ಕಾಶ್ಮೀರಿ ಪತ್ರಕರ್ತ ಆಸಿಫ್ ಸುಲ್ತಾನ್ ಅವರು ಐದು ವರ್ಷ ಜೈಲಿನಲ್ಲಿದ್ದು, ಮೊನ್ನೆಯಷ್ಟೇ ಬಿಡುಗಡೆಯಾಗಿದ್ದಾರೆ. ಆದರೆ, ಬಿಡುಗಡೆಯಾದ ಎರಡು ದಿನಗಳ ಬಳಿಕ, ಮತ್ತೊಂದು ಪ್ರಕರಣದಲ್ಲಿ ಅವರನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ.
ಮಂಗಳವಾರ ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲಾ ಕಾರಾಗೃಹದಿಂದ ಅವರು ಬಿಡುಗಡೆಯಾಗಿದ್ದರು. ಗುರುವಾರ, ಕಾಶ್ಮೀರದಲ್ಲಿದ್ದ ತಮ್ಮ ಮನೆಗೆ ತೆರಳಿದ್ದರು. ಆದರೆ, ಗುರವಾರ ತಡರಾತ್ರಿ ಸುಲ್ತಾನ್ ಅವರನ್ನು ಮತ್ತೆ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಲ್ತಾನ್ ಅವರು ಅವರು ಸ್ಥಳೀಯ ನಿಯತಕಾಲಿಕೆಯಲ್ಲಿ ವರದಿಗಾರರಾಗಿ ಕೆಲಸ ಮಾಡುತ್ತಿದ್ದರು. 2018ರ ಸೆಪ್ಟೆಂಬರ್‌ನಲ್ಲಿ ಅವರನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ಪ್ರಕರಣ ಒಂದರಲ್ಲಿ ಬಂಧಿಸಲಾಗಿತ್ತು. ಅವರು, ನಿಷೇಧಿತ ಉಗ್ರಗಾಮಿ ಗುಂಪಿಗೆ ಬೆಂಬಲ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಅವರು ಯಾವುದೇ ಉಗ್ರಗಾಮಿ ಗುಂಪಿನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬುದನ್ನು ಸಾಬೀತು ಮಾಡುವಲ್ಲಿ ತನಿಖಾ ಸಂಸ್ಥೆಗಳು ವಿಫಲವಾದ ಕಾರಣ, 2022ರ ಏಪ್ರಿಲ್‌ನಲ್ಲಿ ಆವರಿಗೆ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಜಾಮೀನು ನೀಡಿತ್ತು.
ಈ ಸುದ್ದಿ ಓದಿದ್ದೀರಾ?: ನ್ಯೂಸ್ ಚಾನೆಲ್‌ಗಳಲ್ಲಿ ಕೋಮು ದ್ವೇಷ ಪ್ರಸಾರ: ಟೈಮ್ಸ್ ನೌ, ನ್ಯೂಸ್18ಗೆ ದಂಡ; ಆಜ್ ತಕ್‌ಗೆ ಎಚ್ಚರಿಕೆ
ಆದಾಗ್ಯೂ, ಕೆಲ ದಿನಗಳ ನಂತರ ಅವರನ್ನು ಸಾರ್ವಜನಿಕ ಸುರಕ್ಷತಾ ಕಾಯಿದೆ (ಪಿಎಸ್‌ಎ) ಅಡಿಯಲ್ಲಿ ಬಂಧಿಸಲಾಗಿತ್ತು. ಸಾರ್ವಜನಿಕ ಸುವ್ಯವಸ್ಥೆಗೆ ಯಾವುದೇ ರೀತಿಯಲ್ಲಿ ಅಡ್ಡಿಯುಂಟು ಮಾಡುವ ವ್ಯಕ್ತಿಗೆ ಕಾಯ್ದೆಯಡಿ 1 ವರ್ಷದವರೆಗೆ ಹಾಗೂ ರಾಜ್ಯದ ಭದ್ರತೆಗೆ ಧಕ್ಕೆಯುಂಟು ಮಾಡುವ ವ್ಯಕ್ತಿಗೆ 2 ವರ್ಷದವರೆಗೆ ಆತ್ಮಡಳಿತಾತ್ಮಕ ಬಂಧನ ವಿಧಿಸಲು ಅವಕಾಶವಿದೆ. ಹೀಗಾಗಿ, ಆ ಕಾಯ್ದೆಯಡಿ ಸುಲ್ತಾನ್ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು.
2018ರ ಸೆಪ್ಟೆಂಬರ್‌ನಿಂದ ಈವರೆಗೆ ಜೈಲಿನಲ್ಲಿದ್ದ ಸುಲ್ತಾನ್ ಅವರು ಮಂಗಳವಾರ ಬಿಡುಗಡೆಯಾಗಿದ್ದರು. ಇದೀಗ, ಮತ್ತೊಂದು ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ.