒಂದು ತಿಂಗಳಿನಿಂದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಷಹಜಹಾನ್ ವಿರುದ್ಧ ಅಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಷಹಜಹಾನ್ ಮತ್ತು ಅವರ ಸಹಚರರು ತಲೆ ಮರೆಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
“ಬಡ ಬುಡಕಟ್ಟು ಜನರಿಗೆ ತಮ್ಮ ಮನರೇಗಾ ದುಡಿಮೆಯನ್ನು ನೀಡುವಂತೆ ಷಹಜಹಾನ್ ಒತ್ತಡ ಹಾಕುತ್ತಾರೆ. ಸಾಲದಾತರಿಂದ ಹಣ ಪಡೆದು ತನಗೆ ನೀಡುವಂತೆ ಕೇಳುತ್ತಾರೆ. ಇದೆಲ್ಲದರಿಂದ ಅಲ್ಲಿನ ಜನರು ಈಗಾಗಲೇ ದಣಿದಿದ್ದರೆ. ದೇಶಾದ್ಯಂತ ಇಂತಹ ಪರಿಸ್ಥಿತಿಯನ್ನು ಎಲ್ಲಿಯೂ ಖಂಡಿಲ್ಲ” ಎಂದು ನಾಯಕ್ ಹೇಳಿದ್ದಾರೆ.
“ಷಹಜಹಾನ್ ಮತ್ತು ಅವರ ಸಹಚರರು ಚುನಾವಣೆಯಲ್ಲಿ ಇತರ ಪಕ್ಷಗಳಿಗೆ ಮತ ಹಾಕಿದ ಜನರನ್ನು ಹಿಂಸಿಸಿದ್ದಾರೆ. ಅಲ್ಲದೆ, ಸ್ಥಳೀಯ ಮಹಿಳೆಯರನ್ನು ತಡರಾತ್ರಿ ಸಭೆಗಳಿಗೆ ಬರುವಂತೆ ಹೇಳುತ್ತಿದ್ದರು. ಅವರು ಹೇಳಿದಂತೆ ಕೇಳದಿದ್ದರೆ, ಅಂತಹವರ ಕುಟುಂಬದ ಸದಸ್ಯರನ್ನು ಹಿಂಸಿಸುತ್ತಿದ್ದರು ಎಂಬುದು ಸಮಿತಿ ಗಮನಕ್ಕೆ ಬಂದಿದೆ” ಎಂದು ಅವರು ವಿವರಿಸಿದ್ದಾರೆ.
“ಸಂತ್ರಸ್ತ ಮಹಿಳೆ ಪೊಲೀಸರನ್ನು ಸಂಪರ್ಕಿಸಿದರೆ, ಅವರು ಎಫ್‌ಐಆರ್ ಅಥವಾ ದೂರನ್ನು ದಾಖಲಿಸುವುದಿಲ್ಲ. ಬದಲಿಗೆ, ಷಹಜಹಾನ್ ಜೊತೆ ಮಾತುಕತೆ ನಡೆಸುವಂತೆ ದೂರುದಾರರಿಗೆ ಹೇಳುತ್ತಾರೆ. ಈ ಪ್ರಕರಣದಲ್ಲಿ ಪೊಲೀಸರು ಆರೋಪಿಯ ಬೆಂಬಲಕ್ಕೆ ನಿಂತಿದ್ದಾರೆ” ಎಂದು ನಾಯಕ್ ತಿಳಿಸಿದ್ದಾರೆ.
“ಆರೋಪಿಗಳು ಬುಡಕಟ್ಟು ಕುಟುಂಬಗಳನ್ನು ತಮ್ಮ ಭೂಮಿಯನ್ನು ಹಸ್ತಾಂತರಿಸುವಂತೆ ಕೇಳುತ್ತಾರೆ. ಜನರು ಪ್ರತಿಭಟಿಸಿದರೆ ಅವರ ಹೊಲಗಳಿಗೆ ಉಪ್ಪುನೀರನ್ನು ಬಿಡುತ್ತಾರೆ ಎಂಬ ದೂರುಗಳೂ ಬಂದಿವೆ” ಎಂದು ಹೇಳಿದ್ದಾರೆ.
“10 ಕಿಲೋಮೀಟರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಬುಡಕಟ್ಟು ಮತ್ತು ಬುಡಕಟ್ಟು ಅಲ್ಲದ ಜನರ ಭೂಮಿಯನ್ನು ಶಹಜಹಾನ್ ಕಿತ್ತುಕೊಂಡಿದ್ದಾರೆ” ಎಂದು ನಾಯಕ್ ತಿಳಿಸಿದ್ದಾರೆ.
ಫೆಬ್ರವರಿ 20 ರಂದು, ಆಯೋಗವು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಮತ್ತು ರಾಜ್ಯದ ಪೊಲೀಸ್ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಿದೆ. ಈ ವಿಷಯದ ಬಗ್ಗೆ ವಾಸ್ತವಿಕ ಮತ್ತು ಕ್ರಮ ತೆಗೆದುಕೊಂಡ ವರದಿಗಳನ್ನು ಮೂರು ದಿನಗಳಲ್ಲಿ ಸಲ್ಲಿಸುವಂತೆ ಕೇಳಿದೆ.