ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ನ ಬಿಜೆಪಿ ಶಾಸಕ ನೀರಜ್ ಜಿಂಬಾ ಶನಿವಾರ ಪ್ರಧಾನಿ ನರೇಂದ್ರ ಮೋದಿಗೆ ತಮ್ಮ ರಕ್ತದಿಂದ ಪತ್ರ ಬರೆದಿದ್ದಾರೆ. ‘ಗೂರ್ಖಾಗಳ ಕನಸುಗಳು ನನ್ನ ಕನಸುಗಳು’ ಎಂದಿದ್ದ ಪ್ರಧಾನಿ ಮೋದಿಗೆ ಅವರ ಹೇಳಿಕೆಯನ್ನು ನೆನಪಿಸಿದ್ದಾರೆ. ಗೂರ್ಖಾ ಸಮಸ್ಯೆಗಳ ಪರಿಹಾರಕ್ಕೆ ಉನ್ನತ ಮಟ್ಟದ ಮಧ್ಯಸ್ಥಿಕೆಗೆ ಮನವಿ ಮಾಡಿದ್ದಾರೆ.
2014ರ ಏಪ್ರಿಲ್ 10ರಂದು ಬಂಗಾಳದ ಸಿಲಿಗುರಿ ಬಳಿಯ ಖಪ್ರೈಲ್ನಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ‘ಗೂರ್ಖಾ ಕಾ ಸಪ್ನಾ ಮೇರಾ ಸಪ್ನಾ’ (ಗೂರ್ಖಾಗಳ ಕನಸುಗಳು ನನ್ನ ಕನಸುಗಳು) ಎಂದು ಹೇಳಿದ್ದರು. ಆದರೆ, ಈವರೆಗೂ ಅವರ ಭರವಸೆ ಈಡೇರಲಿಲ್ಲ ಎಂದು ಜಿಂಬಾ ಅವರು ತಮ್ಮ ಪತ್ರದಲ್ಲಿ ಬರೆದಿದ್ದಾರೆ.
“ಈ ಮಹತ್ವದ ವಿಷಯದ ಬಗ್ಗೆ ನಿಮ್ಮ ಗಮನವನ್ನು ಸೆಳೆಯುವ ನಿಟ್ಟಿನಲ್ಲಿ ನನ್ನ ಸ್ವಂತ ರಕ್ತವನ್ನು ಬಳಸಿ ಈ ಪತ್ರವನ್ನು ಬರೆಯುತ್ತಿದ್ದೇನೆ. ರಾಜಕೀಯ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವ ಮೂಲಕ ಗೂರ್ಖಾಗಳ ಸಮಸ್ಯೆಗಳನ್ನು ಪರಿಹರಿಸುವ ಬದ್ಧತೆ ಇರಬೇಕಾಗುತ್ತದೆ. ಗೂರ್ಖಾಗಳ 11 ಬಿಟ್ಟುಹೋದ ಸಮುದಾಯಗಳಿಗೆ ಪರಿಶಿಷ್ಟ ಪಂಗಡದ ಸ್ಥಾನಮಾನವನ್ನು ನೀಡುವ ಬದ್ಧತೆ ಇನ್ನೂ ಸಾಕಾರಗೊಳ್ಳಬೇಕಿದೆ” ಎಂದು ಬಿಜೆಪಿ ಶಾಸಕ ತಿಳಿಸಿದ್ದಾರೆ.
“ಲಡಾಕಿಗಳು, ಕಾಶ್ಮೀರಿಗಳು, ಮಿಜೋಗಳು, ನಾಗಾಗಳು ಮತ್ತು ಬೋಡೋಗಳಿಗೆ ನ್ಯಾಯವನ್ನು ನೀಡಲಾಗಿದ್ದರೂ, ಗೂರ್ಖಾಗಳನ್ನು ಈಗಲೂ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಇದು ಕೇಂದ್ರ ಸರ್ಕಾರದ ರಾಜಕೀಯ ಇಚ್ಛಾಶಕ್ತಿಯ ಕೊರತೆಯ ಪ್ರತಿ ಬಿಂಬವಾಗಿದೆ. ನಿಮಗೆ ಈ ಕನಸು ಸಾಕಾರ ಮಾಡುವ ಸಮಯ ಬಂದಿದೆ. ಭಾರತೀಯ ಗೂರ್ಖಾಗಳಿಗೆ ನ್ಯಾಯ ಒದಗಿಸಲು ಸಮಯ ಇದಾಗಿದೆ,” ಎಂದು ಹೇಳಿದರು.
ಡಾರ್ಜಿಲಿಂಗ್ ಕ್ಷೇತ್ರವು 2009 ರಿಂದ ಮೂರು ಸಂಸದರನ್ನು ಸಂಸತ್ತಿಗೆ ಕಳುಹಿಸಿದೆ. ಜಸ್ವಂತ್ ಸಿಂಗ್ (2009-2014), ಎಸ್ ಎಸ್ ಅಹ್ಲುವಾಲಿಯಾ (2014-2019) ಮತ್ತು ರಾಜು ಬಿಸ್ತಾ (2019-2024) ಈ ಮೂರು ಸಂಸದರು ಆಗಿದ್ದಾರೆ. ಅಲ್ಲದೆ, ಬಿಜೆಪಿ ಅಭ್ಯರ್ಥಿಗಳು ಭಾರಿ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. 2019 ರಲ್ಲಿ, ಬಿಸ್ತಾ ಎರಡನೇ ಸ್ಥಾನದಲ್ಲಿರುವ ಟಿಎಂಸಿ ಅಭ್ಯರ್ಥಿಯನ್ನು 4 ಲಕ್ಷಕ್ಕೂ ಹೆಚ್ಚು ಮತಗಳಿಂದ ಸೋಲಿಸಿದರು.
1980 ರಿಂದ, ಗೂರ್ಖಾ ಲ್ಯಾಂಡ್ ಪ್ರತ್ಯೇಕ ರಾಜ್ಯದ ವಿಷಯವು ರಾಜಕೀಯವಾಗಿ ಚರ್ಚೆ ನಡೆಯುತ್ತಿದೆ. ಆಗಾಗ್ಗೆ ಹಿಂಸಾತ್ಮಕ ಘಟನೆಗಳು ಕೂಡಾ ಇಲ್ಲಿ ನಡೆಯುತ್ತಿದೆ. 2017ರಲ್ಲಿ 100 ದಿನಗಳ ಆರ್ಥಿಕ ದಿಗ್ಬಂಧನದ ಸಂದರ್ಭದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದರು.
2019 ರಲ್ಲಿ, ಬಿಜೆಪಿ 11 ಗುಡ್ಡಗಾಡು ಸಮುದಾಯಗಳಿಗೆ ಬುಡಕಟ್ಟು ಸ್ಥಾನಮಾನ ಮತ್ತು “ಶಾಶ್ವತ ರಾಜಕೀಯ ಪರಿಹಾರ (ಪಿಪಿಎಸ್)” ಭರವಸೆ ನೀಡಿತು. ಆದರೆ ಅಂದಿನಿಂದ, ಈ ವಿಷಯವು ಮತ್ತೆ ಮುನ್ನಲೆಗೆ ಬಂದಿಲ್ಲ. ರಾಜ್ಯ ವಿಭಜನೆ ಮತ್ತು ಗೂರ್ಖಾ ಲ್ಯಾಂಡ್ ರಚನೆಗೆ ಟಿಎಂಸಿ ವಿರೋಧ ವ್ಯಕ್ತಪಡಿಸಿದೆ.