ಸುಮಾರು 25 ವರ್ಷಗಳಿಂದ ಅಕ್ಕಿಪಿಕ್ಕಿ ಸುಮುದಾಯದ 45 ಕುಟುಂಬಗಳ ಜನರು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಮಲ್ಲೇನಹಳ್ಳಿ ಬಳಿಯ ಅಕ್ಕಿಪಿಕ್ಕಿ ಕಾಲೋನಿಯಲ್ಲಿ ವಾಸಿಸುತ್ತಿದ್ದಾರೆ. ಆದರೆ, ಈ ವರೆಗೆ ಆ ಕುಟುಂಬಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಲಾಗಿಲ್ಲ. ದೂರದ ಊರುಗಳಿಗೆ ಹೋಗಿ, ಕೂಲಿ ಮಾಡಿ, ಈ ಕುಟುಂಬಗಳು ಜೀವನ ನಡೆಸುತ್ತಿವೆ.
45 ಅಕ್ಕಿಪಿಕ್ಕಿ ಕುಟುಂಬಗಳಲ್ಲಿ ಆಸೀನಾ ಅವರ ಕುಟುಂಬವೂ ಒಂದು. ಆಕೆ ಗಂಡ ಅನಾರೋಗ್ಯಕ್ಕೆ ತುತ್ತಾಗಿ, ಮೂಲೆ ಸೇರಿದ್ದಾರೆ. ಅವರು ನಾಲ್ಕು ಮಕ್ಕಳು ಅಪ್ರಾಪ್ತರು. ಆರು ಮಂದಿಯ ಕುಟುಂಬವನ್ನು ಆಸೀನಾ ಅವರೇ ಸಲಹುತ್ತಿದ್ದಾರೆ. ಕಾಡು-ಮೇಡು ಅಲೆದು, ಕೂಲಿ ಮಾಡಿ, ಕುಟುಂಬವನ್ನು ದೂಡುತ್ತಿದ್ದಾರೆ. ಒಂದು ದಿನ ಕೂಲಿ ಸಿಗದಿದ್ದರೂ, ಆಹಾರಕ್ಕಾಗಿ ಪರದಾಡುವ ಪರಿಸ್ಥಿತಿ ಆ ಕುಟುಂಬಕ್ಕಿದೆ.
ತಮ್ಮ ಸಂಕಷ್ಟಗಳ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಆಸೀನಾ, “ಅಕ್ಕಿಪಿಕ್ಕಿ ಕಾಲೋನಿಯಲ್ಲಿ ಗುಡಿಸಿಲು ಕಟ್ಟಿಕೊಂಡು ಬದುಕುತ್ತಿದ್ದೆವು. ಎರಡ್ಮೂರು ವರ್ಷಗಳ ಹಿಂದೆ ಬೆಂಕಿ ತಗುಲಿ, ಗುಡಿಸಲು ಸುಟ್ಟು ಕರಕಲಾಯಿತು. ಆ ಸಮಯದಲ್ಲಿ ನಮ್ಮ ಕ್ಷೇತ್ರದಲ್ಲಿ ಸಿ.ಟಿ ರವಿ ಶಾಸಕರಾಗಿದ್ದರು. ಪರಿಹಾರಕ್ಕೆಂದು ಅವರ ಕಚೇರಿಗೆ ಹೋದರೆ, 2,000 ರೂ. ಕೊಟ್ಟು ಹೊರಗೆ ಕಳಿಸು ಅಂದಿದ್ರು. ನಮ್ಮ ಕಷ್ಟಕ್ಕೆ ಕಿಂಚಿತ್ತು ಕರುಣೆ ತೋರಲಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಕುಟುಂಬ ನಿರ್ವಹಣೆಗೆ, ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲೂ ನಮಗೆ ಆಗುತ್ತಿಲ್ಲ. ಪ್ರತಿ ತಿಂಗಳಿಗೆ 3 ಕೆಜಿ ಆಕ್ಕಿ ಕೊಡುತ್ತಾರೆ. ಅದು ಸಾಕಾಗುವುದಿಲ್ಲ. ಸರ್ಕಾರದಿಂದ ರಾಜೀವ್ ಗಾಂಧಿ ಯೋಜನೆ ಅಡಿಯಲ್ಲಿ ಮನೆ ಕಟ್ಟಿಸಿಕೊಡೋದಾಗಿ ಗ್ರಾಮ ಪಂಚಾಯತಿಯವರು ಹೇಳಿದ್ರು, ಅರ್ಧ ಕಾಮಗಾರಿ ಮಾಡಿದ್ದಾರೆ” ಎಂದರು.
“ಮಳೆ ಬಂದರೆ ಮನಿಯೊಳಗೆ ನೀರು ನುಗ್ಗುತ್ತದೆ. ಛಾವಣಿಯೂ ಸೋರುತ್ತದೆ. ನನಗೂ ನನ್ನ ಗಂಡನಿಗೆ ಆರೋಗ್ಯ ಸರಿ ಇಲ್ಲ. ಒಂದಿನ ಕೆಲಸಕ್ಕೆ ಹೋದ್ರೆ ಇನ್ನೊಂದು ದಿನ ಹೋಗಲು ಆಗುವುದಿಲ್ಲ. ಮಕ್ಕಳಿಗೆ ಒಂದೊಪ್ಪತ್ತಿನ ಗಂಜಿಗೂ ನರಕಯಾತನೆ ಆಗುತ್ತಿದೆ” ಎಂದು ಹೇಳಿದರು.
ಸಂಬಂಧಪಟ್ಟ ಅಧಿಕಾರಿಗಳು ಮನೆ ಕಾಮಗಾರಿಯನ್ನ ಪೂರ್ಣಗೊಳಿಸಿಕೊಡಬೇಕು. ತಮ್ಮ ಕುಟುಂಬಕ್ಕೆ ನೆರವು ನೀಡಬೇಕೆಂದು ಆಸೀನಾ ಕುಟುಂಬ ಎದುರು ನೋಡುತ್ತಿದೆ.