ರಾಜ್ಯದಲ್ಲಿರುವ ಅಂಗಡಿ ಮುಂಗಟ್ಟುಗಳ ಮೇಲಿರುವ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡದಲ್ಲಿ ಮತ್ತು ಉಳಿದ ಶೇ.40 ರಷ್ಟು ಭಾಗದಲ್ಲಿ ಇತರ ಭಾಷೆಗಳಲ್ಲಿ ಬರೆಯಿಸಲು ರಾಜ್ಯ ಸರ್ಕಾರ ಆದೇಶಿಸಿದ್ದು, ಆ ಪ್ರಕಾರ ಬೀದರ ನಗರ ಮತ್ತು ಜಿಲ್ಲೆಯಾದ್ಯಂತ ಎಲ್ಲಾ ಅಂಗಡಿ ಮಳಿಗೆಗಳ ನಾಮಫಲಕಗಳನ್ನು ಕನ್ನಡದಲ್ಲಿ ಬರೆಸಲು ಸಂಘ ಸಂಸ್ಥೆಗಳು ಮಾಲೀಕರು ತಕ್ಷಣ ಕ್ರಮ ಜರುಗಿಸಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಆಗ್ರಹಿಸಿದ್ದಾರೆ.
“ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಇರುವುದನ್ನು ಅಂಗಡಿ ಮಾಲೀಕರು ಅರ್ಥ ಮಾಡಿಕೊಳ್ಳಬೇಕು, ಕನ್ನಡ ನಾಡಿನ ನೆಲ, ಜಲ, ಭಾಷೆಗೆ ಧಕ್ಕೆಯಾಗದಂತೆ ನಾವೆಲ್ಲರೂ ನೋಡಿಕೊಳ್ಳಬೇಕಾಗಿದೆ. ಅಂಗಡಿ ಮಾಲೀಕರು ಸರ್ಕಾರದ ಆದೇಶದ ಪ್ರಕಾರ ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿ, ಮುಗ್ಗಟ್ಟಿನ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಪ್ರಥಮಾದ್ಯತೆಯಲ್ಲಿ ಬರೆಯಿಸುವ ಮೂಲಕ ಕನ್ನಡದ ಅಭಿಮಾನವನ್ನು ಮೆರೆಯಬೇಕು” ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಸರ್ಕಾರದ ಆದೇಶದ ಹೊರತಾಗಿಯೂ ಸರ್ಕಾರದ ಆದೇಶದ ವಿರುದ್ಧ ಕನ್ನಡೇತರ ನಾಮಫಲಕಗಳನ್ನು ಹೊಂದಿದ್ದರೆ ಅಂತಹವರ ವಿರುದ್ಧ ಕನ್ನಡ ಸಾಹಿತ್ಯ ಪರಿಷತ್ತು ಹೋರಾಟ ಮಾಡುತ್ತದೆ ಮತ್ತು ಯಾವ ಅಂಗಡಿಯ ನಾಮಫಲಕಗಳಲ್ಲಿ ಸಂಪೂರ್ಣ ಕನ್ನಡಕ್ಕೆ ಆದ್ಯತೆ ನೀಡಲಾಗಿದೆಯೋ ಅಂತಹ ನಾಮಫಲಕಗಳನ್ನು ಗುರುತಿಸಿ ಕನ್ನಡ ಸಾಹಿತ್ಯ ಪರಿಷತ್ತು ಅವರನ್ನು ಗೌರವಿಸುತ್ತದೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಒಂದೇ ಕುಟುಂಬದ ನಾಲ್ವರ ಸಜೀವ ದಹನ ಪ್ರಕರಣ; ಅಪರಾಧಿಗೆ ಜೀವಾವಧಿ ಶಿಕ್ಷೆ
“ಇದರ ಜೊತೆಗೆ ಸರ್ಕಾರಿ, ಅರೆಸರ್ಕಾರಿ, ಸರ್ಕಾರದ ಅನುದಾನ ಪಡೆಯುವ ಕಚೇರಿಗಳು, ಶಾಲಾ ಕಾಲೇಜುಗಳು ತಮ್ಮ ಸಂಸ್ಥೆಯ ನಾಮಫಲಕದಲ್ಲಿ ಕನ್ನಡಕ್ಕೆ ಪ್ರಥಮಾದ್ಯತೆಯನ್ನು ನೀಡಿ ಬರೆಯಿಸಬೇಕು. ಅಧಿಕಾರಿಗಳೂ ಸಹ ಕೋಣೆಯ ಎದುರು ಅಂಟಿಸಿರುವ ಫಲಕಗಳು, ಮೇಜಿನ ಮೇಲೆ ಇಟ್ಟಿರುವ ನೇಮ್ ಪ್ಲೇಟ್ ಗಳು ( ಹೆಸರು ಸೂಚನಾ ಫಲಕಗಳು) ಸಹ ಕನ್ನಡದಲ್ಲಿ ಬರೆಯಿಸಬೇಕು ಎಂದು ಚನ್ನಶೆಟ್ಟಿ ಆಗ್ರಹಿಸಿದ್ದಾರೆ.