“ಗ್ಯಾರಂಟಿ ಯೋಜನೆಗಳಿಂದ ಒಂದು ಬಡ ಕುಟುಂಬಕ್ಕೆ ವಾರ್ಷಿಕ 50-60 ಸಾವಿರ ಉಳಿತಾಯವಾಗುತ್ತಿದೆ. ಐದು ಗ್ಯಾರಂಟಿ ಯೋಜನೆಗಳ ಹೊರತಾಗಿ ವಿವಿಧ ಅಭಿವೃದ್ಧಿಗೆ ರಾಜ್ಯ ಸರ್ಕಾರ ₹1.20 ಸಾವಿರ ಕೋಟಿ ಹಣವನ್ನು ಬಜೆಟ್‌ನಲ್ಲಿ ಮೀಸಲಿಟ್ಟಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಹಾಸನದಲ್ಲಿ ನಡೆದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಅವರು,” ₹1.56 ಕೋಟಿ ಕುಟುಂಬಗಳಿಗೆ ಉಚಿತವಾಗಿ ವಿದ್ಯುತ್ ನೀಡುವುದರ ಜೊತೆಗೆ ₹1.50 ವಿದ್ಯುತ್ ದರ ಇಳಿಸಿದ್ದೇವೆ. ಇದಕ್ಕೆ ವಿರೋಧ ಪಕ್ಷಗಳು ಏನು ಹೇಳುತ್ತವೆ. ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿದ್ದ ಕುಮಾರಸ್ವಾಮಿ, ಆರ್. ಅಶೋಕ್ ಅವರು ಇದಕ್ಕೆ ಉತ್ತರಿಸಲಿ” ಎಂದು ಸವಾಲೆಸೆದರು.
“ವಸ್ತುಗಳ ಬೆಲೆ ಏರಿಕೆಯಾಗಿತ್ತು. ಬಿಜೆಪಿಯವರು ವಿದ್ಯುತ್ ಬೆಲೆ ಏರಿಕೆ ಮಾಡಿದ್ದರು. ನಾವು ಉಚಿತವಾಗಿ ವಿದ್ಯುತ್ ನೀಡುವುದರ ಜೊತೆಗೆ ಬೆಲೆ ಇಳಿಕೆ ಮಾಡಿದ್ದೇವೆ. ಗೃಹಲಕ್ಷ್ಮೀ ಯೋಜನೆಯಿಂದ ಅತ್ತೆ-ಸೊಸೆ ಜಗಳವಾಡುತ್ತಾರೆ ಎಂದು ಗುಲ್ಲೆಬ್ಬಿಸಿದರು. ಯಾವುದಾದರೂ ಮನೆಯಲ್ಲಿ ಜಗಳ ಉಂಟಾಗಿದೆಯೇ?” ಎಂದು ಕೇಳಿದರು.
“ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರು ಶಕ್ತಿ ಯೋಜನೆಯಿಂದ ದೇವಸ್ಥಾನಕ್ಕೆ ಜನ ಹೆಚ್ಚು ಬರುತ್ತಿದ್ದಾರೆ. ಹುಂಡಿ ತುಂಬಿ ತುಳುಕುತ್ತಿದೆ. ಸಿದ್ದರಾಮಯ್ಯ ಅವರ ಮತ್ತು ಡಿ.ಕೆ.ಶಿವಕುಮಾರ್ ಅವರ ಹೆಸರಿನಲ್ಲಿ ಮಹಿಳೆಯರು ಅರ್ಚನೆ ಮಾಡಿಸುತ್ತಿದ್ದಾರೆ ಎಂದು ಪತ್ರ ಬರೆದಿದ್ದರು. ಜನರ ಪ್ರಾರ್ಥನೆ ಎಂದಿಗೂ ಮೋಸ ಮಾಡುವುದಿಲ್ಲ. ಮಹಿಳೆಯರು ರಾಜ್ಯದ ನಾನಾ ದೇವಸ್ಥಾನಗಳನ್ನು ನೋಡುತ್ತಿದ್ದಾರೆ. ಮಕ್ಕಳನ್ನು ಕರೆದುಕೊಂಡು ಹೋಗಿ ದರ್ಶನ ಮಾಡಿಸುತ್ತಿದ್ದಾರೆ. ತವರು ಮನೆಗೆ ಹೋಗಿ ಬರುತ್ತಿದ್ದಾರೆ” ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.
“ನಮ್ಮ ಯೋಜನೆಗಳಿಂದ ಆರ್ಥಿಕತೆಗೆ ಉತ್ತೇಜನ ನೀಡಲಾಗಿದೆ. ದುಡ್ಡು ಮತ್ತು ಬ್ಲಡ್ ಎರಡೂ ಚಲಾವಣೆಯಲ್ಲಿ ಇರಬೇಕು. ದುಡ್ಡು ಒಂದೇ ಕಡೆ ಇದ್ದರೆ ಕಳ್ಳರ, ಆದಾಯ ತೆರಿಗೆ ಅಧಿಕಾರಿಗಳ ಭಯ. ಬ್ಲಡ್ ಒಂದೇ ಕಡೆ ಇದ್ದರೆ ಅನಾರೋಗ್ಯ ಉಂಟಾಗುತ್ತದೆ. ನಾವು ಧರ್ಮವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವುದಿಲ್ಲ. ದೇವರು ಬೇರೆ, ರಾಜಕಾರಣ ಬೇರೆ. ಈ ಬಾರಿಯ ಸದನದಲ್ಲಿ ನಮ್ಮ ಸರ್ಕಾರ ಸಣ್ಣ ದೇವಸ್ಥಾನಗಳ ಅಭಿವೃದ್ಧಿಗೆ ಮತ್ತು ಅರ್ಚಕರಿಗೆ ಸಹಾಯ ಮಾಡುವ ಕಾನೂನು ತರಲು ಹೊರಟೆವು. ಆದರೆ ಬಿಜೆಪಿಯವರು ಅದಕ್ಕೆ ವಿರೋಧಿಸಿದರು” ಎಂದು ತಿಳಿಸಿದರು.
“ನಮಗೆ ಜಾತಿ ಮುಖ್ಯವಲ್ಲ ನೀತಿ ಮುಖ್ಯ. ನಾವು ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. ಭಾವನೆಗಳ ಮೇಲೆ ಅಲ್ಲ. ನಾವು ಕೇವಲ ದಲಿತ, ಹಿಂದುಳಿದ, ಅಲ್ಪಸಂಖ್ಯಾತರಿಗೆ ಮಾತ್ರ ಯೋಜನೆಗಳನ್ನು ನೀಡಿಲ್ಲ. ಎಲ್ಲರಿಗೂ ನೀಡಿದ್ದೇವೆ. ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ಸಹಕಾರಿ ಸಂಘಗಳಲ್ಲಿನ ರೈತರ ಸಾಲ ಮನ್ನಾ ಮಾಡಿದ್ದೆವು. ಆದರೆ ಆ ಹಣ ಬಿಡುಗಡೆಯಾಗಿರಲಿಲ್ಲ. ಸಿಎಂ ಮತ್ತು ರಾಜಣ್ಣ ಅವರ ಕಾಳಜಿಯಿಂದ ಈ ಹಣ ಬಿಡುಗಡೆ ಮಾಡಿ ಸಹಕಾರಿ ಸಂಘ ಮತ್ತು ರೈತರಿಗೆ ಬೆನ್ನೆಲುಬಾಗಿದ್ದೇವೆ. ಮುಂದಕ್ಕೂ ನೀವು ನಮ್ಮ ಕೈ ಹಿಡಿಯುತ್ತೀರಾ ಎಂದು ನಂಬಿದ್ದೇವೆ” ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.
ಇದನ್ನು ಓದಿದ್ದೀರಾ? ಮೈಸೂರು | ಜನರ ವಿರುದ್ಧ ಕೇಂದ್ರ ಯುದ್ಧ ಘೋಷಿಸಿದೆ: ತೀಸ್ತಾ ಸೆಟಲ್ವಾಡ್
“ಹಾಸನ ಜಿಲ್ಲೆಯ ಜನಪ್ರತಿನಿಧಿಗಳು ಒಂದಷ್ಟು ಅನುದಾನಗಳ ಬಿಡುಗಡೆಗೆ ಮನವಿ ಸಲ್ಲಿಸಿದ್ದಾರೆ. ಇದರಲ್ಲಿ ನಮ್ಮ ಶಿವಲಿಂಗೇಗೌಡರು ಬಂಪರ್ ಹೊಡೆದಿದ್ದಾರೆ. ಈ ವರ್ಷ ಮಳೆ ಬಿದ್ದು ನೀರು ಬಂದರೆ, ಎತ್ತಿನಹೊಳೆ ಮೂಲಕ ಎಲ್ಲ ಕೆರೆಗಳನ್ನು ತುಂಬಿಸುವ ಕೆಲಸವಾಗುತ್ತದೆ” ಎಂದು ಇದೇ ವೇಳೆ ಡಿಸಿಎಂ ಡಿ ಕೆ ಶಿವಕುಮಾರ್ ಭರವಸೆ ನೀಡಿದರು.
