ದ್ವೇಷ ಮತ್ತು ಕೋಮು ಸೌಹಾರ್ದತೆ ಕದಡುವಂತಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ ಟೈಮ್ಸ್ ನೌ, ನವಭಾರತ್, ನ್ಯೂಸ್18 ಮತ್ತು ಆಚ್ ತಕ್ ಸುದ್ದಿ ಚಾನೆಲ್‌ಗಳಿಗೆ ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಅಥಾರಿಟಿಯು (ಎನ್‌ಬಿಡಿಎಸ್‌ಎ) ದಂಡ ವಿಧಿಸಿದೆ. ಅಲ್ಲದೆ, ಆ ಕಾರ್ಯಕ್ರಮಗಳನ್ನು ಯೂಟ್ಯೂಬ್‌ಗಳಿಂದ ತೆಗೆಯುವಂತೆ ಆದೇಶಿಸಿದೆ.
ಟೈಮ್ಸ್ ನೌಗೆ 1 ಲಕ್ಷ ರೂ., ನ್ಯೂಸ್ 18ಗೆ 50,000 ರೂ. ದಂಡ ವಿಧಿಸಲಾಗಿದೆ. ಆಜ್ ತಕ್‌ಗೆ ಎಚ್ಚರಿಕೆ ನೀಡಲಾಗಿದೆ. ಈ ಮೂರು ಚಾನೆಲ್‌ಗಳು ಪ್ರಕಟಿಸಿದ್ದ ದ್ವೇಷ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವ ಕಾರ್ಯಕ್ರಮಗಳ ಆನ್‌ಲೈನ್ ಆವೃತ್ತಿಗಳನ್ನು ಏಳು ದಿನಗಳಲ್ಲಿ ತೆಗೆದುಹಾಕಬೇಕೆಂದು ಎನ್‌ಬಿಡಿಎಸ್‌ಎ ಮುಖ್ಯಸ್ಥ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಎ.ಕೆ ಸಿಕ್ರಿ ಆದೇಶಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಇಂದ್ರಜಿತ್ ಘೋರ್ಪಡೆ ಅವರು ಈ ಮೂರು ಚಾನೆಲ್‌ಗಳ ವಿರುದ್ಧ ಕೋಮುವಾದಿ ಮತ್ತು ಪ್ರಚೋದನಾಕಾರಿ ಕಾರ್ಯಕ್ರಮಗಳನ್ನು ನಡೆಸಿದ ಆರೋಪದ ಮೇಲೆ ದೂರು ದಾಖಲಿಸಿದ್ದರು. ನಿಷ್ಪಕ್ಷಪಾತ, ವಸ್ತುನಿಷ್ಠತೆ, ತಟಸ್ಥತೆ ಮತ್ತು ನಿಖರತೆಗೆ ಸಂಬಂಧಿಸಿದಂತೆ ಈ ಮೂರು ಚಾನೆಲ್‌ಗಳು ನೀತಿ ಸಂಹಿತೆ ಮತ್ತು ಪ್ರಸಾರ ಮಾನದಂಡಗಳ ಉಲ್ಲಂಘನೆ ಉಲ್ಲೇಖಿಸಿದ್ದಾರೆ ಎಂದು ದೂರುದಾರರು ಆರೋಸಿದ್ದರು.
ಟೈಮ್ಸ್ ನೌ ಚಾನೆಲ್‌ನಲ್ಲಿ ನಿರೂಪಕ ಹಿಮಾಂಶು ದೀಕ್ಷಿತ್ ಅವರು ಮುಸ್ಲಿಮರನ್ನು ಸಮುದಾಯವಾಗಿ ಗುರಿಯಾಗಿಸಿಕೊಂಡಿದ್ದಾರೆ ಮತ್ತು ಅಂತರ್-ಧರ್ಮೀಯ ಸಂಬಂಧಗಳನ್ನು ‘ಲವ್ ಜಿಹಾದ್’ ಎಂದು ಕರೆದಿದ್ದಾರೆ. ಇದು ಮತ್ತೊಂದು ಕೋಮುವಿನ ವಿರುದ್ಧ ದ್ವೇಷ ಹರಡುತ್ತದೆ ಎಂದು ಹೇಳಿರುವ ಎನ್‌ಬಿಡಿಎಸ್‌ಎ, ಚಾನೆಲ್‌ಗೆ ದಂಡ ವಿಧಿಸಿದೆ
ನ್ಯೂಸ್ 18 ಇಂಡಿಯಾದಲ್ಲಿ ಪ್ರಸಾರವಾಗಿದ್ದ ಮೂರು ಶೋಗಳ ಕಾರಣಕ್ಕಾಗಿ ಸಂಸ್ಥೆಗೆ ದಂಡ ವಿಧಿಸಲಾಗಿದೆ. ಆ ಮೂರು ಕಾರ್ಯಕ್ರಮಗಳಲ್ಲಿ ಎರಡನ್ನು ಅಮನ್ ಚೋಪ್ರಾ ಮತ್ತು ಒಂದನ್ನು ಅಮಿಶ್ ದೇವಗನ್ ನಿರೂಪಿಸಿದ್ದಾರೆ. ಈ ಪ್ರದರ್ಶನಗಳು ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನು ‘ಲವ್ ಜಿಹಾದ್’ ಎಂದು ಬಿಂಬಿಸಿವೆ. ಹೀಗಾಗಿ, 50,000 ರೂ. ದಂಡ ವಿಧಿಸಲಾಗಿದೆ.
ಇಂಡಿಯಾ ಟುಡೇ ಗ್ರೂಪ್‌ನ ಆಜ್ ತಕ್ ಚಾನೆಲ್‌ನಲ್ಲಿ ಸುಧೀರ್ ಚೌಧರಿ ನಿರೂಪಿಸಿದ್ದ ಕಾರ್ಯಕ್ರಮದಲ್ಲಿ, ರಾಮನವಮಿ ಸಂದರ್ಭದಲ್ಲಿ ಹಿಂಸಾಚಾರ ನಡೆಸಲಾಗುತ್ತದೆ ಎಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿ, ದ್ವೇಷ ಹರಡಲಾಗಿತ್ತು. ಆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಚಾನೆಲ್‌ಗೆ ಎಚ್ಚರಿಕೆ ನೀಡಲಾಗಿದೆ.
ಎನ್‌ಬಿಡಿಎಸ್‌ಎ ತನ್ನ ಆದೇಶದಲ್ಲಿ ದ್ವೇಷದ ಭಾಷಣ ತಡೆಯುವಿಕೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಲಾಗಿದೆ. ಘಟನೆಗಳನ್ನು ವರದಿ ಮಾಡುವಲ್ಲಿ ಕೋಮುವಾದವನ್ನು ಸೇರಿಸಲಾಗಿದೆ ಎಂಬುದನ್ನು ಉಲ್ಲೇಖಿಸಿದೆ.