ಮಂಗಳೂರು : ಕೋಮುವಾದ, ಭ್ರಷ್ಟಾಚಾರ, ಭಯೋತ್ಪಾದನೆ ಜನರ ಬದುಕುನ್ನು ಜರ್ಜರಿತ ಮಾಡಿರುವ ಈ ಹೊತ್ತಿನಲ್ಲಿ ಇದರ ವಿರುದ್ಧ ಪ್ರಜಾಪ್ರಭುತ್ವ ದಾರಿಯಲ್ಲಿ ಹೋರಾಟ ಮಾಡುವುದು ಮತ್ತು ಧ್ವನಿ ಎತ್ತುವುದು ಅಗತ್ಯವಾಗಿದೆ. ಅದೊಂದು ಚಾರಿತ್ರಿಕ ಜವಾಬ್ದಾರಿಯೂ ಆಗಿದೆ ಎಂದು ನಿವೃತ್ತ ನ್ಯಾಯಾಧೀಶ ಎಚ್.ಎನ್ ನಾಗಮೋಹನ್ ದಾಸ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಉಳ್ಳಾಲದ ತೊಕ್ಕೊಟ್ಟುವಿನಲ್ಲಿ ನಡೆಯುತ್ತಿರುವ ಡಿವೈಎಫ್‌ಐ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. “ಸದ್ಯದ ಪರಿಸ್ಥಿತಿ ಭ್ರಮೆಯನ್ನು ಮಾರಾಟಮಾಡುವ ವಿಲಕ್ಷಣ ಸಮಯವಾಗಿದ್ದು, ಯುವಕರನ್ನು ಭ್ರಮಯೊಳಗೆ ಟ್ರ್ಯಾಪ್ ಮಾಡಲಾಗಿದೆ. ಈ ರೀತಿಯಲ್ಲಿ ಭ್ರಮಾಧೀನರಾಗಿರುವ ಯುವಜನರ ಮನಸ್ಸನ್ನು ನಿತ್ಯವೂ ದೋಚಲಾಗುತ್ತಿದೆ. ಈ ಅಪಾಯವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಇದು ಮೌನವಾಗಿರಬೇಕಾದ ಸಮಯವಲ್ಲ” ಎಂದು ಜಸ್ಟೀಸ್ ನಾಗಮೋಹನ್ ದಾಸ್ ಅಭಿಪ್ರಾಯಪಟ್ಟರು.
ಸಮಗ್ರ ಯುವನೀತಿ ಜಾರಿಯಾಗಲಿ
“ದೊಡ್ಡ ಮಟ್ಟದಲ್ಲಿ ನಿರುದ್ಯೋಗ ಸಮಸ್ಯೆ ಎದುರಾಗಿರುವ ಈ ಹೊತ್ತಿನಲ್ಲಿ ಯುವಜನ ಸಂಪತ್ತನ್ನು ದೇಶಕಟ್ಟಲು ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಸಮಗ್ರವಾದ ಯುವಜನ ನೀತಿಯನ್ನು ಜಾರಿಗೊಳಿಸಬೇಕಾಗಿದೆ” ಎಂದು ಆಗ್ರಹಿಸಿದರು.
“ದೇಶದಲ್ಲಿ ನಿರುದ್ಯೋಗ ಜಾಸ್ತಿಯಾಗಿದ್ದು, ಇದರ ಪರಿಣಾಮವಾಗಿ ಕ್ರೈಮ್, ಸೂಸೈಡ್, ಭ್ರಷ್ಟಾಚಾರ, ಭಯೋತ್ಪಾದನೆ ಜಾಸ್ತಿಯಾಗಿದೆ. ಇದೆಲ್ಲಕ್ಕಿಂತ ಅಪಾಯಕಾರಿಯಾಗಿ ಕೋಮುವಾದ ವ್ಯಾಪಿಸುತ್ತಿದೆ. ಇದ್ಯಾವುದಕ್ಕೂ ಪೊಲೀಸ್ ಠಾಣೆ, ಲಾಠಿ ಚಾರ್ಜ್ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ, ಈ ಕಾರಣದಿಂದಾಗಿ ಸಮಗ್ರ ಯುವನೀತಿ ಜಾರಿಗಾಗಿ ಯುವಜನರು ಒತ್ತಾಯಿಸಬೇಕಾಗಿದೆ” ಎಂದರು.
ಗುಣಾತ್ಮಕ ಶಿಕ್ಷಣ ಲಭಿಸಲಿ
“ಒಂದೆಡೆ ನಿರುದ್ಯೋಗದ ಸಮಸ್ಯೆ, ಇದರ ಜತೆಗೆ ತಾರತಮ್ಯದ ಶಿಕ್ಷಣ ದೇಶದ ಸಮಗ್ರತೆಗೆ, ಭಾವೈಕ್ಯತೆಗೆ ಧಕ್ಕೆ ತರುತ್ತಿದೆ. ಶ್ರೀಮಂತರ ಮಕ್ಕಳಿಗೆ ಒಂದು ರೀತಿಯ ಶಾಲೆ, ಬಡವರ ಮಕ್ಕಳಿಗೆ ಇನ್ನೊಂದು ರೀತಿಯ ಶಾಲೆ. ಗುಣಮಟ್ಟದ ಶಿಕ್ಷಣದ ದೊಡ್ಡ ಕೊರತೆ ಕಾಡುತ್ತಿದೆ. ಇದಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಪರಿಹಾರ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಗುಣಾತ್ಮಕ ಶಿಕ್ಷಣ ಎಲ್ಲರಿಗೂ ಸಿಗುವಂತೆ ಯುವಜನರು ಒತ್ತಾಯ ಮಾಡಬೇಕು” ಎಂದು ಹೇಳಿದರು.
ಸಂವಿಧಾನ ಉಳಿಸಲು ಜಾಹಿರಾತಲ್ಲ ಚಳವಳಿ ಅಗತ್ಯ: ಇಬ್ರಾಹಿಂ
ಸಮ್ಮೇಳನ ಸ್ವಾಗತ ಸಮಿತಿ ಗೌರವ ಅಧ್ಯಕ್ಷ ನಿವೃತ್ತ ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ ಮಾತನಾಡಿ, “ಸಂವಿಧಾನ ಉಳಿಸಬೇಕೆಂದು ಕೇವಲ ಪತ್ರಿಕೆಯಲ್ಲಿ ಜಾಹಿರಾತು ನೀಡಿದರೆ ಸಾಲದು, ಸಂವಿಧಾನ ಉಳಿಸಲು ಚಳುವಳಿ ಕಟ್ಟಬೇಕು” ಎಂದು ಕರೆ ನೀಡಿದರು.
“ಮಂಗಳೂರನ್ನು ಕೋಮುವಾದಿಗಳ ಪ್ರಯೋಗ ಶಾಲೆಯೆಂದು ಕರೆಯಲಾಗುತ್ತಿದೆ. ಅವರ ಎಲ್ಲ ಪ್ರಯೋಗಳು ಯಶಸ್ವಿಯಾಗಿ ಮುಗಿದಿದೆ. ಈಗ ಪ್ರಯೋಗಗಳನ್ನು ಮಂಡ್ಯ, ಕೋಲಾರಕ್ಕೆ ವಿಸ್ತರಿಸುವ ಕೆಲಸ ನಡೆಯುತ್ತಿದೆ. ಈ ಬಗ್ಗೆ ಜನರು ಜಾಗೃತರಾಗಬೇಕಾಗಿದೆ” ಎಂದು ಹೇಳಿದರು.
ಅಕ್ರಮ ಚುನಾವಣಾ ಬಾಂಡ್: ಥಾಮಸ್
ಡಿವೈಎಫ್ಐ ರಾಷ್ಟ್ರೀಯ ಸಮಿತಿ ಸದಸ್ಯ ಜಾಕ್ ಸಿ ಥಾಮಸ್ ಮಾತನಾಡಿ, “ಚುನಾವಣಾ ಬಾಂಡ್ ಮೂಲಕ ಕಾನೂನು ಬಾಹಿರ ಆಗಿರುವುದನ್ನು ಕಾನೂನಿನ ಚೌಕಟ್ಟಿಗೆ ತಂದ ಏಕೈಕ ದೇಶ ಭಾರತ. ಇತ್ತೀಚೆಗೆ ಸುಪ್ರಿಂ ಕೋರ್ಟ್ ಈ ಅಕ್ರಮ ಚುನಾವಣಾ ಬಾಂಡ್ ನಿಷೇಧಿಸಿ ದೇಶದ ಪ್ರಜಾಪ್ರಭುತ್ವದ ಗೌರವ ಉಳಿಸಿದೆ. ಚುನಾವಣಾ ಬಾಂಡ್ ಮೂಲಕ ರಾಜಕೀಯ ಪಕ್ಷಗಳು ಕೋಟ್ಯಂತರ ಸಂಗ್ರಹ ಮಾಡಿದೆಯಾದರೂ, ಎಡ ಪಕ್ಷಗಳು ಇದರಿಂದ ದೂರ ನಿಂತಿತ್ತು” ಎಂದು ಹೇಳಿದರು.
ಜನರ ಹೃದಯದಲ್ಲಿ ಇದ್ದೇವೆ: ಮುನೀರ್
ಡಿವೈಎಫ್ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, “ಪ್ರತಿ ಬಾರಿ ನಮ್ಮನ್ನು ವಿರೋಧಿಸುವವರು ನೀವು ವಿಧಾನಸಭೆಯಲ್ಲಿ, ಪಾರ್ಲಿಮೆಂಟಿನಲ್ಲಿ ಇದ್ದೀರಾ ಎಂದು ಪ್ರಶ್ನೆ ಮಾಡ್ತಾರೆ, ನಾವು ಜನರ ನಡುವೆ ಇದ್ದೇವೆ. ಜನರ ಹೃದಯದಲ್ಲಿ ಇದ್ದೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಸಿಮ್ಸ್ ಮೇಲ್ದರ್ಜೆಗೇರಿಸಲು 50 ಕೋಟಿ ರೂ. ಅನುದಾನ
“ಜಿಲ್ಲೆಯಲ್ಲಿ ಜನಪರ ಹೋರಾಟ ನಡೆದಾಗ, ಜನರಿಗೆ ಅನ್ಯಾಯವಾದಾಗ ಅದನ್ನು ಎದುರಿಸಿ ನಾವೇ ಮುಂದೆ ನಿಂತಿರುತ್ತೇವೆ” ಎಂದು ಹೇಳಿದರು.
ಡಿವೈಎಫ್ಐ ಸಮ್ಮೇಳನ ಸಮಿತಿ ಕಾರ್ಯಧ್ಯಕ್ಷ ಡಾ.ಕೃಷ್ಣಪ್ಪ ಕೊಂಚಾಡಿ, ಡಿವೈಎಫ್ಐ ಮುಖಂಡರುಗಳಾದ ಬಸವರಾಜ್ ಪೂಜಾರ್, ರಜೀಶ್ ವೆಲ್ಲಾಟ್, ರೇಣುಕಾ ಕಹಾರ್, ಆಶಾ ಬೋಳೂರು, ಸುನಿಲ್ ಕುಮಾರ್ ಬಜಾಲ್, ಸಂತೋಷ್ ಬಜಾಲ್, ಭೀಮನಗೌಡ, ರಾಮಚಂದ್ರ ಬಬ್ಬುಕಟ್ಟೆ, ಬಿ ಕೆ ಇಮ್ತಿಯಾಜ್, ಜೀವನ್ ಕುತ್ತಾರ್, ಮನೋಜ್ ವಾಮಂಜೂರು ಸೇರಿದಂತೆ ಬಹುತೇಕರು ಇದ್ದರು.