ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಅಶೋಕ ನಗರ, ಅಣ್ಣ ನಗರ ಮುಖ್ಯ ರಸ್ತೆಯ 9ನೇ ಕ್ರಾಸ್ ವಾರ್ಡ್ ನಂಬರ್ 26ರಲ್ಲಿ ಮೂಲಸೌಕರ್ಯಗಳು ಮರೀಚಿಕೆಯಾಗಿದ್ದು, ಸಮಸ್ಯೆಗಳ ಆಗರವಾಗಿದೆ. ಈ ಭಾಗದ ಚರಂಡಿ ಗಬ್ಬೆದ್ದು ನಾರುತ್ತಿದ್ದು, ಶೌಚಾಲಯದ ತ್ಯಾಜ್ಯ ಸೇರಿದಂತೆ ಇತರೆ ತ್ಯಾಜ್ಯಗಳು ಇದಕ್ಕೆ ಸೇರುತ್ತಿದೆ.
ಸದರಿ ವಾರ್ಡ್‌ನಲ್ಲಿ ಕಿರಿದಾದ ರಸ್ತೆ ಇದ್ದು, ಪಕ್ಕದಲ್ಲಿ ಚರಂಡಿ ಇದೆ. ಯಾವುದೇ ರೀತಿಯ ತಡೆಗೋಡೆ ಕೂಡ ಇಲ್ಲದೆಯೇ ಇದನ್ನು ನಿರ್ಮಿಸಲಾಗಿದೆ. ಹಾಗಾಗಿ ಇತ್ತೀಚಿನ ಕೆಲವು ತಿಂಗಳ ಹಿಂದೆ ಒಬ್ಬ ವ್ಯಕ್ತಿ ಬೈಕ್‌ನಿಂದ ಆಯತಪ್ಪಿ ಬಿದ್ದ ಪರಿಣಾಮ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಾರೆ.
ಸ್ಥಳೀಯ ನಿವಾಸಿ ಭಾರತಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, ಚರಂಡಿ ಪಕ್ಕದ ರಸ್ತೆಗೆ ಯಾವುದೇ ರೀತಿಯ ತಡೆಗೋಡೆ ಇಲ್ಲದೆ ಬಹಳಷ್ಟು ಅಪಘಾತಗಳು ನಡೆಯುತ್ತಿವೆ. ಅಪಘಾತದಿಂದಾಗಿ ಒಬ್ಬರು ಮೃತಪಟ್ಟಿರುವ ಘಟನೆ ಕೂಡ ನಡೆದಿದೆ. ಯಾರೂ ಕೂಡ ಈ ಬಗ್ಗೆ ಗಮನಹರಿಸುತ್ತಿಲ್ಲ” ಎಂದು ತಿಳಿಸಿದ್ದಾರೆ.
“ಇಲ್ಲಿನ ನಿವಾಸಿಗಳಿಗೆ ಹಕ್ಕು ಪತ್ರ ಇಲ್ಲದಂತಾಗಿದೆ. ಈ ಕುರಿತು ಬಹಳಷ್ಟು ಬಾರಿ ಮಹಾನಗರ ಪಾಲಿಕೆ ಸದಸ್ಯೆ ಮಂಜುಳಾ ಶಿವಣ್ಣ ಅವರಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ತೀರಾ ಚಿಕ್ಕದಾದ ಮನೆಗಳಲ್ಲಿ ವಾಸಿಸುತ್ತಿದ್ದೇವೆ. ಕುಡಿಯುವ ನೀರಿನ ಸಮಸ್ಯೆ ಕೂಡ ಎದುರಾಗಿದೆ. ಯಾವುದೇ ರೀತಿಯ ಮೂಲ ಸೌಕರ್ಯಗಳಿಲ್ಲದೆ, ಈ ವಾರ್ಡ್ ಸಮಸ್ಯೆಯ ಅಗರವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಮಂಜುಳಾ ಶಿವಣ್ಣ ಅವರನ್ನು ಈ ದಿನ.ಕಾಮ್ ಸಂಪರ್ಕಿಸಿದಾಗ ಅವರ ಮಗ ಪವನ್ ಕುಮಾರ್ ಮಾತನಾಡಿ, “ತಾಯಿಗೆ ಅನಾರೋಗ್ಯದ ಕಾರಣ ನಾನೇ ತಾಯಿಯ ಪರವಾಗಿ ನೋಡಿಕೊಳ್ಳುತ್ತಿದ್ದೇನೆ. ಹಕ್ಕುಪತ್ರ ನೀಡುವುದು ನಮಗೆ ಬರುವುದಿಲ್ಲ. ಇದು ಜಿಲ್ಲಾಧಿಕಾರಿ ಹಾಗೂ ತಾಲೂಕು ಕಚೇರಿಯಿಂದ ಹಕ್ಕುಪತ್ರ ನೀಡುವ ಕೆಲಸವಾಗಬೇಕು. ಈ ಕುರಿತು ನಾನು ಬಹಳಷ್ಟು ಬಾರಿ ಇದರ ಪ್ರಯತ್ನ ಮಾಡಿದ್ದೇನೆ. ಆದರೆ ಸಾಧ್ಯವಾಗಿಲ್ಲ” ಎಂದು ಹೇಳಿದರು.
“ಮಹಾನಗರ ಪಾಲಿಕೆಯಿಂದ ಹಕ್ಕುಪತ್ರ ನೀಡಲು ಅವಕಾಶ ಇಲ್ಲ. ಸ್ಲಂ ಬೋರ್ಡ್ ಹಾಗೂ ತಾಲೂಕು ಕಚೇರಿ ಅಥವಾ ಜಿಲ್ಲಾಧಿಕಾರಿ ಕಚೇರಿಯಿಂದ ಹಕ್ಕುಪತ್ರ ನೀಡುವ ಕೆಲಸವಾಗಬೇಕು. ಇದು ಒಬ್ಬರು ಇಬ್ಬರಿಂದ ಆಗುವ ಕೆಲಸವಲ್ಲ. ಸಂಬಂಧಿಸಿದ ಎಲ್ಲ ಇಲಾಖೆಗಳೂ ಸೇರಿ ಈ ಕೆಲಸ ಮಾಡಬೇಕು. ಎಷ್ಟೋ ಬಾರಿ ನಿವಾಸಿಗಳೊಂದಿಗೆ ಪ್ರತಿಭಟನೆಯನ್ನೂ ಮಾಡಿಸಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ತಿಳಿಸಿದ್ದಾರೆ.
“ಚರಂಡಿಗೆ ತಡೆಗೋಡೆ ಇಲ್ಲ. ಸಿಕ್ಕಾಪಟ್ಟೆ ಕೆಟ್ಟ ವಾಸನೆ ಬರುತ್ತಿದೆ. ಯಾಕೆ ಶುಚಿಗೊಳಿಸಿಲ್ಲ ಎಂದು ಪ್ರಶ್ನಿಸಿದರೆ ನಮ್ಮ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಚಾನೆಲ್ ಶುಚಿ ಮಾಡುವುದು ಬರುವುದಿಲ್ಲ. ಆದರೂ ಒಂದು ತಿಂಗಳ ಹಿಂದೆ ಟೆಂಡರ್ ಹಾಕಿಸಿ ತ್ಯಾಜ್ಯವನ್ನೆಲ್ಲಾ ತೆಗಿಸಿದ್ದೇವೆ. ಶುಚಿ ಮಾಡಿಸುತ್ತಿದ್ದೇವೆ” ಎಂದು ಹೇಳಿದರು.
“ಇದು ಸ್ಮಾರ್ಟ್ ಸಿಟಿ ವ್ಯಾಪ್ತಿಗೆ ಬರುತ್ತದೆ. ಇದರ ದುರಸ್ತಿಗೆ ಒಂದರಿಂದ ಎರಡು ಕೋಟಿ ರೂಪಾಯಿ ಅನುದಾನ ಬೇಕು. ಆದರೆ ಅಷ್ಟು ಅನುದಾನವಿಲ್ಲ. ಹಾಗಾಗಿ ಇದನ್ನು ಎರಡು ವರ್ಷದ ಹಿಂದೆಯೇ ಸ್ಮಾರ್ಟ್ ಸಿಟಿ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಯಾವುದೇ ಪ್ರಯೋಜನವಾಗಿಲ್ಲ” ಎಂದು ಪವನ್ ಕುಮಾರ್ ಹೇಳಿದರು.
“ಎರಡು ವರ್ಷದ ಹಿಂದೆ ಸಚಿವರು ಬಂದಾಗ ಲೆಟರ್ ಕೊಟ್ಟಿದ್ದೀವೆ. ಆದರೂ ಅವರು ಗಮನಕ್ಕೆ ತೆಗೆದುಕೊಂಡಿಲ್ಲ” ಎಂದರು.
ಶಿವಮೊಗ್ಗ ತಹಶೀಲ್ದಾರ್ ಗಿರೀಶ್ ಅವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಾನು ಬಂದು 10 ದಿನಗಳಾಗಿದೆ. ಇದಕ್ಕೂ ಮುನ್ನ ನಾಗರಾಜ್ ಎಂಬ ತಹಶೀಲ್ದಾರ್ ಇದ್ದರು. ನಾನು ಹೊಸದಾಗಿ ಬಂದಿರುವುದರಿಂದ ಪೂರ್ಣ ಮಾಹಿತಿ ಪಡೆದು ತಿಳಿಸುತ್ತೇನೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗದಗ | ಪಲ್ಸ್ ಪೋಲಿಯೋ ಲಸಿಕೆ ಹಾಕಿಸುವಂತೆ ಜಿಲ್ಲಾಧಿಕಾರಿ ವೈಶಾಲಿ ಮನವಿ
ಶಿವಮೊಗ್ಗ ಸ್ಮಾರ್ಟ್ ಸಿಟಿ ಕಚೇರಿಗೆ ಈ ದಿನ.ಕಾಮ್ ಪ್ರತಿನಿಧಿ ಭೇಟಿ ನೀಡಿ ವಿಚಾರಿಸಿದಾಗ ಸ್ಮಾರ್ಟ್ ಸಿಟಿ ಎಕ್ಸಿಕ್ಯುಟೀವ್ ಎಂಜಿನಿಯರ್ ವಿಜಯ್ ಕುಮಾರ್ ಅವರು ಮಹಾನಗರ ಪಾಲಿಕೆ ಸದಸ್ಯರಿಗೆ ಕರೆ ಮಾಡಿ, “ಆ ವಾರ್ಡ್, ಶಿವಮೊಗ್ಗ ನಗರ ಸ್ಮಾರ್ಟ್ ಸಿಟಿ ವ್ಯಾಪ್ತಿಗೆ ಬರುವುದಿಲ್ಲ. ಈಗ ಸೇರಿಸುವುದಕ್ಕೂ ಸ್ಮಾರ್ಟ್ ಸಿಟಿಯಲ್ಲಿ ಅನುದಾನವಿಲ್ಲ” ಎಂದು ತಿಳಿಸಿದ್ದಾರೆ.
“ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಥವಾ ಬೇರೆ ಯಾವುದಾದರೂ ಅನುದಾನ ಬಿಡುಗಡೆ ಮಾಡಿದ್ದಲ್ಲಿ ನೋಡೋಣ” ಎಂದು ಮಹಾನಗರ ಪಾಲಿಕೆ ಸದಸ್ಯರ ಮಗ ಪವನ್ ಕುಮಾರ್ ಅವರಿಗೆ ತಿಳಿಸಿದ್ದಾರೆ.
