ನಕಲಿ ದಾಖಲೆ ಸೃಷ್ಟಿ ಮಾಡಿ ದಂಪತಿಯೊಬ್ಬರು ರಾಷ್ಟ್ರೀಕೃತ ಬ್ಯಾಂಕ್‌ಗಳು, ಪ್ರಾದೇಶಿಕ ಸಹಕಾರಿ ಬ್ಯಾಂಕ್‌ಗಳು ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳು ಸೇರಿದಂತೆ ಒಟ್ಟು 15 ಬ್ಯಾಂಕ್‌ಗಳಲ್ಲಿ ಕೋಟ್ಯಾಂತರ ರೂಪಾಯಿ ಸಾಲ ಮಾಡಿ ವಂಚಿಸಿದ್ದಾರೆ.
ಕೆ.ಎಸ್.ನಾಗೇಶ್ ಮತ್ತು ಸುಮಾ.ಬಿ.ಎಸ್ ದಂಪತಿ ಸಾಲ ಮಾಡಿ ಬ್ಯಾಂಕ್‌ಗಳಿಗೆ ವಂಚನೆ ಮಾಡಿದವರು. ದಂಪತಿ ಒಂದೇ ಆಸ್ತಿಯನ್ನು ಅಡವಿಟ್ಟು ಮತ್ತು ಇಲ್ಲದ ಆಸ್ತಿಯ ಬಗ್ಗೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಬ್ಯಾಂಕ್‌ಗಳಲ್ಲಿ ಕೋಟಿ ಕೋಟಿ ಸಾಲ ಮಾಡಿದ್ದಾರೆ. ಜತೆಗೆ, ಶ್ರೀನಿಧಿ ಮ್ಯಾನುಫ್ಯಾಕ್ಚುರರ್ಸ್ ಮತ್ತು ಶ್ರೀನಿಧಿ ಮಸಾಲಾ ಕಂಪನಿಗಳಿಗೆ ಯಂತ್ರೋಪಕರಣಗಳನ್ನು ಖರೀದಿ ಮಾಡಲು ದಂಪತಿ ಸಾಲ ಪಡೆದಿದ್ದರು.
ಸಾಲ ಮತ್ತು ಬಡ್ಡಿಯನ್ನು ವಸೂಲಿ ಮಾಡಲು 15 ಕ್ಕೂ ಹೆಚ್ಚು ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಬೆಂಗಳೂರು ದಕ್ಷಿಣ ತಾಲ್ಲೂಕಿನ ಬೇಗೂರಿನಲ್ಲಿ ಆಸ್ತಿಯನ್ನು ಜಪ್ತಿ ಮಾಡಲು ಹೋದಾಗ ಈ ವಿಚಾರ ಬೆಳಕಿಗೆ ಬಂದಿದೆ. ಈಗಾಗಲೇ ಅನೇಕ ಹಣಕಾಸು ಸಂಸ್ಥೆಗಳಿಗೆ ಆ ಜಾಗವನ್ನು ಒತ್ತೆ ಇಟ್ಟಿರುವುದು ತಿಳಿದುಬಂದಿದೆ.
ಬೇಗೂರು ಸಬ್ ರಿಜಿಸ್ಟ್ರಾರ್ ಕಚೇರಿ, ಬಿಬಿಎಂಪಿ ಹಾಗೂ ಬಿಡಿಎಗಳಲ್ಲಿ ದಾಖಲೆಗಳನ್ನು ಪರಿಶೀಲಿಸಿದಾಗ, ಬೇಗೂರಿನಲ್ಲಿ ನಾನಾ ನಂಬರ್‌ಗಳಲ್ಲಿ ತೋರಿಸಿರುವ ಜಮೀನು ಮತ್ತು ಸೈಟ್‌ಗಳ ದಾಖಲೆಗಳು ನಕಲಿ ಎಂದು ತಿಳಿದುಬಂದಿದೆ.
ಯಾವ ಯಾವ ಬ್ಯಾಂಕ್‌ನಲ್ಲಿ ಎಷ್ಟು ಸಾಲ?
ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ ಆಪರೇಟಿವ್‌ನಿಂದ ₹1.30 ಕೋಟಿ, ತುಮಕೂರು ಧಾನ್ಯ ವ್ಯಾಪಾರಿಗಳ ಸಹಕಾರಿ ಬ್ಯಾಂಕ್‌ನಿಂದ ₹2.09 ಕೋಟಿ, ಕೋಟೇಶ್ವರ ಸಹಕಾರಿ ಬ್ಯಾಂಕ್‌ನಿಂದ ₹1.88 ಕೋಟಿ, ತುಮಕೂರು ವೀರಶೈವ ಸಹಕಾರಿ ಬ್ಯಾಂಕ್‌ನಿಂದ ₹1 ಕೋಟಿ ಹಾಗೂ ಸಿಂಡಿಕೇಟ್ ಬ್ಯಾಂಕ್‌ನಿಂದ ₹95 ಲಕ್ಷ ಸಾಲವನ್ನು ದಂಪತಿ ಪಡೆದಿದ್ದರು.
ಈ ಸುದ್ದಿ ಓದಿದ್ದೀರಾ? ಕುಡಿಯುವ ನೀರು ಕೊಡದೆ ಯಾವ ಬ್ರ್ಯಾಂಡ್ ಬೆಂಗಳೂರು ಮಾಡ್ತೀರಾ; ಮೋಹನ್ ದಾಸರಿ ಪ್ರಶ್ನೆ
ಅಲ್ಲದೇ, ಬನಶಂಕರಿ ಸಹಕಾರಿ ಬ್ಯಾಂಕ್, ಬಿಡಿಸಿಸಿ ಬ್ಯಾಂಕ್, ಟಾಟಾ ಕ್ಯಾಪಿಟಲ್, ಕಾರ್ಪೊರೇಷನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಲಕ್ಷ್ಮೀ ವಿಲಾಸ್ ಬ್ಯಾಂಕ್, ಬನಶಂಕರಿ ಮಹಿಳಾ ಸಹಕಾರಿ ಬ್ಯಾಂಕ್, ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್, ಕೋಟೇಶ್ವರ ಸಹಕಾರಿ ಬ್ಯಾಂಕ್, ನ್ಯಾಷನಲ್ ಸಹಕಾರಿ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಮಣಪ್ಪುರಂ ಫೈನಾನ್ಸ್, ಮಹಿಳಾ ಸಹಕಾರಿ ಬ್ಯಾಂಕ್, ಕೆನರಾ ಬ್ಯಾಂಕ್ ಮತ್ತು ಅಲಹಾಬಾದ್ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ದಂಪತಿ ವಂಚಿಸಿದ್ದಾರೆ ಎಂದು ತಿಳಿದುಬಂದಿದೆ.
ದಂಪತಿ ವಿರುದ್ಧ 2018 ಮತ್ತು 2022ರ ನಡುವೆ ಜಯನಗರ ಪೊಲೀಸ್ ಠಾಣೆಯಲ್ಲಿ ಎರಡು, ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ನಾಲ್ಕು, ಪುಟ್ಟೇನಹಳ್ಳಿ ಮತ್ತು ಶೇಷಾದ್ರಿಪುರಂ ಠಾಣೆಗಳಲ್ಲಿ ತಲಾ ಒಂದು ಎಫ್‌ಐಆರ್ ದಾಖಲಾಗಿವೆ.
ಈ ನ್ಯಾಯಾಲಯಗಳಿಗೆ ಜಯನಗರ ಪೊಲೀಸರು ಸಲ್ಲಿಸಿದ ವರದಿಯ ಪ್ರಕಾರ, ದಂಪತಿ ವಿರುದ್ಧ ಒಟ್ಟು ಎಂಟು ಎಫ್‌ಐಆರ್ ದಾಖಲಾಗಿದೆ. ನಿರೀಕ್ಷಣಾ ಜಾಮೀನಿಗಾಗಿ ದಂಪತಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.