ಫೆಬ್ರವರಿ 27ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯು ಬಿಜೆಪಿ-ಜೆಡಿಎಸ್ ಮೈತ್ರಿ ಪ್ರತಿಷ್ಠೆಯನ್ನು ಪಣಕ್ಕಿಟ್ಟಿದೆ. ರಾಜ್ಯಸಭೆಯ ಮಾಜಿ ಸದಸ್ಯ, ಜೆಡಿಎಸ್‌ನ ಡಿ ಕುಪೇಂದ್ರ ರೆಡ್ಡಿ ಅವರು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ರಾಜ್ಯದಿಂದ ರಾಜ್ಯಸಭೆಗೆ ನಡೆಯಲಿರುವ ನಾಲ್ಕು ಸ್ಥಾನಗಳ ಚುನಾವಣೆಗೆ ಕುಪೇಂದ್ರ ರೆಡ್ಡಿ 5ನೇ ಅಭ್ಯರ್ಥಿಯಾಗಿದ್ದಾರೆ.
66 ಶಾಸಕರನ್ನು ಹೊಂದಿರುವ ಬಿಜೆಪಿಯು ತನ್ನ ಏಕೈಕ ಅಭ್ಯರ್ಥಿಯಾಗಿ ನಾರಾಯಣಸಾ ಭಾಂಡಗೆ ಅವರನ್ನು ಕಣಕ್ಕಿಳಿಸಿದೆ. ಅವರು ಗೆಲ್ಲುವ ಸಾಧ್ಯತೆಗಳು ಹೆಚ್ಚಾಗಿವೆ. ಏಕೆಂದರೆ, ಒಬ್ಬರು ಗೆಲ್ಲಲು 45 ಮತಗಳು ಬೇಕಾಗುತ್ತವೆ ಆದ್ದರಿಂದ, ಅವರ ಗೆಲುವು ನಿಸ್ಸಂಶಯವಾಗಿದೆ. ಆದರೆ, ಭಾಂಡಗೆ ಅವರ ಗೆಲುವನ್ನು ಖಾತ್ರಿ ಪಡಿಸಲು ಬಿಜೆಪಿ ಇನ್ನೂ ಎರಡು (47) ಮತಗಳನ್ನು ಅವರಿಗೇ ಹಾಕುವ ಸಾಧ್ಯತೆಗಳಿವೆ.
ಹೀಗಾಗಿ, ಬಿಜೆಪಿಯಲ್ಲಿ ಉಳಿಯುವ 19 ಮತಗಳನ್ನು ಕುಪೇಂದ್ರ ರೆಡ್ಡಿ ಅವರಿಗೆ ನೀಡಲಾಗುತ್ತದೆ. ಆದರೆ, ಕೆಲವು ಅನಿಶ್ಚಿತತೆಗಳು ಎದುರಾಗಿವೆ. ಎಸ್.ಟಿ ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಸೇರಿದಂತೆ ಬಿಜೆಪಿಯೊಳಗಿನ ಕೆಲವು ‘ಅತೃಪ್ತರು’ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಅವರು ಬಿಜೆಪಿಯ ಹೈಕಮಾಂಡ್ ಸೂಚನೆಗೆ ಮಣಿಯುತ್ತಾರೆಯೇ ಮತ್ತು ಕುಪೇಂದ್ರ ರೆಡ್ಡಿ ಅವರನ್ನು ಬೆಂಬಲಿಸುತ್ತಾರೆಯೇ ಎಂಬುದು ಸಂಶಯವಾಗಿ ಉಳಿದಿದೆ.
19 ಜೆಡಿಎಸ್ ಶಾಸಕರ ಪೈಕಿ ಗುರುಮಿಟಕಲ್ ಶಾಸಕ ಶರಣಗೌಡ ಕಂದಕೂರ್, ಹನೂರಿನ ಎಂ.ಆರ್ ಮಂಜುನಾಥ್, ದೇವದುರ್ಗದ ಕರೆಮ್ಮ ಜಿ ನಾಯಕ ಸೇರಿದಂತೆ ಮೂವರು ಶಾಸಕರು ಕಾಂಗ್ರೆಸ್ ನಾಯಕರೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೀಗಾಗಿ, ಕುಪೇಂದ್ರ ರೆಡ್ಡಿ ಅವರು ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಹಾಗೂ ಕಾಂಗ್ರೆಸ್ ಶಾಸಕರನ್ನೂ ಮನವೊಲಿಸುವ ದುಸ್ಸಾಹಸ ಮಾಡಬೇಕಾಗಿದೆ. ಅವರು ರಾಜ್ಯಸಭೆಗೆ ಆಯ್ಕೆಯಾಗಲು 45 ಮತಗಳ ಸಂಖ್ಯಾಬಲ ಪಡೆಯಲು ಕಸರತ್ತು ಮಾಡಬೇಕಾಗಿದೆ. ಆದರೆ, ಕೆಲವು ಶಾಸಕರು ಮತದಾನದಿಂದ ದೂರ ಉಳಿಯುವ ಸಾಧ್ಯತೆಯೇ ಹೆಚ್ಚಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮತ್ತು ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ರೆಡ್ಡಿಗೆ ಅಗತ್ಯ ಮತಗಳನ್ನು ಹೊಂದಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಪಕ್ಷದಲ್ಲಿ ಹೆಚ್ಚಿನ ಉತ್ಸಾಹವಿಲ್ಲ. ರೆಡ್ಡಿ ಗೆಲುವು ಕಷ್ಟವಾಗಬಹುದು ಎಂದು ಬಿಜೆಪಿಯ ಶಾಸಕರೊಬ್ಬರು ಹೇಳಿರುವುದಾಗಿ ‘ಟಿಎನ್‌ಐಇ’ ವರದಿ ಮಾಡಿದೆ.
ಫೆಬ್ರವರಿ 16 ರಂದು ನಡೆದ ವಿಧಾನ ಪರಿಷತ್ ಬೆಂಗಳೂರು ಶಿಕ್ಷಕರ ಸ್ಥಾನದ ಉಪಚುನಾವಣೆಯಲ್ಲಿ ಹೊಂದಾಣಿಕೆಯ ಕೊರತೆಯಿಂದ ಬಿಜೆಪಿ-ಜೆಡಿಎಸ್ ಮೈತ್ರಿಯು ಈಗಾಗಲೇ ಸೋಲನುಭವಿಸಿದೆ. ಜೆಡಿಎಸ್‌ನ ಅಭ್ಯರ್ಥಿ ಎ.ಪಿ ರಂಗನಾಥ್ ಅವರು ಕಾಂಗ್ರೆಸ್‌ನ ಪುಟ್ಟಣ್ಣ ವಿರುದ್ಧ ಸೋತಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯ ನೆಪದಲ್ಲಿ ಕಾಂಗ್ರೆಸ್ ತನ್ನ 135 ಶಾಸಕರನ್ನು ಸೋಮವಾರ ಸಂಜೆ ಬೆಂಗಳೂರಿನ ಹೊರವಲಯದಲ್ಲಿರುವ ಹಿಲ್ಟನ್ ರೆಸಾರ್ಟ್‌ನಲ್ಲಿ ಸೇರಿಸಲು ಮುಂದಾಗಿದೆ. ಆ ಸಭೆಯಲ್ಲಿ ಪಕ್ಷದ ಹೈಕಮಾಂಡ್ ಭಾಗವಹಿಸಲಿದೆ. ಪಕ್ಷೇತರ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ಲತಾ ಮಲ್ಲಿಕಾರ್ಜುನ್ ಮತ್ತು ಪುಟ್ಟಸ್ವಾಮಿಗೌಡ ಅವರೂ ಸಭೆಯಲ್ಲಿ ಭಾಗಿಯಾಗಲು ಮನವಿ ಮಾಡಿದೆ.
ಏತನ್ಮಧ್ಯೆ, ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರೊಂದಿಗೆ ಮಾತುಕತೆ ನಡೆಸಿರುವುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಶುಕ್ರವಾರ ಹೇಳಿದ್ದಾರೆ. ಪಕ್ಷವು ಸಾಕಷ್ಟು ಮತಗಳನ್ನು ಹೊಂದಿರುವುದರಿಂದ ತಮ್ಮ ಅಭ್ಯರ್ಥಿಗಳಾದ ಅಜಯ್ ಮಾಕನ್, ಜಿ.ಸಿ ಚಂದ್ರಶೇಖರ್ ಮತ್ತು ಸೈಯದ್ ನಸೀರ್ ಹುಸೇನ್ ಅವರು ಗೆಲ್ಲುತ್ತಾರೆಂಬ ವಿಶ್ವಾಸವನ್ನು ಪಕ್ಷದ ನಾಯಕತ್ವ ಹೊಂದಿದೆ.