“ಮಹಿಳೆಯರಲ್ಲಿ ಸಂಸಾರ ಮತ್ತು ಸಮಾಜವನ್ನು ಸರಿದೂಗಿಸಿಕೊಂಡು ಹೋಗುವ ಶಕ್ತಿ ಇರುವುದರಿಂದ ಹುಟ್ಟಿದ ಮತ್ತು ಮೆಟ್ಟಿದ ಮನೆಯು ಪ್ರೀತಿಯಿಂದ ಬೆಳೆಯುತ್ತದೆ” ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಮುಕ್ತಾಂಬ ಬಸವರಾಜ ಹೇಳಿದರು.
ರಾಯಚೂರು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಿಲ್ಲಾಮಟ್ಟದ ಪ್ರಥಮ ಮಹಿಳಾ ಸಮಾವೇಶ ಹಾಗೂ ಸಾಧಕರಿಗೆ ಅಕ್ಕ ಪ್ರಶಸ್ತಿ ಪ್ರದಾನ ಮತ್ತು ತಾಲೂಕ ಘಟಕಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
“ಮಹಿಳೆಯರಲ್ಲಿ ಶೇ.100 ಸಹನೆ ಇದೆ. ಜೊತೆಗೆ ಯಾವುದೇ ಕೆಲಸವನ್ನು ನೀಡಿದರೂ ಹೊಣೆಗಾರಿಕೆ ವಹಿಸಿಕೊಂಡು ನಿರ್ವಹಿಸಿಕೊಂಡು ಹೋಗುವ ಮೂಲಕ ಸ್ತ್ರೀಶಕ್ತಿಯಾಗಿದ್ದಾಳೆ” ಎಂದರು.
“ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ನ್ಯಾಯಯುತವಾಗಿ ಬದುಕದೇ ಇದ್ದರೆ, ನಾವು ಬೌದ್ಧಿಕ ಜೀವನ ನಡೆಸಲಿಕ್ಕೆ ಸಾಧ್ಯವಿಲ್ಲ. ಆಧ್ಯಾತ್ಮದಲ್ಲಿ ಸಂಸ್ಕಾರ, ನಡೆ ಪರಂಪರೆಯನ್ನು ತಾಯಿ ಮಕ್ಕಳಿಗೆ ಕಟ್ಟುನಿಟ್ಟಾಗಿ ಕಲಿಸಿಕೊಡುತ್ತಾಳೆ. ಅದು ಜೀವನದ ಚೌಕಟ್ಟಾಗಿ ನಿರ್ಮಾಣವಾಗುತ್ತದೆ. ಅಂತಹ ಮಕ್ಕಳು ಕುಟುಂಬಕ್ಕಲ್ಲದೆ ಸಮಾಜದಲ್ಲಿಯೂ ನಿಲ್ಲುತ್ತಾರೆ” ಎಂದು ತಿಳಿಸಿದರು.
ಶಾಸಕ ಶಿವರಾಜ ಪಾಟೀಲ್ ಮಾತನಾಡಿ, “ಮುಂಬರುವ 2028-2029ರಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಮಹಿಳೆಯರು ಹೆಚ್ಚಾಗಿ ಭಾಗವಹಿಸಿ ಚುನಾಯಿತರಾಗಿ ಬರಬೇಕು. ಮಹಿಳೆಯರು ಧ್ವನಿ ಗಟ್ಟಿಯಾಗಿರುತ್ತದೆ. ಮಹಿಳೆಯರು ಹೋರಾಟಕ್ಕೆ ಬಲ ಸಿಕ್ಕಂತಾಗಲಿ. 70 ವರ್ಷಗಳ ಹೋರಾಟಕ್ಕೆ ಯಶಸ್ಸು ಸಿಗಲಿ. ಅಕ್ಕಮಹಾದೇವಿಯ ಸಂಸ್ಕೃತಿ, ಕಿತ್ತೂರು ಚೆನ್ನಮ್ಮಳ ದೈರ್ಯ ಎಲ್ಲರಿಗೂ ಶ್ರೀಶೈಲ ಮಲ್ಲಿಕಾರ್ಜುನ ಕರುಣಿಸಲಿ” ಎಂದು ಆಶಿಸಿದರು.
ವಿವಿಧ ತಾಲೂಕಿನಲ್ಲಿ ರಂಗೋಲಿ ಹಾಗೂ ವಚನ ಗಾಯನ ಸ್ಪರ್ಧೆ ನಡೆಸಿದ್ದು, ವಿಜೇತರಿಗೆ ಪ್ರಥಮ ಬಹುಮಾನ 5 ಸಾವಿರ, ದ್ವಿತೀಯ ಬಹುಮಾನ 3 ಸಾವಿರ, ತೃತೀಯ ಬಹುಮಾನ 1 ಸಾವಿರ ಬಹುಮಾನವನ್ನು ಶಾಸಕ ಶಿವರಾಜ ಪಾಟೀಲ್ ವಿತರಣೆ ಮಾಡಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಡಾ. ವಸುಂದರ ಪಾಟೀಲ್, ಗುರಮ್ಮ, ದೀಪಾಶ್ರೀ ಪಾಟೀಲ್, ಡಾ. ಸರ್ವ ಮಂಗಳ ಸಕ್ರಿ, ಶಕುಂತಲಮ್ಮ, ಆರ್.ಕೆ. ಕಮಲಮ್ಮ, ಲಕ್ಷ್ಮೀ ಮಾರೇಗೌಡ, ಶಕುಂತಲಾ, ಚಂದ್ರಕಲಾ, ಚನ್ನಮ್ಮ ಇವರಿಗೆ ಕಾಂಗ್ರೆಸ್ ಮುಖಂಡ ರವಿ ಬೋಸರಾಜು ಅವರು ಅಕ್ಕ ಪ್ರಶಸ್ತಿ ಪ್ರದಾನ ಮಾಡಿದರು.
ತುಮಕೂರು ವಿಶ್ವವಿದ್ಯಾಲಯ ವಿಶ್ರಾಂತ ಉಪನ್ಯಾಸಕಿ ಡಾ. ಮೀನಾಕ್ಷಿ ಕಂಡಿಮಠ, ಎಸ್‌ಎಸ್‌ಆರ್‌ಜಿ ಮಹಿಳಾ ಮಹಾ ವಿದ್ಯಾಲಯದ ಉಪನ್ಯಾಸಕಿ ಡಾ. ರಾಜೇಶ್ವರಿ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ, ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿ ವೀರ ಶಿವಾಚಾರ್ಯರು, ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾದ್ಯಕ್ಷ ಚಂದ್ರಶೇಖರ ಪಾಟೀಲ ಮಿರ್ಜಾಪೂರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಡಾ. ರೇಖಾ ಕೇಶವರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ವಿಜಯ ರಾಜೇಶ್ವರಿ ಗೋಪಿಶೆಟ್ಟಿ, ಸುಲೋಚನಮ್ಮ ಆಲ್ಕೂರು, ಪ್ರತಿಭಾ ಗೋನಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.
