ಅಗ್ನಿಪಥ್ ಯೋಜನೆಯಿಂದಾಗಿ ಸಶಸ್ತ್ರ ಪಡೆಗಳಲ್ಲಿ ನಿಯಮಿತ ಉದ್ಯೋಗವನ್ನು ಬಯಸುತ್ತಿರುವ ದೇಶದ ಯುವಕರಿಗೆ ‘ಘೋರ ಅನ್ಯಾಯ’ ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಸೋಮವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದು, ಯುವಕರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ.
ಸಶಸ್ತ್ರ ಪಡೆಗಳಲ್ಲಿ ನಿಯಮಿತ ನೇಮಕಾತಿ ಪ್ರಕ್ರಿಯೆ ಅಂತ್ಯಗೊಂಡಿರುವುದರಿಂದ ಸುಮಾರು 2 ಲಕ್ಷ ಯುವಕ-ಯುವತಿಯರ ಭವಿಷ್ಯ ಅತಂತ್ರವಾಗಿದೆ ಎಂದು ಖರ್ಗೆ ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಭಾರತೀಯ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಕೂಡ ಆಗಿರುವುದರಿಂದ ಖರ್ಗೆ ಈ ಪತ್ರ ಬರೆದಿದ್ದಾರೆ.
My letter to the Hon’ble President of India (@rashtrapatibhvn) highlighting the gross injustice to almost two lakh young men and women whose future has become uncertain due to ending of regular recruitment process and imposing Agnipath Scheme for the Armed Forces by the Union… pic.twitter.com/nZceaXpKs0
— Mallikarjun Kharge (@kharge) February 26, 2024
“ಅತ್ಯಂತ ಮಹತ್ವದ ವಿಷಯದ ಕುರಿತು ಭಾರತೀಯ ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿರುವ ನಿಮಗೆ ಪತ್ರ ಬರೆಯುತ್ತಿದ್ದೇನೆ. ಭಾರತ ಸರ್ಕಾರವು ತೆಗೆದುಕೊಂಡ ನಿರ್ಧಾರಗಳಿಂದ ಸುಮಾರು ಎರಡು ಲಕ್ಷ ಯುವಕ-ಯುವತಿಯರ ಭವಿಷ್ಯವು ಇಂದು ಅನಿಶ್ಚಿತತೆಗೆ ಒಳಗಾಗಿದೆ” ಎಂದು ಪತ್ರವನ್ನು ಆರಂಭಿಸಿದ್ದಾರೆ.
“ಇತ್ತೀಚೆಗೆ ಭಾರತೀಯ ಸಶಸ್ತ್ರ ಪಡೆಗಳ ಸೇವೆಗೆ ಆಯ್ಕೆಯಾದ ಯುವಕ-ಯುವತಿಯರ ಗುಂಪನ್ನು ಭೇಟಿಯಾಗುವ ಭಾಗ್ಯ ನನಗೆ ಸಿಕ್ಕಿತು. ಆದರೆ ನಮ್ಮ ದೇಶಕ್ಕೆ ಸೇವೆ ಸಲ್ಲಿಸುವ ಅವಕಾಶವನ್ನು ಸರ್ಕಾರ ನಿರಾಕರಿಸಿದೆ. 2019 ಮತ್ತು 2022 ರ ನಡುವೆ ಸುಮಾರು ಎರಡು ಲಕ್ಷ ಯುವಕ-ಯುವತಿಯರು ಭಾರತೀಯ ಸೇನೆ, ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಸೇನೆಗೆ ಅವರನ್ನು ಆಯ್ಕೆಯಾಗಿದ್ದೆವು ಎಂದು ನನಗೆ ಹೇಳಿದರು. ಈ ಯುವಕ-ಯುವತಿಯರು ಕಠಿಣ ಶ್ರಮ ವಹಿಸಿ ಎಲ್ಲ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದರು. 2022ರ ಮೇ 31ವರೆಗೆ ತಮ್ಮ ಕನಸುಗಳನ್ನು ಈಡೇರಲಿದೆ ಎಂದು ನಂಬಿದ್ದರು ಮತ್ತು ಆರ್ಡರ್ ಕಾಪಿ ಕೈಗೆ ಸಿಗಲು ಕಾಯುತ್ತಿದ್ದರು. ಆದರೆ, ಕೇಂದ್ರ ಸರ್ಕಾರವು ಅಗ್ನಿಪಥ್ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಅವರೆಲ್ಲರ ಕನಸಿಗೆ ತಣ್ಣೀರೆರಚಿತು” ಎಂದು ತಿಳಿಸಿದ್ದಾರೆ.
“ಅಗ್ನಿಪಥ್ ಯೋಜನೆಯಿಂದ ಸುಮಾರು ಎರಡು ಲಕ್ಷ ಯುವಕ-ಯುವತಿಯರ ಕನಸುಗಳು ಭಗ್ನಗೊಂಡವು. ಈ ಯೋಜನೆಯಲ್ಲಿ ಅನೇಕ ಸಮಸ್ಯೆಗಳಿವೆ ಎಂದು ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ಅವರು ಕೂಡ ತಿಳಿಸಿದ್ದಾರೆ. ಈ ಯೋಜನೆಯಿಂದ ನಮ್ಮ ಯೋಧರಲ್ಲಿ ತಾರತಮ್ಯವನ್ನುಂಟು ಮಾಡುತ್ತದೆ. ನಾಲ್ಕು ವರ್ಷಗಳ ಸೇವೆಯ ನಂತರ ಅಗ್ನಿವೀರ್‌ಗಳನ್ನು ಸೇವೆಯಿಂದ ತೆಗೆಯಲಾಗುತ್ತದೆ. ಇದು ಸಾಮಾಜಿಕ ಸ್ಥಿರತೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು” ಎಂದು ಖರ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಸೇನೆಗೆ ಸೇರುವ ಉದ್ದೇಶದಿಂದ ದೇಶಾದ್ಯಂತ ಸುಮಾರು 50 ಲಕ್ಷ ಯುವಕತು ಅರ್ಜಿ ಸಲ್ಲಿಸಿದ್ದರು. ಅವರಿಂದ ಅರ್ಜಿ ಶುಲ್ಕವಾಗಿ ತಲಾ ₹250 ಸಂಗ್ರಹಿಸಲಾಗಿತ್ತು. ಆ ಮೂಲಕ ಒಟ್ಟು ₹125 ಕೋಟಿ ಸಂಗ್ರಹಿಸಲಾಗಿದ್ದರೂ, ಅದನ್ನು ಹಿಂದಿರುಗಿಸಿಲ್ಲ. ಅಗ್ನಿಪಥ್ ಯೋಜನೆ ಜಾರಿಯಾದ ಪರಿಣಾಮವಾಗಿ ಹಲವು ಮಂದಿ ಯುವಕರು ಆತ್ಮಹತ್ಯೆಗಳಿಗೆ ಶರಣಾಗಿದ್ದಾರೆ. ಈ ಯುವಕರು ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳುವ ಪ್ರಯತ್ನದಲ್ಲಿ ವರ್ಷಗಳ ಕಾಲ ಕಳೆದಿದ್ದಾರೆ ಮತ್ತು ‘ಪರಿಣಾಮವಾಗಿ ಹತಾಶೆ ಮತ್ತು ಭರವಸೆ ಕಾಣದಿರುವುದು ಹಲವಾರು ಸಾವುಗಳಿಗೆ ಕಾರಣವಾಯಿತು’ ಎಂದು ಖರ್ಗೆ ತಿಳಿಸಿದ್ದಾರೆ.
“ನಮ್ಮ ಯುವಕರು ಈ ರೀತಿ ತೊಂದರೆ ಅನುಭವಿಸಲು ಬಿಡಬಾರದು. ಅವರಿಗೆ ಸೂಕ್ತ ನ್ಯಾಯ ಲಭ್ಯವಾಗುವಂತೆ ನೋಡಿಕೊಳ್ಳಲು ನಾನು ನಿಮಗೆ ಮನವಿ ಮಾಡುತ್ತೇನೆ” ಎಂದು ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರಪತಿಯವರಲ್ಲಿ ಮನವಿ ಮಾಡಿದ್ದಾರೆ.
ಅಧಿಕಾರಕ್ಕೆ ಬಂದರೆ ಹಳೆಯ ನೇಮಕಾತಿ ಪದ್ಧತಿ ಮರುಜಾರಿ: ಕಾಂಗ್ರೆಸ್
ಅಗ್ನಿಪಥ್ ಸೇನಾ ಭರ್ತಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ದಾಳಿ ನಡೆಸಿರುವ ಕಾಂಗ್ರೆಸ್, ಯುವಜನರಿಗೆ ತೀವ್ರ ಅನ್ಯಾಯವನ್ನು ಮಾಡಲಾಗಿದೆ ಎಂದು ಹೇಳಿದೆಯಲ್ಲದೇ, ಒಂದು ವೇಳೆ ತಾನು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಹಳೆಯ ನೇಮಕಾತಿ ಪದ್ಧತಿಯನ್ನು ಮರುಜಾರಿಗೊಳಿಸುವುದಾಗಿ ಭರವಸೆ ನೀಡಿದೆ.
ಏನಿದು ಅಗ್ನಿಪಥ್ ಯೋಜನೆ?
ಜೂನ್ 14, 2022ರಂದು ಕೇಂದ್ರ ಸರ್ಕಾರವು ಈ ಯೋಜನೆಯನ್ನು ಘೋಷಿಸಿದೆ. ಅಗ್ನಿಪಥ್ ಯೋಜನೆಯು ಹದಿನೇಳುವರೆಯಿಂದ 21 ವರ್ಷ ವಯಸ್ಸಿನ ಯುವಕರನ್ನು ಕೇವಲ ನಾಲ್ಕು ವರ್ಷಗಳ ಅವಧಿಗೆ ಸೇನೆಗೆ ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಅವರಲ್ಲಿ ಶೇ. 25ರಷ್ಟನ್ನು ಇನ್ನೂ 15 ವರ್ಷಗಳವರೆಗೆ ಉಳಿಸಿಕೊಳ್ಳುವ ಅವಕಾಶವಿದೆ. ಆದರೆ ಇದಕ್ಕೆ ಯುವಕರಿಂದ ಮಾತ್ರವಲ್ಲದೇ, ಮಾಜಿ ಸೈನಿಕರಿಂದ ಭಾರೀ ವಿರೋಧ ವ್ಯಕ್ತವಾಗಿದೆ.
