ರಾಜ್ಯ ಸರ್ಕಾರದ ಆದೇಶದಂತೆ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಬಳಸದ, ಅನ್ಯ ಭಾಷೆಯ ನಾಮಫಲಕಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಬಾಗಲಕೋಟೆ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದೆ.
ರಾಜ್ಯ ಸರ್ಕಾರದ ಆದೇಶದಂತೆ ಬಾಗಲಕೋಟೆ ನಗರದಲ್ಲಿ ನಗರಸಭೆ ಮತ್ತು ಪೊಲೀಸ್ ಇಲಾಖೆ ಯಾವುದೇ ಅನ್ಯ ಭಾಷೆಯ ನಾಮಫಲಕಗಳನ್ನು ತೆರವುಗೊಳಿಸದೇ ಇರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸುತ್ತದೆ ಎಂದಿದ್ದಾರೆ.
ಅಲ್ಲದೇ ಮನವಿಯಲ್ಲಿ, ಕಡ್ಡಾಯ ಕನ್ನಡ ನಾಮಫಲಕಗಳನ್ನು ಹಾಕುವಂತೆ 2023ರ ಡಿಸೇಂಬರ್ 27ರಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಐತಿಹಾಸಿಕ ಹೋರಾಟದ ಫಲಶೃತಿಯಾಗಿ ರಾಜ್ಯ ಸರ್ಕಾರ, 2023 ಡಿ.28ರಂದು ಶೇ.60ರಷ್ಟು ಕನ್ನಡ ಬಳಸುವಂತೆ ಸುಗ್ರೀವಾಜ್ಞೆ ಹೊರಡಿಸಿತ್ತು. ಸದರಿ ಸುಗ್ರೀವಾಜ್ಞೆಗೆ ರಾಜ್ಯಪಾಲರ ಸಹಿ ಹಾಕದೇ ಅಧಿವೇಶನದಲ್ಲಿ ಅಂಗೀಕಾರಗೊಳಿಸಿ ಎಂದು ಪ್ರತಿಕ್ರಿಯಿಸಿದ ನಂತರ ರಾಜ್ಯ ಸರ್ಕಾರ ಇತ್ತೀಚೆಗೆ ನಡೆದ ಬಜೆಟ್ ಅಧಿವೇಶನದಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ಅಧಿನಿಯಮ 2024ನ್ನು ಅಂಗೀಕರಿಸಿ ಜಾರಿಗೆ ತಂದು 2024,ಫೆ.28ರ ಒಳಗಾಗಿ ರಾಜ್ಯದ ಎಲ್ಲ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಸಬೇಕು ಇಲ್ಲದಿದ್ದರೆ ದಂಡದ ಜೊತೆಗೆ ಪರವಾನಗಿ ರದ್ದುಗೊಳಿಸಬೇಕೆಂದು ಆದೇಶವಿದೆ ಎಂದು ತಿಳಿಸಿರುವ ಕರವೇ,
ತಕ್ಷಣವೇ ನಗರಸಭೆ ಮತ್ತು ಆರಕ್ಷಕ ಇಲಾಖೆ ಎಚ್ಚೆತ್ತುಕೊಂಡು ಅನ್ಯ ಭಾಷೆಯ ನಾಮಫಲಕಗಳನ್ನು ತೆರವುಗೊಳಿಸದಿದ್ದರೆ 2023ರ ಡಿ.27ರಂದು ಬೆಂಗಳೂರಿನಲ್ಲಿ ನಡೆದ ಹೋರಾಟದ ಮಾದರಿಯಲ್ಲಿಯೇ ಮತ್ತೇ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದೆ.
ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಅಧ್ಯಕ್ಷ ಬಸವರಾಜ.ಡಿ, ರಾಹುಲ್ ಶೆಟ್ಟರ್, ನಾಗರಾಜ ಜಾಲಗಾರ, ಬಸವರಾಜ್ ಅಂಬಿಗೇರ, ಸಂಗಮೇಶ ಅಂಬಿಗೇರ ಇತರರು ಉಪಸ್ಥಿತರಿದ್ದರು.