ಗುರುವಾರ (ಫೆ.29) ನಿಧನರಾದ ನಿವೃತ್ತ ಐಎಎಸ್ ಅಧಿಕಾರಿ, ಚಿತ್ರನಟ ಹಾಗೂ ರಾಜಕಾರಣಿ, ರಾಜ್ಯ ಛಲವಾದಿ ಮಹಾಸಭಾದ ಸಂಸ್ಥಾಪಕ ಅಧ್ಯಕ್ಷ ಕೆ.ಶಿವರಾಮ್ ಅವರಿಗೆ ಹರ್ತಿಪತ್ತಿನ ಸಹಕಾರ ಸಂಘ, ಛಲವಾದಿ ಕಲಾ ಮತ್ತು ಸಾಂಸ್ಕೃತಿಕ ವೇದಿಕೆ ತುಮಕೂರು ನಗರದ ಹರ್ತಿಪತ್ತಿನ ಸಹಕಾರ ಸಂಘದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದೆ.
ಸರ್ಕಾರಿ ಅಭಿಯೋಜಕರು, ಕಲಾವಿದ ಎಸ್. ರಾಜಣ್ಣ ಮಾತನಾಡಿ, ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ಕನ್ನಡದಲ್ಲಿ ಐಎಎಸ್ ಪರೀಕ್ಷೆ ಬರೆದು ಪಾಸು ಮಾಡಿದ ಅತ್ಯಂತ ಪ್ರತಿಭಾವಂತರಾದ ಕೆ.ಶಿವರಾಮ್, ಐಎಎಸ್ ಅಧಿಕಾರಿಯಾಗಿ, ಕಲಾವಿದರಾಗಿ ಅಧಿಕಾರಿ ವರ್ಗದಲ್ಲಿ ಮತ್ತು ಕಲಾರಂಗದಲ್ಲಿ ಹೆಸರು ಮಾಡಿದ್ದರು ಎಂದರು.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅಧಿಕಾರಿಯಾಗಿ ಕೆಲಸ ಮಾಡಿದ್ದ ಅವರು, ಮೈಸೂರು ಮಹಾನಗರಪಾಲಿಕೆಯ ಆಯುಕ್ತರಾಗಿದ್ದಾಗ ಇಡೀ ರಾಜ್ಯದಲ್ಲಿಯೇ ಮೊದಲ ಬಾರಿಗೆ ಗುಡಿಸಲಿನಲ್ಲಿದ್ದ ಪೌರಕಾರ್ಮಿಕರಿಗೆ, ಪಕ್ಕಾ ಮನೆಗಳನ್ನು ನಿರ್ಮಿಸಿಕೊಡುವ ಮೂಲಕ ಅವರು ಸಹ ಸಮಾಜದ ಇತರಂತೆ ಬದುಕುವ ಹಕ್ಕು ದಯಪಾಲಿಸಿದವರು ಎಂದರು.
ದಾವಣೆಗೆರೆ ಜಿಲ್ಲಾಧಿಕಾರಿಯಾಗಿದ್ದಾಗ ಜಿಲ್ಲೆಯ ಶೈಕ್ಷಣಿಕ, ಅರ್ಥಿಕ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿದವರು ಅಲ್ಲದೇ ಛಲವಾದಿ ಸಮುದಾಯವನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಅರ್ಥಿಕವಾಗಿ ಮುಂದೆ ತರಬೇಕೆಂಬ ಉದ್ದೇಶದಿಂದಲೇ ಛಲವಾದಿ ಮಹಾಸಭಾವನ್ನು ಕಟ್ಟಿ, ಅದರ ಸಂಸ್ಥಾಪಕ ಅಧ್ಯಕ್ಷರಾಗಿ ಕೆಲಸ ಮಾಡಿ, ಸಮುದಾಯದ ಜನರನ್ನು ಸಂಘಟಿಸುವ ಕೆಲಸ ಮಾಡಿದ್ದರು. ಅವರು ಎಂದಿಗೂ ತಮ್ಮ ಜನಾಂಗದ ಹೆಸರು ಹೇಳಲು ಹಿಂಜರಿದವರಲ್ಲ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾಗಿದ್ದ ಕಾಲದಲ್ಲಿ ಪರಿಶಿಷ್ಟ ಜಾತಿಯ ಮಕ್ಕಳ ಉನ್ನತ ವ್ಯಾಸಂಗಕ್ಕೆ ಒತ್ತು ನೀಡಿದ್ದರು. ಇಂತಹ ಅಧಿಕಾರಿ ಅನಾರೋಗ್ಯಕ್ಕೆ ತುತ್ತಾಗಿ ಅಸುನೀಗಿದ್ದು ನಿಜಕ್ಕೂ ಸಮಾಜಕ್ಕೆ ತುಂಬಲಾರದ ನಷ್ಟು ಉಂಟಾಗಿದೆ. ಅವರ ಸೇವೆ ಇನ್ನೂ ಸಮಾಜಕ್ಕೆ ಅಗತ್ಯವಿತ್ತು. ಅವರ ಆಶಯದಂತೆ ನಾವೆಲ್ಲರೂ ನಡೆಯುವ ಮೂಲಕ ಅವರ ಆತ್ಮಕ್ಕೆ ಶಾಂತಿ ದೊರೆಯುವಂತಾಗಲಿ ಎಂದರು.
ಹಿರಿಯ ರಂಗಭೂಮಿ ಕಲಾವಿದರಾದ ಪುಟ್ಟಭೋರಯ್ಯ, ವಕೀಲರಾದ ಸಿ.ಎಸ್. ಹನುಮಂತರಾಯ, ಪತ್ರಕರ್ತ ಎಚ್.ಎಸ್. ಪರಮೇಶ್ ಮಾತನಾಡಿದರು. ಛಲವಾದಿ ಮುಖಂಡರಾದ ವಿಜಯಕುಮಾರ್, ಹರ್ತಿಪತ್ತಿನ ಸಹಕಾರ ಸಂಘ ಪ್ರಧಾನ ಕಾರ್ಯದರ್ಶಿ ಶಿವರಾಜ್, ಪೊಲೀಸ್ ಇಲಾಖೆಯ ನಂದೀಶ್, ಬೈರೇಶ್, ಮನೋಹರ, ಕೆಂಪರಾಜ್, ದೇವರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.