ಮೈಸೂರು ನಗರದಲ್ಲಿ ತಾಪಮಾನ ಗಗನಕ್ಕೇರುತ್ತಿದ್ದು, ಬೇಸಿಗೆಯಲ್ಲಿ ಹಲವು ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ನಗರಕ್ಕೆ ಕುಡಿಯುವ ನೀರು ಪೂರೈಸುವ ಎರಡು ಪ್ರಮುಖ ಮೂಲಗಳಾದ ಕೆಆರ್‌ಎಸ್ ಮತ್ತು ಕಬಿನಿ ಅಣೆಕಟ್ಟುಗಳಲ್ಲಿ ನೀರಿನ ಮಟ್ಟವು ಪ್ರತಿದಿನ ಕುಸಿಯುತ್ತಿರುವುದರಿಂದ, ಮೈಸೂರು ಮಹಾನಗರ ಪಾಲಿಕೆ(ಎಂಸಿಸಿ)ಯ ನೀರು ಸರಬರಾಜು ವಿಭಾಗವಾದ ವಾಣಿ ವಿಲಾಸ ವಾಟರ್ ವರ್ಕ್ಸ್ ಹಲವಾರು ವಾರ್ಡ್‌ಗಳಿಗೆ ಪರ್ಯಾಯ ದಿನಗಳಲ್ಲಿ ನೀರು ಪೂರೈಸಲು ಪ್ರಾರಂಭಿಸಿದೆ.
ಮೈಸೂರು ನಗರ ಮತ್ತು ಸುತ್ತಮುತ್ತಲಿನ ಖಾಸಗಿ ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಕುಡಿಯುವ ನೀರಿನ ಬಿಕ್ಕಟ್ಟನ್ನು ನಿವಾರಿಸಲು ಎಂಸಿಸಿ 40 ಖಾಸಗಿ ಕೊಳವೆಬಾವಿಗಳನ್ನು ಬಳಸಿಕೊಳ್ಳಲು ಯೋಜಿಸಿದೆ.
ಗೌರಿಶಂಕರ ನಗರ, ವಿದ್ಯಾರಣ್ಯಪುರಂ, ಕನಕಗಿರಿ, ಕುವೆಂಪು ನಗರ, ಮೇಟಗಳ್ಳಿ, ಬಿಎಂಶ್ರೀ ನಗರ, ಚಿನ್ನಗಿರಿ ಕೊಪ್ಪಲು, ಟಿ ಕೆ ಲೇಔಟ್, ಕೆ ಜಿ ಕೊಪ್ಪಲು, ಕುಂಬಾರ ಕೊಪ್ಪಲು, ಎನ್ ಆರ್ ಮೊಹಲ್ಲಾ, ಗಾಂಧಿ ನಗರ, ರಾಘವೇಂದ್ರ ನಗರ, ಕ್ಯಾತಮಾರನಹಳ್ಳಿ, ವೀರಗೆರೆ, ವಿಜಯನಗರ 4ನೇ ಹಂತದ ಪ್ರದೇಶಗಳಿಗೆ ದಿನ ಬಿಟ್ಟು ದಿನ ನೀರು ಪೂರೈಕೆಯಾಗುತ್ತಿದೆ.
ಹಲವಾರು ವಾರ್ಡ್‌ಗಳ ನಿವಾಸಿಗಳು ಕೇವಲ ಎರಡು ಗಂಟೆಗಳ ಕಾಲ ಮಾತ್ರ ನೀರು ಪಡೆಯುತ್ತಿದ್ದಾರೆ. ನಗರದ ಸುತ್ತಲೂ ಅಭಿವೃದ್ಧಿಪಡಿಸಲಾದ 40ರಿಂದ 60ಕ್ಕೂ ಹೆಚ್ಚು ಲೇಔಟ್‌ಗಳು ಸರಿಯಾದ ಕುಡಿಯುವ ನೀರು ಸರಬರಾಜು ಸೌಲಭ್ಯವಿಲ್ಲದ ಕಾರಣ ಬೋರ್‌ವೆಲ್ ನೀರು ಸರಬರಾಜನ್ನು ಅವಲಂಬಿಸಿವೆ. ಕಾವೇರಿ ನಗರ, ಪ್ರಗತಿ ನಗರ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ನಗರದಂತಹ ಹೊಸ ಬಡಾವಣೆಗಳಲ್ಲಿ ನೀರಿನ ಕೊರತೆ ಉಲ್ಬಣಗೊಂಡಿದೆ.
ಮೈಸೂರು ಬಳಿಯ ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯ ಮತ್ತು ಎಚ್ ಡಿ ಕೋಟೆ ಬಳಿಯ ಕಬಿನಿ ಅಣೆಕಟ್ಟೆಯಿಂದ ನೀರು ಬಿಡುಗಡೆ ಮಾಡುತ್ತಿರುವುದರಿಂದ ನೀರಿನ ಮಟ್ಟವು ಕುಸಿಯುತ್ತಿದೆ. ಇದರಿಂದ ಬೇಸಿಗೆ ಪ್ರಾರಂಭವಾಗುವ ಮೊದಲೇ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹವು ಕಡಿಮೆ ಮಟ್ಟದಲ್ಲಿರುವುದು ನೀರು ಸರಬರಾಜು ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ. 13.5 ಲಕ್ಷ ಜನಸಂಖ್ಯೆ ಹೊಂದಿರುವ ಮೈಸೂರು ನಗರಕ್ಕೆ ವರ್ಷವಿಡೀ ಸುಮಾರು 3.5 ಟಿಎಂಸಿ ನೀರು ಬೇಕಾಗುತ್ತದೆ.
ಕಳೆದ ವರ್ಷ ಇದೇ ಅವಧಿಗೆ 108 ಅಡಿ ಇದ್ದ ಕೆಆರ್‌ಎಸ್ ಜಲಾಶಯದಲ್ಲಿ ಸೋಮವಾರದ ವೇಳೆಗೆ 90 ಅಡಿ ನೀರು ಸಂಗ್ರಹವಾಗಿದೆ. ಕಬಿನಿ ಜಲಾಶಯದ ಗರಿಷ್ಠ ಮಟ್ಟ 2,284 ಅಡಿ ಇದ್ದು, ಇಂದಿನ ನೀರಿನ ಮಟ್ಟ 2,251.4 ಅಡಿ ಇದೆ. ಮುಂಗಾರು ಮಳೆಯು ವಿಫಲವಾದ ಕಾರಣ ಅಂತರ್ಜಲ ಮಟ್ಟದ ಮೇಲೂ ಪರಿಣಾಮ ಬೀರಿದೆ.
ಪ್ರಸ್ತುತ, ವಾಣಿ ವಿಲಾಸ ವಾಟರ್ ವರ್ಕ್ಸ್ ಅಧಿಕಾರಿಗಳು 65 ವಾರ್ಡ್ ಪ್ರದೇಶಗಳಿಗೆ ಪ್ರತಿದಿನ 235 ಮಿಲಿಯನ್ ಲೀಟರ್ (ಎಂಎಲ್‌ಡಿ) ನೀರನ್ನು ಪೂರೈಸುತ್ತಿದ್ದಾರೆ. ಇದು ನಗರದ ಹೊರವಲಯದಲ್ಲಿರುವ ವಸತಿ ಪ್ರದೇಶಗಳಿಗೆ ಪ್ರತಿದಿನ ಇನ್ನೂ 60 ಎಂಎಲ್‌ಡಿ ನೀರನ್ನು ಪೂರೈಸುತ್ತದೆ. ಕಾವೇರಿ ನದಿ ದಡದಲ್ಲಿರುವ ಬಿದರಗೋಡು ಜಾಕ್ ವೆಲ್ (60 ಎಂಎಲ್‌ಡಿ), ಹೊಂಗಳ್ಳಿ 100 ಎಂಎಲ್‌ಡಿ, ಮೇಳಾಪುರ 100 ಎಂಎಲ್‌ಡಿ ಮತ್ತು ಬೆಳಗೊಳ 45 ಎಂಎಲ್‌ಡಿ ಪಂಪಿಂಗ್ ಕೇಂದ್ರಗಳಿಂದ ಪ್ರತಿದಿನ 305 ಎಂಎಲ್‌ಡಿ ನೀರನ್ನು ಪಡೆಯುತ್ತದೆ.
“ಎರಡು ಅಣೆಕಟ್ಟುಗಳಲ್ಲಿ ಪ್ರಸ್ತುತ ಇರುವ ನೀರನ್ನು ಜಲಮೂಲದಿಂದ ಮೇ ಅಂತ್ಯದವರೆಗೆ ನೀರು ಸರಬರಾಜು ನಿರ್ವಹಿಸಬಹುದು. ಈ ಅಣೆಕಟ್ಟುಗಳ ಜಲಾನಯನ ಪ್ರದೇಶಗಳಲ್ಲಿ ಮಳೆಯಾಗದಿದ್ದರೆ ಜೂನ್‌ನಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ” ಎಂದು ವಾಣಿ ವಿಲಾಸ ವಾಟರ್ ವರ್ಕ್ಸ್ ಕಾರ್ಯನಿರ್ವಾಹಕ ಎಂಜಿನಿಯರ್ ಅಶ್ವಿನ್ ಹೇಳಿದರು.
“ನಗರದಲ್ಲಿನ ನೀರಿನ ಸಮಸ್ಯೆಯನ್ನು ಕಡಿಮೆ ಮಾಡಲು, ನಗರ ನಾಗರಿಕ ಸಂಸ್ಥೆ 40ಕ್ಕೂ ಹೆಚ್ಚು ಖಾಸಗಿ ಬೋರ್‌ವೆಲ್ ಮಾಲೀಕರು ಮತ್ತು ಖಾಸಗಿ ನೀರಿನ ಟ್ಯಾಂಕರ್ ಮಾಲೀಕರೊಂದಿಗೆ ಚರ್ಚಿಸುತ್ತಿದೆ. ನಿಷ್ಕ್ರಿಯಗೊಂಡ ಕೊಳವೆಬಾವಿಗಳ ಮರುಪೂರಣ, ದುರಸ್ತಿಯಂತಹ ಕ್ರಮಗಳನ್ನೂ ಕೂಡ ಪ್ರಾರಂಭಿಸಲಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕೆಆರ್‌ಎಸ್ ಪಕ್ಷವನ್ನು ಬೆಂಬಲಿಸುವಂತೆ ಫೆ.29ರಿಂದ ಜಾಥಾ
“ಕುಡಿಯುವ ನೀರಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ, ನೀರಿನ ಅಡೆತಡೆಗಳ ದೂರುಗಳನ್ನು ಸ್ವೀಕರಿಸಲು ಪ್ರಾರಂಭಿಸಿದೆ. ಮೈಸೂರು ಮಹಾನಗರ ಪಾಲಿಕೆಯು ತನ್ನ ಪಂಪಿಂಗ್ ಕೇಂದ್ರಗಳಲ್ಲಿ 305 ಎಂಎಲ್‌ಡಿ ನೀರನ್ನು ಪಂಪ್ ಮಾಡುತ್ತಿದ್ದರೂ ಪ್ರತಿದಿನ ಕೇವಲ 265 ಎಂಎಲ್‌ಡಿ ನೀರನ್ನು ಪಡೆಯುತ್ತಿರುವುದರಿಂದ ನೀರು ವಿತರಣಾ ವ್ಯವಸ್ಥೆಯಲ್ಲಿ ಸೋರಿಕೆಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು” ಎಂದು ಮಾಜಿ ಮೇಯರ್ ಶಿವಕುಮಾರ್ ಹೇಳಿದರು.
ಮಹಾಮಗರ ಪಾಲಿಕೆಗೆ ಟ್ಯಾಂಕರ್‌ಗಳ ಕೊರತೆ ಎದುರಾಗಿದ್ದು, ಖಾಸಗಿ ಟ್ಯಾಂಕರ್‌ಗಳನ್ನು ಬಾಡಿಗೆಗೆ ಪಡೆಯಲು ಸಿದ್ಧವಾಗಿರಬೇಕು. ಈಗಾಗಲೇ ನೀರು ಸರಬರಾಜು ಅಡೆತಡೆಗಳನ್ನು ಎದುರಿಸುತ್ತಿರುವ ನಿವಾಸಿಗಳ ನೀರಿನ ತೊಂದರೆಯನ್ನು ನಿವಾರಿಸಲು ಖಾಸಗಿ ಬೋರ್ ವೆಲ್ ಮಾಲೀಕರೊಂದಿಗೆ ಚರ್ಚಿಸಬೇಕು” ಎಂದು ಹೇಳಿದರು.