ದೇಶದ ಎಲ್ಲ ಸಮುದಾಯಗಳ ವಿರುದ್ಧ ಕೇಂದ್ರ ಸರ್ಕಾರ ಯುದ್ಧ ಘೋಷಿಸಿದೆ. ಜನರ ಹೋರಾಟವನ್ನು ಹತ್ತಿಕ್ಕುತ್ತಿದೆ. ರೈತರನ್ನು ಶತ್ರಗಳನ್ನಾಗಿ ನೋಡುತ್ತಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಆತಂಕ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಪ ಮಲ್ಲೇಶ್ ಅವರ 90ನೇ ಜನ್ಮದಿನದ ಸ್ಮರಣೆ ಅಂಗವಾಗಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದ ‘ಪ ಮಲ್ಲೇಶ್-90’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “2014ರಿಂದ ದೇಶದ ಜನರು ನಿರಂಕುಶವಾದಿ, ಸರ್ವಾಧಿಕಾರಿ ಆಡಳಿತದ ಕಪಿಮುಷ್ಟಿಯಲ್ಲಿ ಸಿಲುಕಿದ್ದಾರೆ. ಆರ್‌ಎಸ್‌ಎಸ್‌ಗೆ ಸಂವಿಧಾನವೇ ಸಮಸ್ಯೆಯಾಗಿದೆ. ಕೇಂದ್ರ ಸರ್ಕಾರವು ಸಂವಿಧಾನ ಸೌಧದ ಇಟ್ಟಿಗೆಗಳನ್ನು ಕೆಡವುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಆರ್‌ಎಸ್‌ಎಸ್‌ನ ಹೆಡಗೇವಾರ್, ಗೋಳ್ವಾಲ್ಕರ್ ಸಿದ್ಧಾಂತದ ಆಧಾರ ಮೇಲೆ ಕೇಂದ್ರ ಸರ್ಕಾರ ಆಳ್ವಿಕೆ ನಡೆಸುತ್ತಿದೆ. ಜಾತಿ ಆಧಾರಿತ ಮನುಸ್ಮೃತಿಯನ್ನು ಜಾರಿಗೊಳಿಸಲು ಹವಣಿಸುತ್ತಿದೆ. ಪ್ರಜಾಪ್ರಭುತ್ವದ ಆಧಾರದಲ್ಲಿ ಅಧಿಕಾರಕ್ಕೆ ಬಂದು, ಪ್ರಜಾಪ್ರಭುತ್ವ ವ್ಯವಸ್ಥಗೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳು, ರಾಜ್ಯನಿರ್ದೇಶಕ ತತ್ವಗಳನ್ನು ಕೆಡವುತ್ತಿದೆ. ಮುಂದಿನ ಚುನಾವಣೆಕ್ಕೆ ಈ ಸರ್ಕಾರವನ್ನು ಮಣಿಸಿ, ಪ್ರಜಾಪ್ರಭುತ್ವವನ್ನು ಮರಳಿ ಕಟ್ಟಬೇಕು” ಎಂದು ಕರೆ ನೀಡಿದ್ದಾರೆ.
“ಮಹಾರಾಷ್ಟ್ರದ ಪುಣೆಯಲ್ಲಿ ಹತ್ಯೆಗಳು ನಡೆಯುತ್ತಲೇ ಇವೆ. ಮಣಿಪುರದಲ್ಲಿ ಹಿಂಸಾಚಾರಕ್ಕೆ ನೂರಾರು ಜನರು ಬಲಿಯಾಗಿದ್ದಾರೆ. 12,000 ಜನರು ನಿರಾಶ್ರಿತರಾಗಿದ್ದಾರೆ. ಸರ್ಕಾರವು ಚಳುವಳಿಗಳನ್ನೇ ಇಲ್ಲವಾಗಿಸಿ, ದಮನ ಮಾಡುತ್ತಿದೆ” ಎಂದರು.
ಈ ಸುದ್ದಿ ಓದಿದ್ದೀರಾ?: ಹಸಿವು ಮುಕ್ತ ರಾಜ್ಯ, ದೇಶ ನಿರ್ಮಾಣಕ್ಕೆ ಕಾಂಗ್ರೆಸ್ ಹೊರಟಿದೆ: ಸಿಎಂ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೊ. ರವಿವರ್ಮ ಕುಮಾರ್, “ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ಸಂಸತ್ತಿನ ಪ್ರಶ್ನೆಗಳಿಗೆ ಉತ್ತರ ಕೊಟ್ಟಿಲ್ಲ. ಸರ್ಕಾರವನ್ನು ಪ್ರಶ್ನಿಸುವ ವಿರೋಧ ಪಕ್ಷಗಳ ಸದಸ್ಯರನ್ನು ಸಂಸತ್ತಿನಿಂದ ಹೊರಗಿಡಲಾಗುತ್ತಿದೆ. ಸಿಬಿಐ, ಇಡಿಗಳ ಮೂಲಕ ಪ್ರಶ್ನಿಸುವವರ ಮೇಲೆ ದಾಳಿ ನಡೆಸಲಾಗುತ್ತಿದೆ” ಎಂದು ಕಿಡಿಕಾರಿದರು.
“ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಂಸತ್ ಭವನ ಮತ್ತು ರಾಮಮಂದಿರ ಉದ್ಘಾಟನೆಗೆ ಕರೆಯದೆ ಅವಮಾನಿಸಿದೆ. ಕೇಂದ್ರ ಸರ್ಕಾರ ಮತ್ತು ಬಿಜೆಪಿ ಪರ ತೀರ್ಪು ನೀಡುವ ನ್ಯಾಯಾಧೀಶರು, ತಮ ನಿವೃತ್ತಿಯ ನಂತರ ರಾಜ್ಯಪಾಲರಾಗುವಂತಹ ಪರಿಸ್ಥಿತಿ ಈಗಿನದ್ದಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.