ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ದ್ವೇಷದ ವಾತಾವರಣ ಹೆಚ್ಚಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಕೋಮು ದ್ವೇಷ ಅಧಿಕವಾಗಿ ಹಲವಾರು ಹಿಂಸಾಚಾರ, ಗಲಭೆಗಳು ನಡೆದಿದೆ. ಇದಕ್ಕೆ ಮುಖ್ಯ ಕಾರಣ ರಾಜಕೀಯ ನಾಯಕರುಗಳು ಮಾಡುವ ದ್ವೇಷ ಭಾಷಣ ಎಂಬುವುದು ಎಲ್ಲರಿಗೂ ತಿಳಿದಿರುವ ಸತ್ಯ. ಈ ದ್ವೇಷ ಭಾಷಣ ನಮ್ಮ ಸಮಾಜಕ್ಕೆ ದೊಡ್ಡ ಆಪತ್ತು ತಂದಿದೆ ಅನ್ನುವುದನ್ನು ನಾವು ಅಲ್ಲಗಳೆಯುವಂತಿಲ್ಲ.
ಈ ನಡುವೆ ಭಾರತದಲ್ಲಿ ಕಳೆದ ವರ್ಷ (2023) ಅತೀ ಹೆಚ್ಚು ದ್ವೇಷ ಭಾಷಣಗಳನ್ನು ಮಾಡಲಾಗಿದೆ ಎಂದು ವಾಷಿಂಗ್ಟನ್ ಡಿಸಿಯ ಸಂಶೋಧನಾ ಗುಂಪು ಐಎಚ್‌ಎಲ್‌ನ ವರದಿ ಹೇಳುತ್ತದೆ. ಈ ವರದಿ ನಮ್ಮ ಭಾರತದಲ್ಲಿ ತಲ್ಲಣವನ್ನು ಸೃಷ್ಟಿಸಿರುವ ದ್ವೇಷ ಭಾಷಣಗಳ ಸಂಖ್ಯೆ, ಯಾವ ಸಂಘಟನೆಗಳು ಅಧಿಕವಾಗಿ ದ್ವೇಷ ಭಾಷಣ ಮಾಡಿದೆ ಎಂಬ ಮಾಹಿತಿಯನ್ನೂ ಬಹಿರಂಗಗೊಳಿಸಿದೆ.
ಬಿಜೆಪಿ, ಸಂಘಪರಿವಾರದ ನಾಯಕರದ್ದೇ ಪ್ರಮುಖ ಪಾಲು
ನಮ್ಮ ದೇಶದಲ್ಲಿ ದ್ವೇಷ ಭಾಷಣದ ಪ್ರಕರಣಗಳು ಈ ಹಿಂದಿಗಿಂತ ಅಧಿಕವಾಗಿ ಕಳೆದ ವರ್ಷ ದಾಖಲಾಗಿದೆ. ಅದರಲ್ಲೂ ನಮ್ಮ ದೇಶ ಆಳುವ ಬಿಜೆಪಿ ಪಕ್ಷದ ನಾಯಕರು, ಅದರ ಅಂಗ ಸಂಸ್ಥೆಗಳಾದ ಸಂಘಪರಿವಾರದ ನಾಯಕರುಗಳು ಈ ದ್ವೇಷ ಭಾಷಣದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅಂದರೆ ಒಟ್ಟಾರೆಯಾಗಿ ನಮ್ಮ ದೇಶದಲ್ಲಿ ಗದ್ದಲ, ಗಲಭೆ ಸೃಷ್ಟಿಸುವ ವಿಚಾರದಲ್ಲಿ ಬಿಜೆಪಿ ನಾಯಕರ ಪಾಲು ಅಗಾಧವಾಗಿದೆ ಎಂಬುವುದು ನಿಜ.
ಎಷ್ಟು ದ್ವೇಷ ಭಾಷಣ ಪ್ರಕರಣ ದಾಖಲು?
2023ರಲ್ಲೇ ದೇಶದಲ್ಲಿ 668 ದ್ವೇಷ ಭಾಷಣ ಪ್ರಕರಣ ದಾಖಲಾಗಿದೆ. ಆ ಪೈಕಿ 498 ಪ್ರಕರಣಗಳು ಬಿಜೆಪಿ ಆಡಳಿತ ಇರುವ ಪ್ರದೇಶದಲ್ಲಿಯೇ ದಾಖಲಾಗಿದೆ. ಮೊದಲ ಆರು ತಿಂಗಳಲ್ಲಿ 255 ದ್ವೇಷ ಭಾಷಣ ಪ್ರಕರಣ ದಾಖಲಾಗಿದ್ದು ಉಳಿದ ಆರು ತಿಂಗಳಲ್ಲಿ ಬರೋಬ್ಬರಿ 413 ಪ್ರಕರಣಗಳು ರಿಜಿಸ್ಟಾರ್ ಆಗಿದೆ.
ಭಾರತದಲ್ಲಿ ಚುನಾವಣೆ ಸಂದರ್ಭದಲ್ಲಿ ಹೆಚ್ಚಾಗಿ ದ್ವೇಷ ಭಾಷಣಗಳನ್ನು ಮಾಡಲಾಗಿದೆ ಎಂದು ಈ ಸಂಶೋಧನಾ ಗುಂಪು ಐಎಚ್‌ಎಲ್‌ನ ವರದಿ ಹೇಳುತ್ತಿದೆ.
ಅಧಿಕ ದ್ವೇಷ ಭಾಷಣ ಮಾಡಲಾಗಿರುವ ಪ್ರಮುಖ ಎಂಟು ರಾಜ್ಯಗಳ ಪೈಕಿ ಆರು ರಾಜ್ಯಗಳಲ್ಲಿ ಬಿಜೆಪಿಯೇ ಆಡಳಿತ ಮಾಡುತ್ತಿದೆ. ಉಳಿದ ಎರಡು ರಾಜ್ಯಗಳಲ್ಲಿ 2023ರ ಚುಣಾವಣೆ ವೇಳೆ ದ್ವೇಷ ಭಾಷಣ ಮಾಡಲಾಗಿದೆ. ಅದು ಕೂಡಾ ಹೆಚ್ಚಾಗಿ ಬಿಜೆಪಿ, ಸಂಘಪರಿವಾರದ ನಾಯಕರೇ ಈ ಭಾಷಣ ಮಾಡಿರುವುದು.
ಅದರಲ್ಲೂ 2023ರ ಅಕ್ಟೋಬರ್ ತಿಂಗಳಲ್ಲೇ ಹೆಚ್ಚು ದ್ವೇಷ ಭಾಷಣ ಪ್ರಕರಣ ದಾಖಲಾಗಿದೆ. 18 ರಾಜ್ಯ, ಮೂರು ಕೇಂದ್ರಾಡಳಿತ ಪ್ರದೇಶದಲ್ಲಿ ಅಕ್ಟೋಬರ್ ಒಂದೇ ತಿಂಗಳಲ್ಲಿ 91 ಪ್ರಕರಣ ದಾಖಲಾಗಿದೆ. ಇದಕ್ಕೆಲ್ಲ ಕಾರಣ ‘ಚುನಾವಣೆ ಸೀಸನ್’ ಎಂದು ವಾಷಿಂಗ್ಟನ್‌ನ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಯಾವ ರಾಜ್ಯ ಮೊದಲ ಸ್ಥಾನದಲ್ಲಿ?
ಛತ್ತೀಸ್‌ಗಢ, ರಾಜಸ್ಥಾನ, ತೆಲಂಗಾಣ, ಮಧ್ಯಪ್ರದೇಶ, ಮಿಝೋರಾಂನಲ್ಲಿ ಚುನಾವಣಾ ಪ್ರಚಾರದ ವೇಳೆ, ಮತ ಪಡೆಯುವ ನಿಟ್ಟಿನಲ್ಲಿ ದ್ವೇಷ ಭಾಷಣ ಮಾಡಿದ್ದಾರೆ. ಇಡೀ ದೇಶದಲ್ಲೇ ಅತೀ ಹೆಚ್ಚು ದ್ವೇಷ ಭಾಷಣವನ್ನು ಮಹಾರಾಷ್ಟ್ರದಲ್ಲಿ ಮಾಡಲಾಗಿದೆ. 118 ಪ್ರಕರಣ ದಾಖಲಾಗಿದ್ದು, ಇದರಲ್ಲಿ ಬಹುತೇಕ ಎಲ್ಲವೂ ಮುಸ್ಲಿಂ ವಿರೋಧಿ ಭಾಷಣ ಆಗಿದೆ.
ಮಹಾರಾಷ್ಟ್ರದ ನಂತರದ ಸ್ಥಾನದಲ್ಲಿ ಬಿಜೆಪಿ ಆಡಳಿತ ಇರುವ ಉತ್ತರ ಪ್ರದೇಶ ಇದೆ. ಈ ರಾಜ್ಯದಲ್ಲಿ ಒಟ್ಟು 104 ಪ್ರಕರಣ ದಾಖಲಾಗಿದೆ. ಮೂರನೇ ಸ್ಥಾನದಲ್ಲಿ ಮಧ್ಯಪ್ರದೇಶವಿದ್ದು ಇಲ್ಲಿ 65 ಪ್ರಕರಣ ದಾಖಲಾಗಿದೆ. 2023 ರಲ್ಲಿ ಒಟ್ಟು ದಾಖಲಾಗಿರುವ ದ್ವೇಷ ಭಾಷಣ ಪ್ರಕರಣದಲ್ಲಿ ಶೇಕಡ 43 ರಷ್ಟು ಈ ಮೂರು ರಾಜ್ಯದಲ್ಲೇ ದಾಖಲಾಗಿದೆ.
ಒಟ್ಟು ದ್ವೇಷ ಭಾಷಣಗಳಲ್ಲಿ ಶೇಕಡ 7.2 ರಷ್ಟು ಹರಿಯಾಣದಲ್ಲಿ ಮತ್ತು ಶೇಕಡ 6ರಷ್ಟು ಉತ್ತರಾಖಂಡದಲ್ಲಿ ರಿಜಿಸ್ಟಾರ್ ಆಗಿದೆ. ಈ ಎಲ್ಲ ಭಾಷಣಗಳು ಮುಸ್ಲಿಮರ ಮೇಲೆ ಹಲ್ಲೆಗೆ, ಕೋಮು ಗಲಭೆಗೆ ಕಾರಣವಾಗಿದೆ. ಇದನ್ನು ನಾವೆಂದಿಗೂ ಅಲ್ಲಗಳೆಯುವಂತಿಲ್ಲ ಎಂದು ವರದಿ ತಿಳಿಸಿದೆ.
ಹೆಚ್ಚು ದ್ವೇಷ ಭಾಷಣ ಮಾಡಿದವರು ಯಾವ ಸಂಘಟನೆ ನಾಯಕರು?
ನಾವು ಯಾವ ಸಂಘಟನೆ ನಾಯಕರು ಅಧಿಕ ದ್ವೇಷ ಭಾಷಣ ಮಾಡಿದ್ದಾರೆ ಎಂದು ನೋಡಿದಾಗ ಅದರಲ್ಲಿ ಮೊದಲು ಬರುವುದು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ. 2023ರಲ್ಲಿ ಈ ಸಂಘಪರಿವಾರದ ನಾಯಕರುಗಳು 216 ದ್ವೇಷ ಭಾಷಣ ಮಾಡಿದ್ದಾರೆ.
ಇನ್ನು ಅಂತಾರಾಷ್ಟ್ರೀಯ ಹಿಂದೂ ಪರಿಷತ್ ಮತ್ತು ರಾಷ್ಟ್ರೀಯ ಭಜರಂಗ ದಳದ ಮುಖಂಡರ ವಿರುದ್ಧ 77 ದ್ವೇಷ ಭಾಷಣ ಪ್ರಕರಣ ದಾಖಲಾಗಿದೆ. ಬಿಜೆಪಿ ನಾಯಕರ ವಿರುದ್ಧ 50 ಪ್ರಕರಣ ದಾಖಲಾಗಿಗಿದ್ದರೆ, ಹಿಂದೂ ಜನ ಜಾಗೃತಿ ಸಮಿತಿ ವಿರುದ್ಧ 40 ಪ್ರಕರಣ ದಾಖಲಾಗಿದೆ.
ಇನ್ನುಳಿದ ದ್ವೇಷ ಭಾಷಣ ಪ್ರಕರಣಗಳು ಸಕಲ್ ಹಿಂದೂ ಸಮಾಜ್, ಹಿಂದೂ ರಾಷ್ಟ್ರ ಸೇನಾ, ಗುರು ರಕ್ಷಾ ದಳ, ಹಿಂದೂ ಜಾಗರಣ ಮಂಚ್, ಹಿಂದೂ ಮಹಾಸಭಾ, ಶ್ರೀ ರಾಮಸೇನೆ, ಮೊದಲಾದ ಸಂಘಟನೆ ನಾಯಕರ ಮೇಲೆ ರಿಜಿಸ್ಟಾರ್ ಆಗಿದೆ. ಒಟ್ಟಾರೆ ನೋಡಿದಾಗ 2023ರಲ್ಲಿ ಸಂಘಪರಿವಾರ- ಬಿಜೆಪಿ ನಾಯಕರೇ ಈ ದೇಶ ಒಡೆಯುವುದಕ್ಕೆ, ಗಲಭೆ, ಗದ್ದಲ ಸೃಷ್ಟಿಸುವುದಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ.
ಈ ಎಲ್ಲ ದ್ವೇಷ ಭಾಷಣದಿಂದಾಗಿ ದೇಶದಲ್ಲಿ ಕೋಮು ಗಲಭೆ, ಕೋಮು ದ್ವೇಷ ಹೆಚ್ಚಾಗುತ್ತಿರುವುದು ಖಂಡಿತ. ಮುಸಲ್ಮಾನ ವ್ಯಾಪಾರಿಗಳ ಜೊತೆ ವ್ಯವಹಾರ ಮಾಡಬೇಡಿ, ಮುಸ್ಲಿಮರ ಜೊತೆ ಸ್ನೇಹ ಮಾಡಬೇಡಿ ಎಂಬ ಹೇಳಿಕೆಗಳಿಂದಾಗಿ ದೇಶದಲ್ಲಿ ಧರ್ಮಗಳ ವಿಭಜನೆ ಈಗಾಗಲೇ ನಡೆದಿದೆ. ಒಂದೆಡೆ ಮುಸ್ಲಿಂ ಮೂಲಭೂತವಾದ, ಇನ್ನೊಂದೆಡೆ ಹಿಂದೂ ಕೋಮುವಾದ ಭಾರತದಲ್ಲಿ ಗದ್ದಲ ಸೃಷ್ಟಿಸುತ್ತಿರುವಾಗ ಬಡತನ, ನಿರುದ್ಯೋಗ, ಬೆಲೆ ಏರಿಕೆ ಸಮಸ್ಯೆಗಳು ಯಾವುದೇ ಧರ್ಮ ನೋಡದೆ ನಿಮ್ಮನ್ನು ಕಾಡುತ್ತದೆ ಅನ್ನುವುದಂತು ನಿಜ.
