ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಸ್ಥಳಗಳಲ್ಲಿ ಚಂದ್ರಗುತ್ತಿಯ ರೇಣುಕಾ ದೇವಾಲಯವೂ ಒಂದು. ಇಲ್ಲಿಗೆ ರಾಜ್ಯಾಧ್ಯತ ಭಕ್ತರು ದೇವಿಯ ದರ್ಶನಕ್ಕೆ ಬರುತ್ತಾರೆ. ಆದರೆ ಬರು ದೇವಸ್ಥಾನಕ್ಕೆ ಬರುವ ಭಕ್ತರು ಮೂಲ ಸೌಲಭ್ಯಗಳ ಕೊರತೆಯನ್ನು ಎದುರಿಸುವಂತಾಗಿದೆ.
ಪ್ರತೀ ಹುಣ್ಣಿಮೆ, ಶುಕ್ರವಾರ, ಮಂಗಳವಾರ ಹಾಗೂ ವಿಶೇಷ ದಿನಗಳಲ್ಲಿ ತಾಲೂಕು ಸೇರಿದಂತೆ ಹಿರೇಕೆರೂರು, ರಾಣೇಬೆನ್ನೂರು, ದಾವಣಗೆರೆ, ಹರಿಹರ, ಹಾವೇರಿ, ಗದಗ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸುತ್ತಾರೆ. ಜಿಲ್ಲೆಯಲ್ಲಿಯೇ ಎ ಗ್ರೇಡ್ ದೇವಸ್ಥಾನವಾಗಿದ್ದು, ದೇವಸ್ಥಾನದ ಆವರಣದಲ್ಲಿ ಕುಡಿಯುವ ನೀರು, ಶೌಚಗೃಹ ವ್ಯವಸ್ಥೆ, ಮಹಿಳೆಯರು ಬಟ್ಟೆ ಬದಲಿಸಲು ಕೊಠಡಿ ಹೀಗೆ ಯಾವುದೇ ವ್ಯವಸ್ಥೆ ಇಲ್ಲದಿರುವುದರಿಂದ ಭಕ್ತರು ಪರದಾಡುವಂತಾಗಿದೆ.
ಇದೇ ಮಾ.15ರಿಂದ ರೇಣುಕಾಂಬ ದೇವಿಯ ಜಾತ್ರಾ ಮಹೋತ್ಸವ ಆರಂಭವಾಗಲಿದ್ದು, ಲಕ್ಷಾಂತರ ಭಕ್ತರು ಜಮಾಯಿಸಲಿದ್ದಾರೆ. ಬರುವ ಭಕ್ತರು ಶೌಚಕ್ಕಾಗಿ ನೆರೆಯ ಹೊಲ, ಗದ್ದೆಗಳು ಅಥವಾ ಗುಡ್ಡದ ತಪ್ಪಲಿನತ್ತ ತೆರಳಬೇಕಾದ ಅನಿವಾರ್ಯತೆ ಇದೆ ಎಂಬುದು ಸಾರ್ವಜನಿಕರ ಅಳಲಾಗಿದೆ.
ದೇವಸ್ಥಾನಕ್ಕೆ ವಾರ್ಷಿಕವಾಗಿ ಕೋಟ್ಯಂತರ ರೂ. ಆದಾಯ ಬರುತ್ತದೆ. ಆದರೆ, ಅಭಿವೃದ್ಧಿ ಮಾತ್ರ ಶೂನ್ಯ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಭಕ್ತರಿಗೆ ವ್ಯವಸ್ಥಿತ ಶೌಚಾಲಯವೇ ಇಲ್ಲವಾಗಿದ್ದು, ರಥ ಬೀದಿಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ ಶೌಚಗೃಹಗಳು ಬಳಕೆಗೆ ಯೋಗ್ಯವಿಲ್ಲದಂತಾಗಿವೆ. ಕೆಲ ದಶಕಗಳ ಹಿಂದೆ ನಡೆಯುತ್ತಿದ್ದ ಬೆತ್ತಲೆ ಸೇವೆಗೆ ದಲಿತ ಸಂಘರ್ಷ ಸಮಿತಿಯ ಹೋರಾಟದ ಫಲವಾಗಿ ನಿಷೇಧ ಹೇರಲಾಗಿದೆ. ಆದರೆ, ಹರಕೆ ಹೊತ್ತ ಭಕ್ತರು ದೀಡ್ ನಮಸ್ಕಾರ ಹಾಕುವುದು ಇಲ್ಲಿನ ಪದ್ಧತಿಯಾಗಿದೆ. ಈ ವೇಳೆ ಮಹಿಳೆಯರು ಬಟ್ಟೆ ಬದಲಿಸಲು ಸಹ ಸೂಕ್ತ ವ್ಯವಸ್ಥೆ ಇಲ್ಲದಂತಾಗಿದೆ ಎನ್ನುತ್ತಾರೆ ಮಹಿಳಾ ಭಕ್ತರು.
ಬಯಲು ಸೀಮೆ ಭಾಗದಿಂದ ಸಾಕಷ್ಟು ಜನ ಕುಟುಂಬ ಸಮೇತರಾಗಿ ಆಗಮಿಸುತ್ತಾರೆ. ಅಡುಗೆ ತಯಾಯಿಸಿ ಬಂಧು ಮಿತ್ರರೊಂದಿಗೆ ಊಟ ಮಾಡುವುದು ಉಂಟು. ಅಡುಗೆ ತಯಾರಿಸಲು ಸಹ ವ್ಯವಸ್ಥೆ ಇಲ್ಲ ಹಾಗೂ ದೂರದೂರಿಂದ ಬಂದವರು ತಂಗಲು ಸಹ ಯಾವುದೇ ಕೊಠಡಿಗಳು ಇಲ್ಲ. ಆದ್ದರಿಂದ ನೆರೆಯ ಹೊಲ-ಗದ್ದೆಗಳನ್ನು ಆಶ್ರಯಿಸಬೇಕಿದೆ ಎಂದು ರಾಣೇಬೆನ್ನೂರಿನಿಂದ ಬಂದಿದ್ದ ಭಕ್ತರು ಹೇಳಿದರು.
ಈ ದಿನ. ಕಾಮ್ ಜೊತೆ ಸ್ಥಳೀಯ ಗ್ರಾ.ಪಂ ಅಧ್ಯಕ್ಷ ಎಂ.ಬಿ. ರೇಣುಕಾ ಪ್ರಸಾದ್ ಮಾತನಾಡಿ, ಸ್ಥಳೀಯ ಗ್ರಾಮ ಪಂಚಾಯ್ತಿಯ ಸರ್ವ ಸದಸ್ಯರು ಒಮ್ಮತದಿಂದ ದೇವಸ್ಥಾನದ ಆವರಣದಲ್ಲಿ ಸ್ವಚ್ಛತೆ, ಕುಡಿಯುವ ನೀರು, ಪಾರ್ಕಿಂಗ್ ವ್ಯವಸ್ಥೆ, ಶೌಚಗೃಹ ವ್ಯವಸ್ಥೆ ಕಲ್ಪಿಸಲು ಆದ್ಯತೆ ನೀಡಲಾಗಿದೆ. ದೇವಸ್ಥಾನವು ಪುರಾತತ್ವ ಇಲಾಖೆ ವ್ಯಾಪ್ತಿಗೆ ಒಳಪಡುವುದರಿಂದ, ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಹಿನ್ನಡೆಯಾಗುತ್ತಿದೆ. ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತವಾರಿ ಸಚಿವರಾದ ಎಸ್. ಮಧುಬಂಗಾರಪ್ಪ ಅವರ ಹಿತಾಸಕ್ತಿಯಿಂದ ದೇವಸ್ಥಾನದ ಆವರಣದಲ್ಲಿ ಯಾತ್ರಿ ನಿವಾಸ, ಶೌಚಗೃಹ ಕಲ್ಪಿಸಲು 1.5 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದರು.
ಕುಡಿಯುವ ನೀರಿಗಾಗಿ ಎರಡು ಟ್ಯಾಂಕ್ ನಿರ್ಮಿಸಲಾಗಿದೆ. ಯಾತ್ರಿಕರಿಗೆ ಅನುಕೂಲ ಕಲ್ಪಿಸಲು ಹಂತ ಹಂತವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ನಲ್ಲಿ ದೇವಸ್ಥಾನದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿದ್ದಾರೆ. ಯಾತ್ರಿಕರಿಗೆ ಸೌಲಭ್ಯಗಳನ್ನು ಕಲ್ಪಿಸಲು ಗ್ರಾ.ಪಂ ಸಿದ್ದವಿದೆ ಎಂದುಹೇಳಿದರು.
ಒಟ್ಟಾರೆ ರಾಜ್ಯ ಮತ್ತು ಹೊರರಾಜ್ಯಗಳಲ್ಲೂ ಭಕ್ತರನ್ನು ಹೊಂದಿರುವ ದೇವಸ್ಥಾನಕ್ಕೆ ಶೀಘ್ರ ಸೌಲಭ್ಯಗಳು ದೊರಕುವಂತಾಗಬೇಕು. ರೇಣುಕಾಂಬ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ಭಕ್ತರಿಗೆ ಸೌಲಭ್ಯಗಳು ದೊರೆಯುವಂತಾಗಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.