ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತವು ರಾಜ್ಯದ 81 ಸ್ಥಳಗಳಲ್ಲಿ ಕಾಮಗಾರಿ ನಡೆಸಲು ಮುಂದಾಗಿದೆ. ನಿಗಮವು 2024ರ ಜನವರಿ 12ರಂದು ಹೊರಡಿಸಿರುವ ಟೆಂಡರ್ ಪ್ರಕಟಣೆಯಲ್ಲಿ ಈ ಕಾಮಗಾರಿಗಳನ್ನು ನಡೆಸಲು 25 ಪ್ಯಾಕೇಜ್‌ಗಳಿಗೆ ಟೆಂಡರ್ ಆಹ್ವಾನಿಸಿದೆ. ಆದರೆ, ಈ ಪ್ರಕ್ರಿಯೆಯು ಕೆಪಿಟಿಟಿ ಕಾಯ್ದೆಯನ್ನು ಉಲ್ಲಂಘಿಸಿದೆ ಎಂದು ನೈಜ ಹೋರಾಟಗಾರರ ವೇದಿಕೆ ಆರೋಪಿಸಿದೆ.
ಕಾಯ್ದೆಯ ಉಲ್ಲಂಘನೆ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಅವರಿಗೆ ವೇದಿಕೆಯ ಮುಖಂಡ ಎಚ್.ಎಂ ವೆಂಕಟೇಶ್ ಮತ್ತು ಹಂದ್ರಾಳ್ ನಾಗಭೂಷಣ್ ಕುಣಿಗಲ್ ನರಸಿಂಹಮೂರ್ತಿ ಪತ್ರ ಬರೆದಿದ್ದಾರೆ. “ನಿಗಮವು ಸುಮಾರು 400 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ನಡೆಸಲು ಉದ್ದೇಶಿಸಿದೆ. ಟೆಂಡರ್‌ಗೆ ಬಿಡ್ ಮಾಡಲು ಕೆಪಿಟಿಸಿ ಕಾಯ್ದೆ ಪ್ರಕಾರ 30 ದಿನಗಳ ಕಾಲಾವಕಾಶ ನೀಡಬೇಕು. ಆದರೆ, ನಿಗಮವು 15 ದಿನದೊಳಗೆ ಟೆಂಡರ್ ಪ್ರಕ್ರಿಯೆ ಮುಗಿಸಲು ತೀರ್ಮಾನಿಸಿದೆ. ಇದು ಅವ್ಯವಹಾರಕ್ಕೆ ಎಡೆಮಾಡಿಕೊಡುತ್ತದೆ” ಎಂದು ಆರೋಪಿಸಿದ್ದಾರೆ.
“ನಿಗಮದ ಕೆಲವು ಅಧಿಕಾರಿಗಳು ಮೊದಲೇ ನಿರ್ಧರಿಸಿದ ಕಾಂಟ್ರಾಕ್ಟರ್‌ಗಳೊಂದಿಗೆ ಕೈಜೋಡಿಸಿರುವಂತಿದೆ. ಬಹು ಪಾಲು ಟೆಂಡರ್‌ಗಳನ್ನು ತಮಗೆ ಬೇಕಿರುವ ಗುತ್ತಿಗೆದಾರರಿಗೆ ನೀಡುವ ಉದ್ದೇಶದಿಂದ ಅಕ್ರಮವಾಗಿ ಟೆಂಡರ್ ಪ್ರಕ್ರಿಯೆಯನ್ನು 2024ರ ಫೆಬ್ರವರಿ 23ರಂದು ಮುಗಿಸಿದ್ದಾರೆ. ನಮಗೆ ಬಂದ ಮಾಹಿತಿ ಆಧಾರದಲ್ಲಿ ಬಿಡ್ ತೆರೆಯುವ ಮೊದಲೇ ಕಾಂಟ್ರಾಕ್ಟರ್‌ಗಳನ್ನು ನಿರ್ಧರಿಸಿ ಪಟ್ಟಿ ಮಾಡಿದ್ದಾರೆ” ಎಂದು ದೂರಿದ್ದಾರೆ.
“ಟೆಂಡರ್ ಪ್ರಕ್ರಿಯೆಯನ್ನು ಪ್ರಕಟಿಸಿದ ದಿನಾಂಕದಿಂದ 30 ದಿನಗಳವರೆಗೆ ಕಾಲಾವಕಾಶ ನೀಡಬೇಕು. ಈ ವಿಷಯದಲ್ಲಿ ಟೆಂಡರ್ ಪ್ರಕಟಣೆಗೊಂಡರೂ ಸಹಿತ ಪೋರ್ಟ್‌ನಲ್ಲಿ ಮಾತ್ರ ಕಾಮಗಾರಿಯ ಬಗ್ಗೆ ವಿವರವಾದ ಪೂರ್ಣ ಪ್ರಮಾಣದ ಮಾಹಿತಿಯನ್ನು ತಡವಾಗಿ ದಿನಾಂಕ: 07/02/24 ಮತ್ತು 08/02/24 ರಂದು ಪ್ರಕಟಿಸಿದ್ದಾರೆ. ಇದರಿಂದ, ಕೆಪಿಟಿಟಿ ಆಕ್ಟ್ ಉಲ್ಲಂಘನೆ ಆಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ” ಎಂದು ಹೇಳಿದ್ದಾರೆ.
“ಮುಖ್ಯವಾಗಿ ಟೆಂಡರ್ ಬಿಡ್ ತೆರೆಯುವ ಮೊದಲೇ ಯಾವ ಯಾವ ಕಾಮಗಾರಿಗಳನ್ನು ಯಾವ ಯಾವ ಕಾಂಟ್ರಾಕ್ಟರ್‌ಗಳಿಗೆ ಕೊಡಬೇಕೆಂಬುದನ್ನು ನಿಗದಿಪಡಿಸಿ ಪಟ್ಟಿ ಮಾಡಲಾಗಿದೆ ಎಂಬ ಮಾಹಿತಿ ಸಾರ್ವಜನಿಕರ ಗಮನಕ್ಕೆ ಬಂದಿರುವುದು ದುರಾದೃಷ್ಟಕರ ವಿಷಯವಾಗಿದೆ. ಹಾಗೂ ಪಾರದರ್ಶಕ ಆಡಳಿತಕ್ಕೆ ಮತ್ತು ಕೆಪಿಟಿಟಿ ಆಕ್ಟ್ ಗೆ ಧಕ್ಕೆ ಉಂಟಾಗಿರುತ್ತದೆ. ಟೆಂಡರ್ ಪ್ರಕ್ರಿಯೆಯಲ್ಲಿ ಅವ್ಯವಹಾರ, ಕರ್ತವ್ಯ ಲೋಪ ಮತ್ತು ಕಾಯ್ದೆಗಳ ಉಲ್ಲಂಘನೆಯಾಗಿದ್ದಲ್ಲಿ ತಕ್ಷಣ ಟೆಂಡರ್ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಬೇಕು” ಎಂದು ಒತ್ತಾಯಿಸಿದ್ದಾರೆ.