ಹೆತ್ತ ತಾಯಿಯೇ ಮೂರು ವರ್ಷದ ಮಗುವನ್ನು ಮನೆಯಲ್ಲಿ ಕೂಡಿ ಹಾಕಿ, ಮನಬಂದಂತೆ ಥಳಿಸಿ ಚಿತ್ರಹಿಂಸೆ ನೀಡಿರುವ ಅಮಾನುಷ ಘಟನೆ ಬೆಂಗಳೂರಿನ ವಿಜಯನಗರದ ವೀರಭದ್ರನಗರದಲ್ಲಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ತಾಯಿ ಶಾರಿನ್ ಮತ್ತು ಆಕೆಯ ಪ್ರಿಯಕರನನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
ಶಾರಿನ್ ಎಂಬ ಮಹಿಳೆ ತನ್ನ ಮೂರು ವರ್ಷದ ಮಗುವಿಗೆ ಕೊಡಬಾರದ ಹಿಂಸೆ ಕೊಟ್ಟಿದ್ದು, ಮಗುವಿನ ಮೈ ತುಂಬಾ ಗಾಯಗಳಾಗಿದ್ದವು. ಕುಕ್ಕರ್‌ನಿಂದ ಬಡಿದಿರುವುದಾಗಿ ಹೇಳಿಕೊಂಡಿದ್ದ ಮಗುವಿನ ಹಣೆ, ತಲೆಗೂ ಗಾಯಗಳಾಗಿದ್ದವು. ಮಗುವಿನ ಕೈ ಬೆರಳುಗಳಲ್ಲಿ ರಕ್ತ ಹೆಪ್ಪುಗಟ್ಟಿ ಊದಿಕೊಂಡಿದ್ದವು.
ಮೂರು ವರ್ಷದ ಮಗು ತನ್ನ ತೊದಲು ನುಡಿಯಲ್ಲೇ, “ಅಮ್ಮ ತನಗೆ ಹೊಡೆದು ಕೂಡಿ ಹಾಕಿದ್ದಾಳೆ, ಹಸಿವಾಗಿದೆ ಎಂದರೂ ಊಟ ಕೊಡುತ್ತಿಲ್ಲ. ನನಗೆ ನೀನು ಬೇಡ ಆಚೆ ಹೋಗೆಂದು ಹೊಡೆಯುತ್ತಿದ್ದಾಳೆ. ಮನೆಗೆ ಬಂದ ಅಂಕಲ್ ಕೂಡ ಕುಕ್ಕರ್‌ನಿಂದ ತಲೆಗೆ ಹೊಡೆದಿದ್ದಾರೆ” ಎಂದು ಹೇಳಿಕೊಂಡಿರುವ ದೃಶ್ಯ ಸಾಮಾಜಿಕ ಜಾಲಾತಾಣದಲ್ಲಿ ವೈರಲಾಗಿತ್ತು.
ಸ್ಥಳೀಯರ ಪ್ರಕಾರ, “ಶಾರಿನ್ ಎಂಬ ಮಹಿಳೆ ಕೆಲವು ದಿನಗಳ ಹಿಂದೆಯಷ್ಟೇ ವೀರಭದ್ರನಗರಕ್ಕೆ ಬಂದಿದ್ದು, ಈಗ ಏಕಾಏಕಿಯಾಗಿ ಮನೆ ಖಾಲಿ ಮಾಡುವುದಾಗಿ ಹೇಳಿ ಮನೆ ಖಾಲಿ ಮಾಡಲು ಮುಂದಾಗಿದ್ದಾಳೆ. ಈ ವೇಳೆ ಆಕೆಯನ್ನು ಹಿಡಿದಿದ್ದೇವೆ. ಹಲವು ದಿನಗಳಿಂದ ಮಹಿಳೆ ಹಗಲಲ್ಲಿ ತಾನು ಕೆಲಸಕ್ಕೆ ಹೋಗುವಾಗ ಮಗುವನ್ನು ಮನೆಯಲ್ಲಿ ಕೂಡಿಟ್ಟು, ಹೊರಗಡೆ ಬೀಗ ಹಾಕಿ ಹೋಗುತ್ತಿದ್ದಳು. ಮಗು ಹಸಿವು ಎಂದು ಕೂಗಿಕೊಂಡರೂ ಮಗುವಿಗೆ ಏನೂ ಕೊಡದೆ ಹಿಂಸಿಸುತ್ತಿದ್ದರು” ಎಂದು ಮಾಹಿತಿ ನೀಡಿದ್ದಾರೆ.
ಮಗುವಿನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಮಕ್ಕಳ ಕಲ್ಯಾಣ ಸಮಿತಿಯಿಂದ ಮಗುವನ್ನು ರಕ್ಷಣೆ ಮಾಡಿದ್ದು, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡುತ್ತಿರುವುದಾಗಿ ತಿಳಿದುಬಂದಿದೆ.
ಮಹಿಳೆಯು, “ತನಗೆ ವಿಚ್ಛೇದನಕ್ಕಾಗಿ ಅರ್ಜಿ ಹಾಕಿದ್ದೇನೆ. ನಾನಿರುವ ಸ್ಥಿತಿಯಲ್ಲಿ ನನಗೆ ಮಗು ನೋಡಿಕೊಳ್ಳಲು ಆಗುತ್ತಿಲ್ಲ. ಮಗು ಬುದ್ಧಿ ಕಲಿಯಲಿ, ಸ್ವಂತ ಕಾಲಿನ ಮೇಲೆ ನಿಲ್ಲಲಿ ಎಂದು ಮನೆಗೆ ಬೀಗ ಹಾಕಿ ಹೋಗಿದ್ದೇನೆ. ಆ ವೇಳೆ ಮಗು ಬಿದ್ದು ಗಾಯವಾಗಿದೆ ಅಷ್ಟೇ. ಆದರೆ, ಸುಳ್ಳು ಹೇಳುತ್ತಿದೆ” ಎಂದು ಮಾಧ್ಯಮಗಳ ಮುಂದೆಯೇ ಆರೋಪಿ ತಾಯಿ ಹೇಳಿಕೆ ನೀಡಿದ್ದರು.
ಈ ಸುದ್ದಿ ಓದಿದ್ದೀರಾ? ಕಡಬ | ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ; ಕಿಡಗೇಡಿ ಬಂಧನ
ತಲೆಮರೆಸಿಕೊಂಡಿದ್ದ ಆಕೆಯ ಪ್ರಿಯಕರ ಮತ್ತು ಆಕೆ ಇಬ್ಬರನ್ನೂ ಗಿರಿನಗರ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಈ ದಿನ.ಕಾಮ್ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ತಿಪ್ಪೇಸ್ವಾಮಿ ಅವರನ್ನು ಸಂಪರ್ಕಿಸಿದೆ. ಆದರೆ ಅವರು ಕರೆಗೆ ಲಭ್ಯವಾಗಿಲ್ಲ.
