ಸ್ಟಾರ್ ನಟಿ ಸಮಂತಾ ಮುಖ್ಯಭೂಮಿಕೆಯ ಚಿತ್ರ
ವಾರಾಂತ್ಯದಲ್ಲೂ ಒಂದಂಕಿ ದಾಟದ ಗಳಿಕೆ
ತೆಲುಗಿನ ಖ್ಯಾತ ನಟಿ ಸಮಂತಾ ಮುಖ್ಯಭೂಮಿಕೆಯಲ್ಲಿ ಕಳೆದ ಶುಕ್ರವಾರ ತೆರೆಕಂಡಿದ್ದ ʼಶಾಕುಂತಲಂʼ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಪ್ಯಾನ್ ಇಂಡಿಯಾ ಮಾದರಿಯಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಗಳಿಕೆಯಲ್ಲೂ ಹಿನ್ನಡೆ ಅನುಭವಿಸಿದೆ.
ಚಿತ್ರತಂಡ ಹೇಳಿಕೊಂಡಂತೆ ಅಂದಾಜು ₹50 ರಿಂದ ₹80 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ʼಶಾಕುಂತಲಂʼ ಸಿನಿಮಾ, ತೆರೆಕಂಡ ಮೂರು ದಿನಕ್ಕೆ ಜಗತ್ತಿನಾದ್ಯಂತ ಕೇವಲ ₹6.25 ಕೋಟಿಯನ್ನು ಕಲೆ ಹಾಕಿದೆ. ಬಿಡುಗಡೆಯಾದ ಮೊದಲ ದಿನ ₹2.7 ಕೋಟಿ, ಎರಡನೇ ದಿನ ₹1.55 ಕೋಟಿ, ಮೂರನೇ ದಿನ 2 ಕೋಟಿ ಗಳಿಸಿದೆ. ವಾರಾಂತ್ಯದಲ್ಲೂ ಚಿತ್ರದ ಗಳಿಕೆ ಒಂದಂಕಿಯನ್ನು ದಾಟಿಲ್ಲ. ಹೀಗಾಗಿ ʼಶಾಕುಂತಲಂʼ ಗಲ್ಲಾ ಪೆಟ್ಟಿಗೆಯಲ್ಲಿ ಹೀನಾಯ ಸೋಲು ಕಂಡಿದೆ. ಹಾಕಿದ ಬಂಡವಾಳ ಕೂಡ ಹಿಂದಿರುಗಿ ಬಂದಿಲ್ಲ ಎಂದು ಸಿನಿಮಾ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ಕವಿರತ್ನ ಕಾಳಿದಾಸರ ʼಅಭಿಜ್ಞಾನ ಶಾಕುಂತಲಂʼ ನಾಟಕದ ಕಥೆಯನ್ನು ಆಧರಿಸಿ ತೆಲುಗಿನ ಖ್ಯಾತ ನಿರ್ದೇಶಕ ಗುಣಶೇಖರನ್ ʼಶಾಕುಂತಲಂʼ ಚಿತ್ರವನ್ನು ತೆರೆಗೆ ಅಳವಡಿಸಿದ್ದಾರೆ. ಟ್ರೈಲರ್ ಮತ್ತು ಹಾಡುಗಳ ಮೂಲಕ ಗಮನ ಸೆಳೆದಿದ್ದ ಈ ಚಿತ್ರ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿಲ್ಲ.
ಈ ಹಿಂದೆ ಸಮಂತಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ʼಯಶೋಧಾʼ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ₹20 ಕೋಟಿಗಳನ್ನು ಬಾಚಿಕೊಂಡಿತ್ತು. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ʼಶಾಕುಂತಲಂʼ, ʼಯಶೋಧಾʼ ಚಿತ್ರದ ಗಳಿಕೆಯನ್ನು ಕೂಡ ಹಿಂದಿಕ್ಕುವುದು ಅನುಮಾನ ಎನ್ನಲಾಗುತ್ತಿದೆ.
ʼಶಾಕುಂತಲಂʼ ಚಿತ್ರದ ಡಿಜಿಟಲ್ ಹಕ್ಕು ಅಂದಾಜು ₹17 ಕೋಟಿ ಮೊತ್ತಕ್ಕೆ ಈಗಾಗಲೇ ಮಾರಾಟವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಸ್ಯಾಟಲೈಟ್ ಹಕ್ಕು ಇನ್ನೂ ಮಾರಾಟವಾಗಿಲ್ಲ. ಚಿತ್ರಮಂದಿರಗಳಲ್ಲಿ ʼಶಾಕುಂತಲಂʼ ಪ್ರೇಕ್ಷಕರ ಕೊರತೆ ಎದುರಿಸುತ್ತಿರುವುದರಿಂದ ಸ್ಯಾಟಲೈಟ್ ಹಕ್ಕು ಕೂಡ ದೊಡ್ಡ ಮೊತ್ತಕ್ಕೆ ಮಾರಾಟವಾಗುವ ಸಾಧ್ಯತೆ ಇಲ್ಲ. ಹೀಗಾಗಿ ಚಿತ್ರದ ನಿರ್ಮಾಪಕರು ಮತ್ತು ವಿತರಕರು ನಷ್ಟ ಅನುಭವಿಸಲಿದ್ದಾರೆ ಎನ್ನಲಾಗುತ್ತಿದೆ.