ಉದ್ಯೋಗ ಸೃಷ್ಟಿ ಹಾಗೂ ಅನುದಾನ ಬಳಕೆಯಲ್ಲಿನ ಸಂಪೂರ್ಣ ನಿಷ್ಕ್ರಿಯತೆಯಿಂದ ಮೇಕ್ ಇನ್ ಇಂಡಿಯಾ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ಸರ್ಕಾರ ಏಕೆ ಉದ್ಯೋಗಗಳನ್ನು ಸೃಷ್ಠಿಸಲು ಸಾಧ್ಯವಾಗಲಿಲ್ಲ ಹಾಗೂ ದೇಶದಲ್ಲಿನ ಪ್ರಮುಖ ವಲಯಗಳಲ್ಲಿ ತಯಾರಿಕೆಯನ್ನು ಉತ್ತೇಜಿಸಲು ಅನುದಾನಗಳ ಕೊರತೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಮಲ್ಲಿಕಾರ್ಜುನ ಖರ್ಗೆ ಮುಂದಿಟ್ಟಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಮಲ್ಲಿಕಾರ್ಜುನ ಖರ್ಗೆ, “ ಮೋದಿ ಸರ್ಕಾರ ಮೇಕ್ ಇನ್ ಇಂಡಿಯಾ ಅನುಷ್ಠಾನಗೊಳಿಸಲು ಸಂಪೂರ್ಣ ವಿಫಲವಾಗಿದೆ. ಪ್ರಧಾನಿಯ ಹಸ್ತಕ್ಷೇಪದಿಂದ ಕೈಗಾರಿಕಾ ವಲಯವನ್ನು ಸಂಪೂರ್ಣ ನಿಷ್ಕ್ರಿಯತೆಯಿಂದ ಮುಳುಗಿಸಲಾಗಿದೆ” ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷರು ಹಲವಾರು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಭಾರತದ ಜಿಡಿಪಿಯಲ್ಲಿನ ಉತ್ಪಾದನಾ ಮೌಲ್ಯವು ಕಳೆದ ಒಂದು ದಶಕದಲ್ಲಿ ಶೇ.16ರಿಂದ 13ಕ್ಕೆ ಏಕೆ ಕಡಿಮೆಯಾಗಿದೆ ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಿದ್ದರಾಮಯ್ಯನವರ ʼಹಸಿವು ಮುಕ್ತ ಕರ್ನಾಟಕʼಕ್ಕೆ ಬೇಕಿದೆ ಅಧಿಕಾರಿಗಳ ಬದ್ಧತೆ
ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಸರಾಸರಿ ಉತ್ಪಾದನಾ ಬೆಳವಣಿಗೆ ಏಕೆ ಕುಸಿಯಿತು?ಕಾಂಗ್ರೆಸ್ ಸರ್ಕಾರದಲ್ಲಿ ಶೇ. 7.85 ರಷ್ಟಿದ್ದ ಬೆಳವಣಿಗೆ ಈಗಿನ ಸರ್ಕಾರದಲ್ಲಿ ಶೇ.6ಕ್ಕೆ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.
2022ರ ವೇಳೆಗೆ 10 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಕೇಂದ್ರ ಭರವಸೆ ನೀಡಿರುವ ಬಗ್ಗೆ ಖರ್ಗೆ ಪ್ರಶ್ನಿಸಿದರು.
“ಉದ್ಯೋಗಗಳೆಲ್ಲಿ? ಕಳೆದ 10 ವರ್ಷಗಳಲ್ಲಿ ಉದ್ಯಮಗಳಲ್ಲಿನ ಕಾರ್ಮಿಕರು ಏಕೆ ಕಡಿಮೆಯಾಗಿದ್ದಾರೆ? ಪ್ರಮುಖ ವಲಯಗಳಲ್ಲಿ ಬೃಹತ್ ಪ್ರಮಾಣದ ನಿಧಿಯ ಕೊರತೆ ಏಕೆ ಉಂಟಾಗಿದೆ? ಅಲ್ಲದೆ ಜವಳಿ ಉದ್ಯಮ ವಲಯದಲ್ಲಿನ ಪಿಎಲ್‌ಐ ಯೋಜನೆ ಶೇ.96 ರಷ್ಟು ನಿಧಿ ಬಳಕೆಯಾಗದೆ ಉಳಿದಿದೆ” ಎಂದು ಖರ್ಗೆ ಹೇಳಿದರು.
ನವೀಕರಿಸಬಹುದಾದ ವಲಯದಲ್ಲಿ ಪಿಎಲ್‌ಐ ಯೋಜನೆಗಾಗಿ ಯಾವುದೇ ಯೋಜನೆಯನ್ನು ಒದಗಿಸಲಾಗಿಲ್ಲ ಹಾಗೂ ತಯಾರಿಕಾ ಘಟಕಗಳ ಸರಕುಗಳು ಹಾಗೂ ಎಸಿ ಮತ್ತು ಎಲ್‌ಇಡಿ ಬಿಡಿಭಾಗಗಳ ಯೋಜನೆಗೆ ಮೀಸಲಿಡಲಾಗಿದ್ದ ಶೇ.95 ರಷ್ಟು ಹಣ ಬಳಕೆಯಾಗಿಲ್ಲ ಎಂದು ಖರ್ಗೆ ಹೇಳಿದರು
ಯುಪಿಎ ಸರ್ಕಾರದಲ್ಲಿ ಶೇ.549 ರಷ್ಟಿದ್ದ ರಫ್ತು ಮೋದಿ ಸರ್ಕಾರದಲ್ಲಿ ಸಂಪೂರ್ಣವಾಗಿ ಕುಸಿದಿರುವಾಗ ಭಾರತದ ರಫ್ತುಗಳು ಶೇಕಡವಾರಿನಲ್ಲಿ ಹೇಗೆ ಹೆಚ್ಚಾಗುತ್ತದೆ” ಎಂದು ಖರ್ಗೆ ಪ್ರಶ್ನಿಸಿದ್ದಾರೆ.
“ಗಲ್ವಾನ್‌ನಲ್ಲಿ 20 ಯೋಧರು ಹುತಾತ್ಮರಾದ ನಂತರವೂ ಚೀನಾದಿಂದ ಶೇ.45 ರಷ್ಟು ಉತ್ಪನ್ನಗಳನ್ನು ಆಮದು ಮಾಡಿಕೊಂಡಿರುವುದು ಬಿಜೆಪಿಯ ನಕಲಿ ರಾಷ್ಟ್ರೀಯವಾದವಲ್ಲವೆ ಎಂದು ಪ್ರಶ್ನಿಸಿದ ಖರ್ಗೆ ಹಳೆಯ ಗತವೈಭವವನ್ನು ಸೃಷ್ಟಿಸಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.
