ಸಂವಿಧಾನದ ಮಹತ್ವ ಹಾಗೂ ಆಶಯಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸಮಾಜ ಕಲ್ಯಾಣ ಇಲಾಖೆ ಏರ್ಪಡಿಸಿರುವ ‘ಸಂವಿಧಾನ ಜಾಗೃತಿ ಜಾಥಾ’ ಕಾರ್ಯಕ್ರಮವನ್ನು ದಾವಣಗೆರೆ ವಿಶ್ವವಿದ್ಯಾನಿಲಯ ಶಿವಗಂಗೋತ್ರಿ ಆವರಣದಲ್ಲಿ ಏರ್ಪಡಿಸಲಾಗಿತ್ತು.
ಕುಲಪತಿ ಪ್ರೊ. ಬಿ.ಡಿ.ಕುಂಬಾರ ಅವರು ಸಂವಿಧಾನ ಜಾಗೃತಿ ಸ್ತಬ್ಧಚಿತ್ರಕ್ಕೆ ಗೌರವ ಸಲ್ಲಿಸಿದರು. ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಪ್ರತಿಮೆಗಳ ಜೊತೆಗೆ ಸಂವಿಧಾನದ ಪೀಠಿಕೆಯ ಫಲಕವನ್ನು ಹೊತ್ತ ಸ್ತಬ್ಧಚಿತ್ರ ಎಲ್ಲರ ಗಮನ ಸೆಳೆಯುತ್ತಿತ್ತು.
ವಿದ್ಯಾರ್ಥಿಗಳಿಗೆ ವಿಧಾನ ಪೀಠಿಕೆಯ ಪ್ರಮಾಣವಚನ ಬೋಧಿಸಿದ ಕುಲಪತಿ ಪ್ರೊ. ಕುಂಬಾರ ಮಾತನಾಡಿ, ಅಂಬೇಡ್ಕರ್ ರಚಿಸಿದ ಸಂವಿಧಾನ ಮಹತ್ವ, ಹಕ್ಕುಗಳು ಮತ್ತು ಮೌಲ್ಯಗಳನ್ನು ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಅರ್ಥಮಾಡಿಕೊಳ್ಳಬೇಕು. ಸಾಮಾಜಿಕ ನ್ಯಾಯ, ಭ್ರಾತೃತ್ವ ಭಾವನೆ, ಸ್ವಾಭಿಮಾನಿ ಬದುಕಿಗೆ ಪ್ರೇರಣೆಯಾಗಿರುವ ಸಂವಿಧಾನದ ಆಶಯಗಳಿಗೆ ಮನ್ನಣೆ ನೀಡಬೇಕು ಎಂದು ಕರೆ ನೀಡಿದರು.
ವಿಶ್ವವಿದ್ಯಾನಿಲಯದ ಎನ್‌ಎಸ್ಎಸ್ ವಿದ್ಯಾರ್ಥಿಗಳ ನೇತೃತ್ವದಲ್ಲಿ ಆವರಣದ ಒಳಗೆ ಜಾಗೃತಿ ಜಾಥಾ ನಡೆಯಿತು. ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಡಿ ಸಂವಿಧಾನದ ಜಾಗೃತಿ ಮೂಡಿಸಿದರು.
ಜಾಥಾದಲ್ಲಿ ಕುಲಪತಿ ಪ್ರೊ. ಕುಂಬಾರ, ಕುಲಸಚಿವ ಪ್ರೊ.ವೆಂಕಟರಾವ್ ಪಲಾಟೆ, ಹಣಕಾಸು ಅಧಿಕಾರಿ ಮುದ್ದನಗೌಡ ದ್ಯಾಮನಗೌಡ್ರ, ಸಂಯೋಜನಾಧಿಕಾರಿ ಅಶೋಕಕುಮಾರ ಪಾಳೇದ, ಪ್ರಾಧ್ಯಾಪಕರಾದ ಪ್ರೊ. ಬಿ.ಶಶಿಧರ, ಪ್ರೊ. ಡಾ.ಶಿವಕುಮಾರ ಕಣಸೋಗಿ, ಗೋವಿಂದಪ್ಪ, ಸಂತೋಷಕುಮಾರ, ಎನ್‌ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಡಾ.ಸಿದ್ದಪ್ಪ ಕಕ್ಕಳಮೇಲಿ, ಡಾ. ಸೌಮ್ಯ ಬುಳ್ಳಾ ಮತ್ತಿತರರು ಭಾಗವಹಿಸಿದ್ದರು.