ರಾಜಧಾನಿ ಬೆಂಗಳೂರಿನಲ್ಲಿ ಜೈಲು ಖೈದಿಗಳ ಆಮೂಲಾಗ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾರ್ಚ್ 5ರಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) 7 ರಾಜ್ಯಗಳ 17 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. ರಾಜ್ಯದ ಮೂರು ಜಿಲ್ಲೆಗಳಲ್ಲಿ – ಬೆಂಗಳೂರು, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ – ಮಂಗಳವಾರ ಶೋಧ ಕಾರ್ಯ ನಡೆಸಿರುವ ಎನ್‌ಐಎ ಅಧಿಕಾರಿಗಳು ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಮೂಲತಃ ಕೇರಳ ಇಡುಕ್ಕಿ ನಿವಾಸಿ, ಬೆಂಗಳೂರಿನಲ್ಲಿರುವ ಸೈಯದ್ ಖೈಲ್, ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಬಿಜು ಅಬ್ರಹಾಂ ಹಾಗೂ ಅತ್ತಾವರ ಗ್ರಾಮದ ನಬೀದ್ ಎಂಬ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳ ಬಗ್ಗೆ ಪೂರಕ ದಾಖಲೆಗಳನ್ನು ಸಂಗ್ರಹಿಸಿದ್ದ ಅಧಿಕಾರಿಗಳು, ಎರಡು ತಂಡಗಳಾಗಿ ಮಂಗಳೂರು ಮತ್ತು ಅಂಕೋಲಾಕ್ಕೆ ಭೇಟಿ ನೀಡಿದ್ದರು. ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿ ನಾಸಿರ್ ಖಾನ್ ಎಂಬಾತನಿಗಾಗಿ ಹುಡುಕಾಟ ನಡೆಸಿದ್ದರು.
ಎನ್‌ಐಎ ದಾಳಿ
ಬೆಂಗಳೂರು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಜೈಲು ಆಮೂಲಾಗ್ರೀಕರಣ ಪ್ರಕರಣದಲ್ಲಿ ತನ್ನ ತನಿಖೆಯ ವ್ಯಾಪ್ತಿಯನ್ನು ಎನ್‌ಐಎ ಮಂಗಳವಾರ ಏಳು ರಾಜ್ಯಗಳ ಅನೇಕ ಸ್ಥಳಗಳ ಮೇಲೆ ದಾಳಿ ಮಾಡಿದೆ. ನಗದು ಸಹಿತ ಡಿಜಿಟಲ್ ಸಾಧನಗಳು ಮತ್ತು ದೋಷಾರೋಪಣೆ ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ಟ್ವೀಟ್ ಮೂಲಕ ಹೇಳಿದೆ.
“ಎನ್‌ಐಎ ತಂಡಗಳು ಮಾರ್ಚ್ 5ರಂದು ಬೆಳಗ್ಗೆ ಕರ್ನಾಟಕ, ತಮಿಳುನಾಡು, ತೆಲಂಗಾಣ, ಪಂಜಾಬ್, ಗುಜರಾತ್ ಮತ್ತು ಪಶ್ಚಿಮ ಬಂಗಾಳದ ನಾನಾಕಡೆ ಶಂಕಿತರ ನೆಲೆಗಳಲ್ಲಿ ದಾಳಿ ನಡೆಸಿವೆ. ನಾನಾ ದೇಶಗಳ ಕರೆನ್ಸಿ ನೋಟುಗಳ ಹೊರತಾಗಿ 25 ಮೊಬೈಲ್ ಫೋನ್‌ಗಳು, 6 ಲ್ಯಾಪ್‌ಟಾಪ್‌ಗಳು ಮತ್ತು 4 ಹಾರ್ಡ್ ಡಿಸ್ಕ್ಗಳು, ನಾನಾ ದೋಷಾರೋಪಣೆ ದಾಖಲೆಗಳು ಮತ್ತು ನಗದನ್ನು ವಶಪಡಿಸಿಕೊಂಡಿದೆ” ಎಂದು ಹೇಳಿದೆ.
NIA Raids Multiple Locations in 7 States in LeT Prison Radicalisation Case pic.twitter.com/xgkn55ob7P
— NIA India (@NIA_India) March 5, 2024
“ಬೆಂಗಳೂರಿನ ಸೈಯದ್ ಕೈಲ್, ಮಂಗಳೂರಿನ ನವೀದ್, ದಕ್ಷಿಣ ಕನ್ನಡದ ಬಿಜ್ಜು, ಪಶ್ಚಿಮ ಬಂಗಾಳದ ಮಯೂರ್ ಚಕ್ರಬೋರ್ತಿ, ಪಂಜಾಬ್‌ನ ನವಜೋತ್ ಸಿಂಗ್, ಗುಜರಾತ್‌ನ ಹಾರ್ದಿಕ್ ಕುಮಾರ್, ಕರಣ್‌ಕುಮಾರ್, ಕೇರಳದ ಜಾನ್ಸನ್, ತಮಿಳುನಾಡಿನ ಮುಸ್ತಾಕ್ ಅಹ್ಮದ್ ಸತೀಕ್ ಅಲಿ, ಮೊಬಿತ್, ಹಸನ್ ಅಲ್ ಬಸ್ಸಮ್‌ಗೆ ಸೇರಿದ್ದ ಸ್ಥಳಗಳ ಮೇಲೆ ದಾಳಿ ಮಾಡಲಾಗಿದೆ. ಇದರಲ್ಲಿ ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಹಲವರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಯಲಾಗಿದೆ. ಕೆಲವರು ತಲೆಮರೆಸಿಕೊಂಡಿದ್ದಾರೆ” ಎಂದು ತಿಳಿಸಿದೆ.
2023ರಿಂದ ಪ್ರಕರಣದ ತನಿಖೆ
ಎನ್‌ಐಎ 2023ರ ಅಕ್ಟೋಬರ್ 25ರಿಂದ ಈ ಪ್ರಕರಣದ ತನಿಖೆ ನಡೆಸುತ್ತಿದೆ. ಸಂಸ್ಥೆಯು 2024ರ ಜನವರಿ 12ರಂದು ಆರೋಪಿಗಳಾದ ಜುನೈದ್ ಅಹ್ಮದ್ ಮತ್ತು ಸಲ್ಮಾನ್ ಖಾನ್ ಸೇರಿದಂತೆ ಎಂಟು ವ್ಯಕ್ತಿಗಳ ವಿರುದ್ಧ ನಾನಾ ಸೆಕ್ಷನ್‌ಗಳ ಅಡಿಯಲ್ಲಿ ಚಾರ್ಜ್‌ಶೀಟ್ ಸಲ್ಲಿಸಿತ್ತು. ಈ ಎಲ್ಲ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಪರಾರಿಯಾಗಿರುವವರು ಎಲ್ಇಟಿಯ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಮತ್ತು ಅನಾಮಧೇಯವಾಗಿ ನಾನಾ ವ್ಯಕ್ತಿಗಳಿಗೆ ಹಣ ರವಾನಿಸಲು ಭಾರತದಾದ್ಯಂತ ಜಾಲವನ್ನು ಸ್ಥಾಪಿಸಿದ್ದಾರೆ ಎಂದು ತನಿಖೆಗಳು ಹೇಳಿವೆ.
ಈ ನಡುವೆ, ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಎಲ್‌ಇಟಿ ಭಯೋತ್ಪಾದಕ ಕೈದಿಗಳನ್ನು ಆಮೂಲಾಗ್ರೀಕರಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರು ನಗರ ಪೊಲೀಸರು 7 ಪಿಸ್ತೂಲ್‌ಗಳು, 4 ಹ್ಯಾಂಡ್ ಗ್ರೆನೇಡ್‌ಗಳು, ಒಂದು ಮ್ಯಾಗಜೀನ್, ಶಸ್ತ್ರಾಸ್ತ್ರ, ಮದ್ದುಗುಂಡು, 4 ವಾಕಿ-ಟಾಕಿಗಳೊಂದಿಗೆ ವಶಪಡಿಸಿಕೊಂಡ ನಂತರ ಈ ಪ್ರಕರಣವನ್ನು ದಾಖಲಿಸಿದ್ದರು. ಕೆಲವು ಕೈದಿಗಳು ಭಯೋತ್ಪಾದಕ ಚಟುವಟಿಕೆಗಳಿಗೆ ಪಿತೂರಿಯಲ್ಲಿ ಭಾಗವಾಗಿದ್ದಾರೆ ಎಂದು ಪ್ರಕರಣದಲ್ಲಿ ವಿವರಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಕೆಐಎ | ₹2.63 ಕೋಟಿ ಮೌಲ್ಯದ ಚಿನ್ನ ವಶಕ್ಕೆ ಪಡೆದ ಡಿಆರ್‌ಐ
ಪ್ರಕರಣ ಬೆಳಕಿಗೆ ಬಂದ ಬಳಿಕ, ಎನ್‌ಐಎ ದಾಳಿ ನಡೆಸಿದೆ. ಎನ್‌ಐಎ ಅಧಿಕಾರಿಗಳು ಮಾರ್ಚ್ 4ರ ರಾತ್ರಿ 8 ಗಂಟೆಯಿಂದ ಬೆಳಗಿನ ಜಾವ 6 ಗಂಟೆವರೆಗೂ ಪರಪ್ಪನ ಅಗ್ರಹಾರದಲ್ಲಿ ಪರಿಶೀಲನೆ ನಡೆಸಿ ನಜೀರ್ ಸೇರಿದಂತೆ ಅನೇಕರ ವಿಚಾರಣೆ ನಡೆಸಿದ್ದರು. ಇದೀಗ, ಮೂವರನ್ನು ಬಂಧಿಸಿದ್ದಾರೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ತಲೆಮರೆಸಿಕೊಂಡಿರುವವರ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ಎನ್‌ಐಎ ಹೇಳಿದೆ.