ಮಾಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡುತ್ತಿಲ್ಲ ಎಂದು ಆಗ್ರಹಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘದಿಂದ ಹುಮನಾಬಾದ್ ತಾಲೂಕಿನ ಸೀತಾಳಗೇರಾ ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಯಿತು.
ಈ ಸಂಬಂಧ ತಾಲೂಕು ಪಂಚಾಯತ್ ಇಒ ಅವರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯತ್ ಎಡಿ ಅವರಿಗೆ ಸಲ್ಲಿಸಿದರು.
ಸೀತಾಳಗೇರಾ ಗ್ರಾಮ ಪಂಚಾಯತನಲ್ಲಿ ಕೂಲಿ ಕಾರ್ಮಿಕರಿಗೆ ಕೆಲಸಕ್ಕೆ ಹೋಗುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೂಚಿಸಿದರು. ಆದರೆ ಸ್ಥಳಕ್ಕೆ ಹೋದಾಗ ಅಲ್ಲಿ ಯಂತ್ರಗಳನ್ನು ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ಅದನ್ನು ಕೂಲಿ ಕಾರ್ಮಿಕರು ಪ್ರಶ್ನಿಸಿದರೆ ಇದು ವೈಯಕ್ತಿಕ ಕಾಮಗಾರಿ ಎಂದು ಉತ್ತರಿಸಿದ್ದಾರೆ. ಕಾರ್ಮಿಕರು ಕೆಲಸ ನಿರ್ವಹಿಸದೆ ಹಾಜರಾತಿ ಹಾಕಿದ್ದಾರೆ. ನಿಮ್ಮ ಕೂಲಿ ಪಾವತಿ ಮಾಡಲಾಗುವುದೆಂದು ಕಾರ್ಮಿಕರಿಗೆ ವಾಪಸ್ ಮನೆಗೆ ಕಳಿಸಿದ್ದಾರೆ ಎಂದು ದೂರಿದರು.
ನಮೂನೆ-6ರ ಪ್ರಕಾರ ಕೂಲಿ ಕಾರ್ಮಿಕರಿಗೆ ಕೆಲಸ ನೀಡಬೇಕು. ವೈಯಕ್ತಿಕ ಕಾಮಗಾರಿ ಎಂದು ತಿಳಿಸಿ ಯಂತ್ರಬಳಕೆ ಮಾಡಿದ ಕಾಮಗಾರಿಯಲ್ಲಿ ಕೂಲಿ ಕಾರ್ಮಿಕರ ಹೆಸರುಗಳು ಸೇರಿಸಿದವರ ವಿರುದ್ಧ ಕ್ರಮ ಕೈಗೊಳಬೇಕು. ಎನ್ಎಎಂ.ಎಂಎಸ್. ಆಪ್‌ನಲ್ಲಿ ಕೂಲಿ ಕೆಲಸ ಮಾಡುವ ಕಾರ್ಮಿಕರ ಛಾಯಚಿತ್ರ ಹೇಗೆ ತೆಗೆಯಬೇಕು ಕುರಿತು ಮಾಹಿತಿ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಶ್ನಿಸದ ಸಂಸದರು, ಉತ್ತರಿಸದ ಪ್ರಧಾನಿ ಮತ್ತು ದಿಕ್ಕೆಟ್ಟ ದೇಶ
ಪ್ರತಿಭಟನೆಯಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘದ ಜಿಲ್ಲಾ ಸಂಯೋಜಕಿ ಸಪ್ನದೀಪಾ ಸೇರಿದಂತೆ ಸಂಘಟನೆಯ ಪ್ರಿಯಂಕಾ, ಸುಜಾತಾ, ಸುರೇಖಾ ಲಕ್ಷ್ಮಿ ಸಂಗೀತಾ, ರಾಜಕುಮಾರ್ ಇದ್ದರು.