ಕೇಂದ್ರ ರೈಲ್ವೆ ಸಚಿವಾಲಯವು ಹಿರಿಯ ನಾಗರಿಕರಿಗಿದ್ದ ವಿನಾಯತಿಯನ್ನೂ ಕಿತ್ತುಕೊಂಡು 3,700 ಕೋಟಿ ರೂಪಾಯಿ ವಸೂಲಿ ಮಾಡಿದೆ. ಅಷ್ಟು ಮಾತ್ರವಲ್ಲದೆ, ಶ್ರೀಮಂತರನ್ನು ಗಮನದಲ್ಲಿಟ್ಟುಕೊಂಡು ಹೊಸ ರೈಲ್ವೆ ಪಾಲಿಸಿ ರೂಪಿಸಿ, ಜನರಿಂದ ರೈಲು ಪ್ರಯಾಣವನ್ನೂ ಕಸಿದುಕೊಳ್ಳುತ್ತಿದೆ ಎಂದು ಕೇಂದ್ರ ಸರ್ಕಾರದ ರೈಲ್ವೆ ಪಾಲಿಸಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
“ಹವಾಯಿ ಚಪ್ಪಲಿ ಹಾಕಿಕೊಂಡು ನಡೆಯುವ ಬಡ ಜನರು ವಿಮಾನದಲ್ಲಿ ಪ್ರಯಾಣಿಸುವ ಕನಸನ್ನು ಹೊತ್ತಿದ್ದಾರೆ. ಆದರೆ, ನಮ್ಮ ಪ್ರಧಾನಿ ನರೇಂದ್ರ ಮೋದಿ ಈ ಬಡ ಜನರಿಂದ ‘ಬಡವರ ಸವಾರಿ’ ಆದ ರೈಲು ಮಾರ್ಗವನ್ನೇ ಕಸಿದುಕೊಳ್ಳುತ್ತಿದ್ದಾರೆ” ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
“ಪ್ರತಿ ವರ್ಷ ಶೇ.10ರಷ್ಟು ಪ್ರಯಾಣ ದರ ಏರಿಕೆ, ಬೇಡಿಕೆ ಬೆಲೆ ಹೆಸರಿನಲ್ಲಿ ಲೂಟಿ, ರದ್ದತಿ ಶುಲ್ಕ ಹೆಚ್ಚಳ, ದುಬಾರಿ ಪ್ಲಾಟ್ ಫಾರಂ ಟಿಕೆಟ್‌ಗಳಿಂದಾಗಿ ಬಡ ಜನರಿಗೆ ರೈಲು ನಿಲ್ದಾಣದಲ್ಲಿ ಕಾಲಿಡಲು ಕೂಡಾ ಸಾಧ್ಯವಾಗದೆ ಇರುವಾಗ ‘ಗಣ್ಯರ ರೈಲು’ ಚಿತ್ರವನ್ನು ತೋರಿಸಿ ಜನರನ್ನು ಸೆಳೆಯಲಾಗುತ್ತಿದೆ” ಎಂದು ರಾಹುಲ್ ಗಾಂಧಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಈ ಹಿಂದೆ ಹಿರಿಯ ನಾಗರಿಕರಿಗೆ ರೈಲು ಪ್ರಯಾಣದಲ್ಲಿ ವಿನಾಯಿತಿ ಇತ್ತು. ಆದರೆ ಕೇಂದ್ರ ಸರ್ಕಾರವು ಹಿರಿಯರಿಗೆ ನೀಡಲಾಗಿದ್ದ ಈ ವಿನಾಯಿತಿಗಳನ್ನು ಕಿತ್ತುಕೊಂಡಿದೆ. ವಯಸ್ಸಾದವರಿಂದ ಕೇಂದ್ರವು ಕಳೆದ 3 ವರ್ಷಗಳಲ್ಲಿ 3,700 ಕೋಟಿ ರೂಪಾಯಿ ವಸೂಲಿ ಮಾಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
‘हवाई चप्पल’ वालों को हवाई जहाज की यात्रा का सपना दिखा, नरेंद्र मोदी ‘गरीबों की सवारी’ रेलवे को भी उनसे दूर करते जा रहे हैं।
हर साल 10% बढ़ता किराया, डायनामिक फेयर के नाम पर लूट, बढ़ते कैंसलेशन चार्जेस और महंगे प्लेटफार्म टिकट के बीच लोगों को एक ऐसी ‘एलीट ट्रेन’ की तस्वीर दिखाकर…
— Rahul Gandhi (@RahulGandhi) March 3, 2024
ಕೇಂದ್ರ ಸರ್ಕಾರವು ರೈಲ್ವೆಯನ್ನು ತನ್ನ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದೆ. ಅದಕ್ಕಾಗಿಯೇ ಸಾಮಾನ್ಯ ಜನರಿಗೆ ಈಗ ರೈಲು ಪ್ರಯಾಣ ಮಾಡಲು ಸಾಧ್ಯವಾಗದಂತಾಗಿದೆ. ರೈಲ್ವೆ ಪಾಲಿಸಿಯ ಆದ್ಯತೆಯಿಂದ ಬಡ ಮತ್ತು ಮಧ್ಯಮ ವರ್ಗದ ಪ್ರಯಾಣಿಕರನ್ನು ಹೊರಗಿಡಲಾಗಿದೆ ಎಂದು ಆರೋಪಿಸಿದರು.
ಕೊಂಚ ಅಧಿಕ ಹಣವಿರುವವರು ಪ್ರಯಾಣಿಸುವ ಎಸಿ ಕೋಚ್‌ಗಳ ಸಂಖ್ಯೆಯನ್ನು ಹೆಚ್ಚಿಸಲು, ಕೇಂದ್ರವು ಸಾಮಾನ್ಯ ಬೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿದೆ. ಇದರಲ್ಲಿ ಕಾರ್ಮಿಕರು ಮತ್ತು ರೈತರು ಮಾತ್ರವಲ್ಲದೆ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳೂ ಪ್ರಯಾಣಿಸುತ್ತಾರೆ. ಆದರೆ ಇದರ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. ಎಸಿ ಕೋಚ್‌ಗಳ ಉತ್ಪಾದನೆಯನ್ನು ಸಾಮಾನ್ಯ ಕೋಚ್‌ಗಳಿಗಿಂತ 3 ಪಟ್ಟು ಹೆಚ್ಚಿಸಲಾಗಿದೆ ಎಂದು ದೂರಿದ್ದಾರೆ.
ಕೇಂದ್ರ ಬಿಜೆಪಿ ಸರ್ಕಾರವು ರೈಲ್ವೆ ಬಜೆಟ್ ಅನ್ನು ಪ್ರತ್ಯೇಕವಾಗಿ ಮಂಡಿಸುವ ಸಂಪ್ರದಾಯವನ್ನು ಈ ಹಿಂದೆಯೇ ಕೊನೆ ಮಾಡಿದೆ. ವಾಸ್ತವವಾಗಿ ನೋಡುವುದಾದರೆ ರೈಲ್ವೆಯಲ್ಲಿನ ಈ ‘ಶೋಷಣೆ’ಗಳನ್ನು ಮರೆಮಾಡುವ ಪಿತೂರಿಯೇ ಇದಾಗಿದೆ ಎಂದು ಆರೋಪಿಸಿದರು.
ಕೇವಲ ಶ್ರೀಮಂತರನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ನೀತಿಗಳನ್ನು ಮಾಡುತ್ತಿರುವುದು ರೈಲ್ವೇಯ ಮೇಲೆ ಅವಲಂಬಿತವಾಗಿರುವ ಭಾರತದ ಶೇಕಡ 80 ರಷ್ಟು ಜನರಿಗೆ ಮಾಡುವ ದ್ರೋಹವಾಗಿದೆ. ಮೋದಿಯವರ ಗ್ಯಾರಂಟಿಯೇ ದ್ರೋಹದ ಗ್ಯಾರಂಟಿ ಎಂದು ಕಿಡಿಕಾರಿದರು.