ಪಶ್ಚಿಮ ಬಂಗಾಳ ಪೊಲೀಸರು ಸಂದೇಶ್‌ಖಾಲಿ ಹಾಗೂ ಇ.ಡಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಶೇಖ್ ಶಹಜಹಾನ್‌ನನ್ನು ಬಂಧಿಸಿದ ನಂತರ ಟಿಎಂಸಿ ಶಹಜಹಾನ್‌ನನ್ನು ಪಕ್ಷದಿಂದ ಆರು ವರ್ಷಗಳ ಕಾಲ ಅಮಾನತುಗೊಳಿಸಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಟಿಎಂಸಿ ಸಂಸದ ಡೆರಿಕ್ ಓ ಬ್ರಿಯೆನ್, “ನಾವು ಶೇಖ್ ಶಹಜಹಾನ್‌ನನ್ನು 6 ವರ್ಷಗಳ ಕಾಲ ಅಮಾನತುಗೊಳಿಸಲು ನಿರ್ಧರಿಸಿದ್ದೇವೆ. ಹೇಳಿದ ಮಾತಿನಂತೆ ನಾವು ನೆಡೆಯುತ್ತೇವೆ. ನಾವು ಹಿಂದೆ ಹೇಳಿದ್ದನ್ನು ಈಗ ಮಾಡುತ್ತಿದ್ದೇವೆ” ಎಂದು ತಿಳಿಸಿದರು.
“ಭ್ರಷ್ಟಾಚಾರ ಪ್ರಕರಣಗಳು, ಹಲವು ಕ್ರಿಮಿನಲ್ ಪ್ರಕರಣಗಳಿರುವ ಆರೋಪಿಗಳನ್ನು ಅಮಾನತುಗೊಳಿಸಿದ್ದೇವೆ. ಆದರೆ ಬಿಜೆಪಿ ಈ ಧೈರ್ಯವನ್ನು ತೋರಿಸಬೇಕು.ನೀವು ಯಾರೆ ಆಗಿದ್ದರೂ ಜನರಿಗೆ ತೊಂದರೆ ನೀಡಿದ್ದರೆ ನಿಮ್ಮ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂಬುದನ್ನು ತೋರಿಸಿದ್ದೇವೆ. ನಮ್ಮಿಂದ ಅಮಾನತುಗೊಂಡವರು ನರೇಂದ್ರ ಮೋದಿ ಅವರ ಸಭೆಗಳಲ್ಲಿ ಪಾಲ್ಗೊಂಡರೆ ನಮಗೆ ಯಾವುದೇ ಆಶ್ಚರ್ಯ ಉಂಟಾಗುವುದಿಲ್ಲ” ಎಂದು ಡೆರಿಕ್ ಓ ಬ್ರಿಯೆನ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಭುತ್ವ ಪೋಷಿತ ಮೈತೇಯಿ ಮಿಲಿಟೆಂಟ್ ಅಟ್ಟಹಾಸ ಮತ್ತು ಮಣಿಪುರ ಪೊಲೀಸರ ಅಸಹಾಯಕತೆ
ಶೇಖ್ ಶಹಜಹಾನ್ ಸಂದೇಶ್‌ಖಾಲಿ ವಿಧಾನಸಭೆಯ ಪಕ್ಷದ ವಕ್ತಾರನಾಗಿದ್ದು, ಟಿಎಂಸಿಯ 24 ಉತ್ತರ ಪರಗಣದ ಜಿಲ್ಲಾ ಪರಿಷತ್‌ನ ಸದಸ್ಯನಾಗಿದ್ದಾನೆ.
ಸಂದೇಶ್‌ಖಾಲಿ ಹಾಗೂ ಇ.ಡಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಿಗ್ಗೆ 53 ವರ್ಷದ ಶೇಖ್ ಶಹಜಹಾನ್‌ನ್ನು ಬಂಧಿಸಲಾಗಿದ್ದು, 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಇ.ಡಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ನಂತರ ಈತ ಕಳೆದ 55 ದಿನಗಳಿಂದ ಪೊಲೀಸರಿಂದ ತಲೆ ತಪ್ಪಿಸಿಕೊಂಡಿದ್ದ.