ಗದಗ ಜಿಲ್ಲೆಯ ರೋಣ ನಗರದಲ್ಲಿ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕಾಗಿ ‘ಥರ್ಡ್ ಐ’ ತಂತ್ರಜ್ಞಾನವನ್ನು ಮಾರ್ಚ್ 1ರಿಂದ ಜಾರಿಗೆ ಬರಲಿದೆ ಎಂದು ರೋಣ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವನಿಟ್ಟಿನಲ್ಲಿ ಇತ್ತೀಚೆಗೆ ರಾಜ್ಯದಲ್ಲಿ ಪರಿಚಯಿಸಿದ ಸಿಸಿಟಿವಿ ಕ್ಯಾಮರಾ ಆಧಾರಿತ ನೂತನ ತಂತ್ರಜ್ಞಾನ ವ್ಯವಸ್ಥೆಯೇ ಈ ಥರ್ಡ್ ಐ. ಈಗಾಗಲೇ ರೋಣ ನಗರದ ಪ್ರಮುಖ ಸ್ಥಳಗಳಲ್ಲಿ ಥರ್ಡ್ ಐ ತಂತ್ರಜ್ಞಾನ ಅಳವಡಿಸಲಾಗಿದ್ದು, ಇನ್ನು ಮುಂದೆ ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಸವಾರರ ಮೇಲೆ ಇಲಾಖೆ ಹದ್ದಿನ ಕಣ್ಣಿಡಲಿದೆ ಎಂದು ಪೊಲೀಸರು ಹೇಳಿದ್ದಾರೆ.
‘ಥರ್ಡ್ ಐ’ ಜಾರಿ ಪೂರ್ವದಲ್ಲಿ ಇಲಾಖೆಯು ಸಾರ್ವಜನಿಕರಿಗೆ ಈ ಕುರಿತು ಜಾಗೃತಿ ಮೂಡಿಸಿದ್ದು, ವಾಹನ ಸವಾರರು ರಸ್ತೆ ಸಂಚಾರ ನಿಯಮಗಳಾದ ಹೆಲ್ಮೆಟ್ ಧರಿಸುವುದು, ಸೀಟ್ ಬೆಲ್ಟ್ ಧರಿಸುವುದು, ಟ್ರಿಪಲ್ ರೈಡಿಂಗ್ ನಿಷೇಧ, ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತ ವಾಹನ ಚಲಾಯಿಸದಿರುವುದು ಸೇರಿದಂತೆ ವಿವಿಧ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದ್ದಾರೆ.
ಒಂದು ವೇಳೆ ನಿಯಮ ಉಲ್ಲಂಘಿಸಿದಲ್ಲಿ ದಂಡ ಕಟ್ಟಲು ನೋಟಿಸ್ ನೀಡಲಾಗುವುದು ಎಂದು ರೋಣ ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರಿಗೆ ಪ್ರಕಟಣೆ ಮೂಲಕ ತಿಳಿಸಲಾಗಿದೆ.