ರಾಜ್ಯಸಭೆ ಚುನಾಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಅಹ್ಮದ್ ಗೆದ್ದ ಬಳಿಕ, ಅವರ ಬೆಂಬಲಿಗರು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಮಾಧ್ಯಮಗಳು ಎಬ್ಬಿಸಿದ ಗದ್ದಲ, ರಾಜ್ಯದಲ್ಲಿ ಇನ್ನೂ ಸದ್ದು ಮಾಡುತ್ತಿದೆ. ದಾವಣಗೆರೆ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲೂ ಈ ವಿಚಾರವಾಗಿ ಗದ್ದಲ ನಡೆದಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಜಟಾಪಟಿ ನಡೆದಿದೆ.
ಸಾಮಾನ್ಯಸಭೆಗೆ ಮುನ್ನವೇ ಕೈಗೆ ಕಪ್ಪು ಬಟ್ಟೆ ಧರಿಸಿ ಬಿಜೆಪಿ ಸದಸ್ಯರು ಆಗಮಿಸಿದ್ದರು. ನಾಡಗೀತೆ, ರಾಷ್ಟ್ರಗೀತೆ ಹಾಡು ಮುಗಿಯುತ್ತಿದ್ದಂತೆಯೇ, “ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದು ಈ ನಾಡಿಗೆ ಮಾಡಿದ ದ್ರೋಹ, ಈ ಬಗ್ಗೆ ಖಂಡನಾ ನಿರ್ಣಯ ತೆಗೆದುಕೊಳ್ಳಬೇಕು” ಎಂದು ಪಟ್ಟುಹಿಡಿದರು.
ಆಡಳಿತ ಪಕ್ಷದ ಸದಸ್ಯ ಎ. ನಾಗರಾಜ್ ಹಾಗೂ ಗಡಿಗುಡಾಳ್ ಮಂಜುನಾಥ್ ಮಾತನಾಡಿ, “ಈ ಪ್ರಕರಣ ಇನ್ನು ತನಿಖಾ ಹಂತದಲ್ಲಿದೆ. ಈಗ ಖಂಡನಾ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲ” ಎಂದಾಗ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದ ಜೋರಾಯಿತು. ಈ ವೇಳೆ ʼದೇಶದ್ರೋಹಿಗಳನ್ನು ಬೆಂಬಲಿಸುವ ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರʼ ಎಂದು ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರೆ, ʼನಾಡಗೀತೆ, ರಾಷ್ಟ್ರಗೀತೆ ಹಾಡುವಾಗ ಕೈಗೆ ಕಪ್ಪು ಬಟ್ಟೆ ಧರಿಸಿದ್ದ ಬಿಜೆಪಿಗರು ರಾಷ್ಟ್ರಗೀತೆಗೆ ಅಪಚಾರ ಎಸಗಿದ್ದಾರೆʼ ಎಂದು ಕಾಂಗ್ರೆಸ್‌ನವರು ಧಿಕ್ಕಾರ ಹೇಳಿದರು. ಹೀಗೆ ಆಡಳಿತ ಹಾಗೂ ವಿಪಕ್ಷದ ಸದಸ್ಯರು ಪರಸ್ಪರ ಧಿಕ್ಕಾರ ಕೂಗಿದರು.
ಮೇಯರ್ ಮುಂಭಾಗದಲ್ಲಿ ಬಂದು ಎರಡೂ ಪಕ್ಷಗಳ ಸದಸ್ಯರು ಎದುರು ಬದುರು ನಿಂತು ಮಾತಿನ ಚಕಮಕಿ ಜೋರಾಗುತ್ತಿದ್ದಂತೆ ಯಾರು ಏನು ಮಾತನಾಡುತ್ತಿದ್ದಾರೆಂದು ತಿಳಿಯದೆ ಗೊಂದಲವಾಯಿತು. ಈ ವೇಳೆ ಮೇಯರ್ ಐದು ನಿಮಿಷ ಸಭೆ ಮುಂದೂಡಿದರು.
ಸಭೆ ಮತ್ತೆ ಆರಂಭವಾಗುತ್ತಿದ್ದಂತೆ ಆರಂಭದಲ್ಲಿ ಈ ವಿಷಯ ಪ್ರಸ್ತಾಪವಾಯಿತು. ಕಾಂಗ್ರೆಸ್ ಸದಸ್ಯ ಕೆ. ಚಮನ್ ಸಾಬ್ ಮಾತನಾಡಿ, “ಯಾರೇ ತಪ್ಪು ಮಾಡಿದ್ದರೂ ತಪ್ಪೇ. ಈ ನೆಲದ ಅನ್ನ, ನೀರು ಕುಡಿದವರು ಪಾಕಿಸ್ತಾನಕ್ಕೆ ಜೈ ಎಂಬ ಘೋಷಣೆ ಕೂಗಿದ್ದು ಅಕ್ಷಮ್ಯ ಅಪರಾಧ. ಗುಂಡಿಟ್ಟು ಹೊಡೆಯಲಿ. ರಾಜ್ಯಸಭೆ ಚುನಾವಣೆಯಲ್ಲಿ ಸೋತ ಹತಾಶೆಯಿಂದ ಬಿಜೆಪಿಯವರೇ ಪಿತೂರಿ ನಡೆಸಿರಬಹುದೆಂಬ ಅನುಮಾನವೂ ಮೂಡುತ್ತದೆ” ಎಂದು ಹೇಳಿದ್ದಾರೆ.
ಈ ವೇಳೆ ಬಿಜೆಪಿ ಸದಸ್ಯರು, “ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿರುವವರಿಗೆ ಆಡಳಿತ ಪಕ್ಷ ಕಾಂಗ್ರೆಸ್ ಬೆಂಬಲ ನೀಡುತ್ತಿದೆ” ಎಂದು ಕಿಡಿಕಾರಿದರು.
ಬಳಿಕ ಆಡಳಿತ ಪಕ್ಷದ ಎ. ನಾಗರಾಜ್ ಮಾತನಾಡಿ, “ಚಮನ್ ಸಾಬ್ ಅವರು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದೇ ಆಗಿದ್ದರೆ ಅವರಿಗೆ ನಮ್ಮದೂ ಧಿಕ್ಕಾರವಿರಲಿ. ಕಾನೂನು ಕ್ರಮ ಆಗಲಿ. ಇದಕ್ಕೆ ನಮ್ಮ ಬೆಂಬಲವಿದೆ. ದೇಶದ್ರೋಹಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ” ಎಂದು ಹೇಳುತ್ತಿದ್ದಂತೆ ಎಲ್ಲರೂ ಪ್ರಕರಣಕ್ಕೆ ಅಂತ್ಯ ಹಾಡಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ʼನಮ್ಮ ನಡಿಗೆ ಮಾದಕ ಮುಕ್ತ ಸಮಾಜದ ಕಡೆಗೆʼ ಜಾಗೃತಿ ಕಾರ್ಯಕ್ರಮ
ಸಭೆಯಲ್ಲಿ ಮೇಯರ್ ವಿನಾಯಕ್ ಪೈಲ್ವಾನ್, ಉಪಮೇಯರ್ ಯಶೋಧಾ, ಆಯುಕ್ತೆ ರೇಣುಕಾ ಸೇರಿದಂತೆ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ಇದ್ದರು.