ರಾಜ್ಯಸಭಾ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಆರು ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡಿದ್ದು, ಅಲ್ಲಿನ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಈ ಬೆನ್ನಲ್ಲೇ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜೈ ರಾಮ್ ಠಾಕೂರ್ ಅವರು ರಾಜ್ಯಪಾಲ ಶಿವ ಪ್ರತಾಪ್ ಶುಕ್ಲಾ ಅವರನ್ನು ಭೇಟಿ ಮಾಡಿದ್ದಾರೆ. ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಮಂದಾಗಬಹುದು ಎಂಬ ಊಹಾಪೋಹಗಳು ಎಚ್ಚಾಗಿವೆ.
ಬಿಜೆಪಿ ಅಭ್ಯರ್ಥಿ ಹರ್ಷ್ ಮಹಾಜನ್ ಮತ್ತು ಕಾಂಗ್ರೆಸ್‌ನ ಅಭಿಷೇಕ್ ಮನು ಸಿಂಘ್ವಿ ರಾಜ್ಯಸಭಾ ಸ್ಥಾನಕ್ಕೆ ಸ್ಪರ್ಧಿಸಿದ್ದರು. 68 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಕಾಂಗ್ರೆಸ್ ಹೆಚ್ಚು ಶಾಸಕರನ್ನು ಹೊಂದಿದ್ದರೂ, ಕಾಂಗ್ರೆಸ್ ಶಾಸಕರಾದ ರಾಜಿಂದರ್ ರಾಣಾ, ಸುಧೀರ್ ಶರ್ಮಾ, ಚೈತನ್ಯ ಶರ್ಮಾ, ಇಂದರ್ ದತ್ ಲಖನ್‌ಪಾಲ್, ದೇವಿಂದರ್ ಕುಮಾರ್ ಭುಟ್ಟೋ ಮತ್ತು ರವಿ ಠಾಕೂರ್ ಬಿಜೆಪಿಗೆ ಅಡ್ಡಮತದಾನ ಮಾಡಿದ್ದಾರೆ. ಅಲ್ಲದೆ, ಸ್ವತಂತ್ರ ಶಾಸಕರಾದ ಆಶಿಶ್ ಶರ್ಮಾ, ಕೆ ಎಲ್ ಠಾಕೂರ್ ಮತ್ತು ಹೊಶ್ಯಾರ್ ಸಿಂಗ್ ಅವರು ಕೂಡ ಮಹಾಜನ್ ಪರವಾಗಿ ಮತ ಚಲಾಯಿಸಿದರು. ಪರಿಣಾಮ, ಬಿಜೆಪಿಯ ಮಹಾಜನ್ ಗೆಲುವು ಸಾಧಿಸಿದರು.
“ರಾಜ್ಯಸಭೆಯಲ್ಲಿ ಅಡ್ಡ ಮತದಾನ ನಡೆದರೆ ಅದು ಚುನಾವಣಾ ಆಯೋಗದ ಸ್ಪಷ್ಟ ಮಾರ್ಗಸೂಚಿಗಳ ಪ್ರಕಾರ ಅಸಿಂಧುವಲ್ಲ” ಎಂದು ಠಾಕೂರ್ ಪ್ರತಿಪಾದಿಸಿದರು.
“ಕಾಂಗ್ರೆಸ್ ಈಗ ಹತಾಶೆಗೊಂಡಿದೆ… ಅವರ ಸರ್ಕಾರವು ಅನಿಶ್ಚಿತವಾಗಿದೆ. ಅದಕ್ಕೆ, ನಾವು ಕಾರಣರಲ್ಲ. ಅವರದ್ದೇ ಕಾರಣಗಳಿಂದಾಗಿ ತೊಂದರೆಗೆ ಸಿಲುಕಿದೆ. ಕಾಂಗ್ರೆಸ್ ಜನಾದೇಶ ಕಳೆದುಕೊಂಡಿದೆ” ಎಂದು ಠಾಕೂರ್ ಹೇಳಿದ್ದಾರೆ.
“ವಿಧಾನಸಭೆಯಲ್ಲಿ ಕಾಂಗ್ರೆಸ್ ಭಾರಿ ಬಹುಮತವನ್ನು ಹೊಂದಿದ್ದರೂ ಸಹ ಬಿಜೆಪಿ ಅಭ್ಯರ್ಥಿ ಹರ್ಷ್ ಮಹಾಜನ್ ಅವರು ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ. ಇದೀಗ, ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದಲ್ಲಿ ಉಳಿಯಲು ಯಾವುದೇ ಹಕ್ಕಿಲ್ಲ” ಎಂದು ಠಾಕೂರ್ ಹೇಳಿದ್ದಾರೆ.
“ಕಳೆದ ಎರಡು ದಿನಗಳಲ್ಲಿ ಏನಾಯಿತು” ಎಂಬುದರ ಬಗ್ಗೆ ರಾಜ್ಯಪಾಲರಿಗೆ ತಿಳಿಸಿರುವುದಾಗಿ ಅವರು ಹೇಳಿದ್ದಾರೆ.
“ಬಜೆಟ್ ಅಧಿವೇಶನದಲ್ಲಿ, ಕಟ್ ಮೋಷನ್ ಮೇಲೆ ಮತದಾನ ನಡೆಯಲಿದೆ. ಆ ಸಮಯದಲ್ಲಿ ಧ್ವನಿ ಮತದಾನದ ಬಗ್ಗೆ ವಿರೋಧ ಪಕ್ಷಕ್ಕೆ ಮನವರಿಕೆಯಾಗದಿದ್ದರೆ, ಮತಗಳ ವಿಭಜನೆಯನ್ನು ಕೋರುವ ಹಕ್ಕಿದೆ,” ಠಾಕೂರ್ ಹೇಳಿದರು. (ಸರ್ಕಾರವು ಮಂಡಿಸುತ್ತಿರುವ ಹಣಕಾಸು ಮಸೂದೆಯಲ್ಲಿನ ಅಂಶಗಳನ್ನು ವಿರೋಧಿಸಲು ಸದನದ ಸದಸ್ಯರಿಗೆ ಕಟ್ ಮೋಷನ್ ಅವಕಾಶ ನೀಡುತ್ತದೆ.)
“ನಾವು ಎರಡು ಬಾರಿ ಮತಗಳ ವಿಭಜನೆಗಾಗಿ ಮನವಿ ಮಾಡಿದ್ದೇವೆ. ಆದರೆ ಕೇಳಲಿಲ್ಲ ಮತ್ತು ಸದನವನ್ನು ಮುಂದೂಡಲಾಯಿತು. ನಾವು ಸಭಾಧ್ಯಕ್ಷರನ್ನು ಭೇಟಿ ಮಾಡಲು ಹೊರಟಾಗ ಮಾರ್ಷಲ್‌ಗಳು ನಮ್ಮನ್ನು ತಡೆದರು. ಇದು ದುರದೃಷ್ಟಕರ,” ಎಂದು ಠಾಕೂರ್ ಸೇರಿಸಿದರು.
“ಮತಗಳ ವಿಭಜನೆಯನ್ನು ತಪ್ಪಿಸಲು ಸ್ಪೀಕರ್ ನಮ್ಮ ಶಾಸಕರನ್ನು ಸದನದಿಂದ ಅಮಾನತುಗೊಳಿಸಬಹುದು” ಎಂದು ಅವರು ಆರೋಪಿಸಿದ್ದಾರೆ.