ಮಾನನಷ್ಟ ಮೊಕದ್ದಮೆಗಳಲ್ಲಿ ಒಬ್ಬ ವ್ಯಕ್ತಿ ಮಾತ್ರವಲ್ಲ, ರಾಜಕೀಯ ಪಕ್ಷಗಳಂತಹ ಸಂಸ್ಥೆಗಳು ಸೇರಿದಂತೆ ಯಾವುದೇ ವ್ಯಕ್ತಿಗಳ ಸಂಘವನ್ನೂ ಕ್ರಿಮಿನಲ್ ಆರೋಪಿಗಳಾಗಿ ಹೆಸರಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಮಾನನಷ್ಟ ಮೊಕದ್ದಮೆ ಪ್ರಕರಣ ರದ್ದತಿಗಾಗಿ ಬಿಜೆಪಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಕಾಂಗ್ರೆಸ್ ಶಾಸಕ ರಿಜ್ವಾನ್ ಹರ್ಷದ್ ಅವರು ಬಿಜೆಪಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಮೊದದ್ದಮೆಯಲ್ಲಿ, ‘2019ರಲ್ಲಿ ತಮ್ಮ ವಿರುದ್ಧ ಬಿಜೆಪಿ ಮಾಡಿದ್ದ ಅವಹೇಳನಕಾರಿ ಟ್ವೀಟ್‌ಗಳನ್ನು ಉಲ್ಲೇಖಿಸಿದ್ದರು.
ರಿಜ್ವಾನ್ ದಾಖಲಿಸಿದ್ದ ಮೊಕದ್ದಮೆಯನ್ನು ಪ್ರಶ್ನಿಸಿದ್ದ ಬಿಜೆಪಿಯ ಹಿಂದಿನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, “ಮಾನನಷ್ಟ ಮೊಕದ್ದಮೆ ಹೂಡಲು ಇದೊಂದು ರಾಜಕೀಯ ಪಕ್ಷವೇ ಹೊರತು ವ್ಯಕ್ತಿಯಲ್ಲ. ಅದೊಂದು ವ್ಯಕ್ತಿಗಳ ಸಂಘ ಆಗಿರುವುದರಿಂದ ‘ಯಾರು’ ರಂಬ ಪದಕ್ಕೆ ಸಂಘವು ಹೊಂದಿಕೆಯಾಗುವುದಿಲ್ಲ. ಹೀಗಾಗಿ, ಮೊಕದ್ದಮೆಯನ್ನು ರದ್ದುಗೊಳಿಸಬೇಕು” ಎಂದು ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅರ್ಜಿಯನ್ನು ವಜಾಗೊಳಿಸಿದ್ದಾರೆ. “ಮಾನನಷ್ಟ ಮೊಕದ್ದಮೆಯಗಳಲ್ಲಿ ಐಪಿಸಿಯ 499 ಮತ್ತು 500 ಸೆಕ್ಷನ್‌ಗಳಲ್ಲಿ ‘ಯಾರು’ ಎಂಬ ಪದವು ವ್ಯಕ್ತಿಗಳನ್ನಷ್ಟೇ ಅಲ್ಲ, ಅವರ ಸಂಘವನ್ನೂ ಕೂಡ ಸೂಚ್ಯವಾಗಿ ಒಳಗೊಂಡಿರುತ್ತದೆ ಎಂದು ನಾನು ಪರಿಗಣಿಸುತ್ತೇನೆ. ಇಲ್ಲಿ ಅರ್ಜಿದಾರರಂತೆ (ಕಟೀಲ್) ಸಂಘಟಿತರಾಗಿದ್ದರೂ ಅಥವಾ ಇಲ್ಲದಿದ್ದರೂ ಅಂತಹ ಸಂಸ್ಥೆ-ಸಂಘ-ಪಕ್ಷಗಳನ್ನು ಕ್ರಿಮಿನಲ್ ಮೊಕದ್ದಮೆಗಳಲ್ಲಿ ಆರೋಪಿಗಳಾಗಿ ಹೆಸರಿಸಬಹುದು” ಎಂದು ನ್ಯಾಯಮೂರ್ತಿ ದೀಕ್ಷಿತ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಸಂದೇಶ್‌ಖಾಲಿ ಪ್ರಕರಣ | ಟಿಎಂಸಿ ವಿರುದ್ಧ ಮತ ಚಲಾಯಿಸಿದ್ದಕ್ಕೆ ಆದಿವಾಸಿಗಳಿಗೆ ಚಿತ್ರಹಿಂಸೆ; ಎನ್‌ಸಿಎಸ್‌ಟಿ ವಿವರ
“ಖಾಸಗಿ ವ್ಯಕ್ತಿಗಳಿಗಿಂತ ಭಿನ್ನವಾಗಿ, ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ಪ್ರಜ್ಞಾಪೂರ್ವಕವಾಗಿ ಸಾರ್ವಜನಿಕರಿಂದ ನಿಕಟ ಪರಿಶೀಲನೆಗೆ ತಮ್ಮನ್ನು ಒಡ್ಡಿಕೊಳ್ಳುತ್ತಾರೆ. ಅವರು ಹೆಚ್ಚಿನ ಮಟ್ಟದ ಸಹಿಷ್ಣುತೆಯನ್ನು ಪ್ರದರ್ಶಿಸಬೇಕು. ಅವರ ಚಿತ್ರಣ ಮತ್ತು ಖ್ಯಾತಿಯು ಚುನಾವಣಾ ಪ್ರಕ್ರಿಯೆ ಮತ್ತು ಫಲಿತಾಂಶದ ಮೇಲೆ ಪ್ರಭಾವ ಬೀರುತ್ತದೆ. ಅವರ ಚಿತ್ರಣವನ್ನು ವಿವಾದಕ್ಕೆ ಸಿಲುಕಿಸಬಾರದು” ಎಂದು ನ್ಯಾಯಧೀಶರು ಹೇಳಿದ್ದಾರೆ.
“ನಮ್ಮಂತಹ ಪ್ರಜಾಪ್ರಭುತ್ವ ವ್ಯವಸ್ಥೆಯು ರಾಜಕೀಯ ಪಕ್ಷಗಳು ಮತ್ತು ಚುನಾಯಿತ ಪ್ರತಿನಿಧಿಗಳ ಖ್ಯಾತಿಗೆ ಸಮಂಜಸವಾದ ರಕ್ಷಣೆಯನ್ನು ಖಾತರಿಪಡಿಸುತ್ತದೆ. ಮಾನನಷ್ಟದ ಹಿಂಸೆ ಅಥವಾ ಅಪರಾಧವನ್ನು ತುಂಬಾ ತೆಳುವಾಗಿ ನೋಡಲಾಗುವುದಿಲ್ಲ. ಐಪಿಸಿ ಸೆಕ್ಷನ್ 499 ಮತ್ತು 500ರ ವ್ಯಾಪ್ತಿಯಿಂದ ರಾಜಕೀಯ ಪಕ್ಷಗಳನ್ನು ಹೊರಗಿಡುವುದು ಈ ದೃಷ್ಟಿಕೋನವನ್ನು ಮರೆಮಾಚುತ್ತದೆ. ಹೀಗಾಗಿ, ಪ್ರಕರಣವು ವಿಚಾರಣೆಗೆ ಅರ್ಹವಾಗಿದೆ” ಎಂದು ಹೇಳಿದ್ದಾರೆ.