ಡಿವೈಎಫ್‌ಐ 12ನೇ ರಾಜ್ಯ ಸಮ್ಮೇಳನದಲ್ಲಿ ಭಾಗಿಯಾಗಿದ್ದ ಕಾರ್ಯಕರ್ತರು, ಅಂಗಾಗ ದಾನ ಮಾಡುವ ಮಹತ್ವದ ಪ್ರತಿಜ್ಞೆಗೈದಿದ್ದಾರೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಪ್ರತಿಜ್ಞಾವಿಧಿ ಬೋಧಿಸಿದರು.
ಪ್ರತಿಜ್ಞಾವಿಧಿ ನಿರ್ಧಾರದ ನಂತರ ಡಿವೈಎಫ್‌ಐ ದ.ಕ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಕೆ. ಇಮ್ತಿಯಾಜ್ ಮಾತನಾಡಿ, ಅಂಗಾಂಗ ದಾನ ಈಗಿನ ವೈದ್ಯಕೀಯ ರಂಗದಲ್ಲಿ ಅತ್ಯುತ್ತಮ ಬೆಳವಣಿಗೆ. ಸಾಕಷ್ಟು ಜನರ ಜೀವ ಉಳಿಸುವ, ಆರೋಗ್ಯದಿಂದ ಬದುಕುವಂತೆ ಮಾಡುವ ತಾಕತ್ತು ಅಂಗಾಂಗ ದಾನಕ್ಕಿದೆ. ದೇಹದಲ್ಲಿನ ಯಾವುದೇ ಅಂಗದ ಅಸಮರ್ಪಕ ಕಾರ್ಯದಿಂದ ವ್ಯಕ್ತಿಯ ಜೀವಕ್ಕೆ ಅಪಾಯವಿದ್ದರೆ, ಆರೋಗ್ಯವಂತ ವ್ಯಕ್ತಿಯು ಮರಣ ಬಳಿಕ ತನ್ನ ಅಂಗಗಳನ್ನು ದಾನ ಮಾಡುವ ಮೂಲಕ ಅವನ ಜೀವವನ್ನು ಉಳಿಸಬಹುದು ಎಂದರು.
ಸಮ್ಮೇಳನದಲ್ಲಿ ಭಾಗವಹಿಸಿದ್ದ ಬಹಳಷ್ಟು ಪ್ರತಿನಿಧಿಗಳು ಅಂಗಾಂಗ ದಾನಕ್ಕೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಈ ಕಾರ್ಯವನ್ನು ಇನ್ನಷ್ಟು ವಿಸ್ತರಿಸಲಾಗುವುದು ಎಂದು ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ತಿಳಿಸಿದರು.
ಯಾವ ಯಾವ ಅಂಗ ದಾನ ಮಾಡಬಹುದು?
ಅಂಗಾಂಗ ದಾನದ ಅಡಿಯಲ್ಲಿ, ಹೃದಯ, ಯಕೃತ್ತು, ಮೇದೋಜ್ಜೀರಕ ಗ್ರಂಥಿ, ಸಣ್ಣ ಮತ್ತು ದೊಡ್ಡ ಕರುಳು, ಕಾರ್ನಿಯಾ ಮತ್ತು ಚರ್ಮದ ಅಂಗಾಂಶಗಳನ್ನು ದಾನ ಮಾಡಬಹುದು.
