ಜಲ್ ಜೀವನ ಮಿಶಿನ್ (ಜೆಜೆಎಂ) ಕುಡಿಯುವ ನೀರಿನ ಯೋಜನೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ತಕ್ಷಣವೇ ಬಿಲ್ ತಡೆಹಿಡಿಯಬೇಕು ಎಂದು ಕಲಬುರಗಿ ಜಿಲ್ಲೆಯ 8 ಗ್ರಾಮ ಪಂಚಾಯತ್‌ನಲ್ಲಿ ಸೂಕ್ತ ತನಿಖೆ ನಡೆಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ಆಗ್ರಹಿಸಿದೆ.
ಕಲಬುರಗಿ ಜಿಲ್ಲಾ ಪಂಚಾಯತ್ ಅಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದ ಸಂಘಟನೆಯ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೇಟ್ಟಿ, “ಕಲಬುರಗಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಮತ್ತು ರಟಕಲ್ ಗ್ರಾಮ ಪಂಚಾಯಿತಿ ಕುಡಿಯುವ ನೀರಿನ ಜೆಜೆಎಂ ಯೋಜನೆ ಸಂಪೂರ್ಣ ಕಳಪೆ ಮಟ್ಟದ ಕಾಮಗಾರಿಯಿಂದ ಕೂಡಿದೆ. ಸೂಕ್ತ ವಾದ ತನಿಖೆ ನಡೆಸಿ ಆ ಕಾಮಗಾರಿ ಬಿಲ್ ತಡೆಹಿಡಿಯಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಜೆಜೆಎಂ ಕಾಮಗಾರಿ ಗುತ್ತಿಗೆದಾರರ ಪರವಾನಗಿಯನ್ನು ಕಪ್ಪು ಪಟ್ಟಿಗೆ ಸೇರಿಸಿ ಕ್ರಿಮಿನಲ್ ಕೇಸ್ ದಾಖಲಿಸಿ ಪುನಃ ಸರ್ಕಾರದ ಹಣ ಮರಳಿ ಸರ್ಕಾರಕ್ಕೆ ವಾಪಾಸು ಪಡೆಯಬೇಕು” ಎಂದು ಒತ್ತಾಯಿಸಿದರು.
ಸಾರ್ವಜನಿಕರ ಹಿತದೃಷ್ಟಿಯಿಂದ ಕುಡಿಯುವ ನೀರಿನ ಆಹಾಕಾರ ನೀಗಿಸಲು, ಈ ಯೋಜನೆ ಉದ್ದೇಶ ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ. ಆದರೆ, ಕುಡಿಯುವ ನೀರು ಖಾಸಗೀಕರಣ ಹಿಂದಿನ ಬಾಗಿಲಿನಿಂದ ಈ ಯೋಜನೆ ಮೂಲಕ ಜಾರಿಗೆ ತರುತ್ತಿರುವುದು ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.
ಜೆಜೆಎಂ ಯೋಜನೆ ಪ್ರತೀ ಮನೆಗೆ ಕುಡಿಯುವ ನೀರಿನ ನಳಕ್ಕೆ ಮೀಟರ್ ಅಳವಡಿಸಿ ಒಂದು ಮನೆಗೆ ಒಂದು ನಳಕ್ಕೆ 55ಲೀಟರ್ ನೀರು ಮಾತ್ರ ಉಚಿತವಾಗಿ ಸಿಗುತ್ತವೆ. ಹೆಚ್ಚಿನ ನೀರು ಬಳಸಿದರೆ ಹಣ ಕೊಟ್ಟು ಕುಡಿಯುವ ನೀರು ಖರೀದಿ ಮಾಡಬೇಕೆಂದು. ಮಾಹಿತಿ ನೀಡದೇ ಅದಕ್ಕಾಗಿ ಮೀಟರ್ ಹಾಕುತ್ತಿದ್ದಾರೆ. ರೈತರ ಕಾರ್ಮಿಕರ ಬಡವರ ಮನೆಗಳಲ್ಲಿ ಒಕ್ಕಲುತನದ ಮನೆಯಲ್ಲಿ ಎತ್ತುಗಳು, ದನಗಳು, ಕುರಿಗಳು, ಎಮ್ಮೆಗಳು, ಕೋಳಿಗಳು, ನಾಯಿಗಳು, ಹಂದಿಗಳು ಕುಡಿಯುವ ನೀರಿಗೆ ಬಿಲ್ ಬರುವ ಬಹುತೇಕ ಸಾಧ್ಯತೆಗಳು ಎದ್ದು ಕಾಣುತ್ತಿದೆ ಎಂದರು.
ಸರಾಸರಿ ಬೇಸಿಗೆ ಸಮಯದಲ್ಲಿ ಒಂದು ಎಮ್ಮೆ 60ಲೀಟರ್ ನೀರು ಕುಡಿಯುತ್ತದೆ. ಒಂದು ಎತ್ತು 36ಲೀಟರ್ ನೀರು ಒಂದು ಟೈಮಲ್ಲಿ ಕುಡಿಯುತ್ತದೆ. ಒಟ್ಟು ಮೂರು ಟೈಮ್ ನೀರು ದಿನ ಕರುಗಳಿಗೆ ಸರಿ ಹೋಗುವುದಿಲ್ಲ. ನಾಗರಿಕರ ಹಿತ ಕಡೆಗಣಿಸುವ ಉದ್ದೇಶ ಈ ಯೋಜನೆಯಲ್ಲಿ ಎದ್ದು ಕಾಣುತ್ತದೆ. ಹೀಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಕುಡಿಯುವ ನೀರು ಎಲ್ಲರಿಗೂ ಸಿಗುವಂತಾಗಬೇಕು ಎಂದು ರೈತ ಸಂಘ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಇದಕ್ಕೆ ಸಂಬಂಧಪಟ್ಟ ಇಂಜಿನಿಯರ್‌ಗಳು ಎಡಬ್ಲ್ಯೂಯೂಗಳು ಮತ್ತು ಎಕ್ಸಿಟಿವ್ ಇಂಜಿನಿಯರ್‌ಗಳು ಮೌನವಹಿಸಿದ್ದಾರೆ. ಸರ್ಕಾರದ ಹಣ ಖರ್ಚಾಗುವುದು ತಪ್ಪುತಿಲ್ಲ. ಜನರಿಗೆ ಕುಡಿಯುವ ನೀರು ಸಿಗುವುದಿಲ್ಲ. ಒಂದು ಕೊಡ ನೀರಿಗಾಗಿ ಸಾರ್ವಜನಿಕರು ಪರದಾಡುತ್ತಿದ್ದಾರೆ. ಸಾವಿರಾರು ಕೋಟಿ ರೂಪಾಯಿ ತಿರುಪತಿ ತಿಮ್ಮಪ್ಪನ ಹುಂಡಿಗೆ ಹಾಕಿದಂತಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಇದೊಂದು ದೊಡ್ಡ ಪ್ರಮಾಣದ ಭ್ರಷ್ಟಾಚಾರ, ಇದು ರಾಜಾರೋಷವಾಗಿ ನಡೆಯುತ್ತಿದೆ ಇದರ ಬಗ್ಗೆ ಸೂಕ್ತ ತನಿಖೆ ನಡೆಬೇಕು ಎಂದು ಒತ್ತಾಯಿಸಿದರು.
ಕಲಬುರಗಿ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ, ಗ್ರಾಮೀಣ ಪ್ರದೇಶದ ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಸಾರ್ವಜನಿಕರು ಪರದಾಡುತ್ತಿದ್ದಾರೆ. ಆದರೆ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ರಾಜ್ಯ ಸರ್ಕಾರ ಒಂದು ಗ್ರಾಮಕ್ಕೆ 2ಕೋಟಿ ರೂ. ಹಣ ಮಂಜೂರು ಮಾಡಲಾಗಿದೆ. ಟೆಂಡರ್ ಕೂಡ ಕರೆಯಲಾಗಿದೆ ಈಗಾಗಲೇ 5 ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿ ಪ್ರಾರಂಭವಾಗಿದ್ದು. ಅದು ಸಂಪೂರ್ಣವಾಗಿ ಕಳಪೆ ಮಟ್ಟದ ಕಾಮಗಾರಿ ಆಗಿದೆ. ಇನ್ನೂ ಕೆಲಸ ಮುಗಿದಿಲ್ಲ. ಸರ್ಕಾರದ ಹಣ ಎತ್ತಿ ಹಾಕುವ ಸಂಚು ರೂಪಿಸಿದ್ದಾರೆ, ಕೂಡಲೇ ತನಿಖೆ ನಡೆಸಿ ಬಿಲ್ ತಡೆಹಿಡಿಯಬೇಕು ಎಂದು ಕೆಪಿಆರ್‌ಎಸ್ ಪಕ್ಷ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಸಾಯಬಣ್ಣ ಗುಡುಬಾ, ದಿಲೀಪ್ ನಾಗೂರೆ, ಹಣಮಂತಪೂಜಾರಿ ಇನ್ನಿತರರು ಉಪಸ್ಥಿತರಿದ್ದರು.