ಆಂಗ್ಲಭಾಷೆಯ ಜತೆಗೆ ಮಾತೃಭಾಷೆ ಕಡ್ಡಾಯವಾಗಬೇಕೆಂಬ ರಾಷ್ಟ್ರಕವಿ ಕುವೆಂಪು ಅವರ ಅಭಿಪ್ರಾಯಕ್ಕೆ ನನ್ನ ಸಹಮತವಿದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ಹೈಕೋರ್ಟ್‌ನಲ್ಲಿ ರಾಜ್ಯ ವಕೀಲರ ಪರಿಷತ್‌ನಿಂದ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
“ಕುವೆಂಪು ಅವರು ಆಂಗ್ಲಭಾಷೆಯ ಜತೆ ಮಾತೃಭಾಷೆ ಕಡ್ಡಾಯಗೊಳಿಸಬೇಕು ಎಂದಿದ್ದರು. ಅದಕ್ಕೆ ನನ್ನ ಬೆಂಬಲವಿದೆ. ಗುಜರಾತಿ ನನಗೆ ಮಾತೃಭಾಷೆಯಾಗಿತ್ತು, ಕನ್ನಡ ನನ್ನ ಕರ್ಮಭೂಮಿ ಭಾಷೆಯಾಗಿದೆ” ಎಂದು ನುಡಿದರು.
“ಕರ್ನಾಟಕದೊಂದಿಗೆ ನನಗೆ ಸಂಬಂಧವಿದ್ದು, ಗುಜರಾತ್ ನ್ಯಾಯಾಲಯಲ್ಲಿ ವಕೀಲನಾಗಿ ಸೇವೆ ಪ್ರಾರಂಭಿಸಿದ ಸಂದರ್ಭದಲ್ಲಿ ನವೀನ್ ಚಂದ್ರ ಲಾ ಫೌಂಡೇಷನ್ ವತಿಯಿಂದ ಫೆಲೋಶಿಪ್ (ಶಿಷ್ಯವೇತನ) ಲಭ್ಯವಾಗಿತ್ತು. ಈ ಫೆಲೋಶಿಪ್‌ಅನ್ನು ಸುಪ್ರಿಂ ಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಕನ್ನಡಿಗ ಎಂ ಎನ್ ವೆಂಕಟಾಚಲಯ್ಯ ಪ್ರದಾನ ಮಾಡಿದ್ದರು” ಎಂದು ಸ್ಮರಿಸಿದರು.
“ನಾನು ನ್ಯಾಯಮೂರ್ತಿಯಾಗಿ ನೇಮಕಗೊಂಡ ವೇಳೆ ಕನ್ನಡಿಗರಾಗಿದ್ದ ಎಂ ವೀರಪ್ಪ ಮೋಯ್ಲಿ ಅವರು ಕೇಂದ್ರ ಕಾನೂನು ಸಚಿವರಾಗಿದ್ದರು. ಗುಜರಾತ್ ಹೈಕೋರ್ಟ್‌ಗೆ ನ್ಯಾಯಮೂರ್ತಿಯಾಗಿ ನೇಮಕಗೊಂಡ ಬಳಿಕ ಕರ್ನಾಟಕ ಹೈಕೋರ್ಟ್‌ನ ಸಿಜೆ ಸೇವೆ ಸಲ್ಲಿಸಿದ್ದ ನ್ಯಾ ಡಿ ಎಚ್ ವಘೇಲಾ ಅವರೊಂದಿಗೆ ಮೊದಲ ಬಾರಿ ವಿಭಾಗೀಯ ಪೀಠ ಹಂಚಿಕೊಂಡಿದ್ದೆ” ಎಂದು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಬೀಡಿ ಕಾರ್ಮಿಕರಿಗೆ ಪರ್ಯಾಯ ಪರಿಹಾರ ನೀಡದೆ ಮಾರಾಟ ನಿಷೇಧ ವಿಧೇಯಕ ಜಾರಿ; ಕಾರ್ಮಿಕರ ವಿರೋಧ
ಈ ವೇಳೆ ಹೈಕೋರ್ಟ್ ನ್ಯಾಯಮೂರ್ತಿಗಳು, ಅಡ್ವೋಕೇಟ್ ಜನರಲ್ ಕೆ ಶಶಿಕಿರಣ ಶೆಟ್ಟಿ, ವಕೀಲರ ಪರಿಷತ್ ಅಧ್ಯಕ್ಷ ವಿಶಾಲ್ ರಘು ಸೇರಿದಂತೆ ಹಲವು ವಕೀಲರು ಇದ್ದರು.
