ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಜಾರಿಯಾದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆ ಹಲವಾರು ಕೂಲಿ ಕಾರ್ಮಿಕರಿಗೆ ಜೀವನಾಡಿಯಾಗಿದೆ. ಆದರೆ, ಸರಿಯಾದ ಸಮಯಕ್ಕೆ ವೇತನ ಸಿಗದೆ ಈ ಕಾರ್ಮಿಕರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ರಾಜ್ಯದ 13 ಜಿಲ್ಲೆಗಳು ಸೇರಿದಂತೆ ಉತ್ತರ ಕರ್ನಾಟಕ ಭಾಗದ ಮನರೇಗಾ ಕೂಲಿಕಾರ್ಮಿಕರ ಅಂದಾಜು 270.5 ಕೋಟಿ ರೂ. ವೇತನವನ್ನು ಕೇಂದ್ರ ಸರ್ಕಾರ ನೀಡುವುದು ಬಾಕಿ ಇದೆ ಎಂದು ಕೂಲಿ ಕಾರ್ಮಿಕರು ಹೇಳಿದ್ದಾರೆ.
ಮನರೇಗಾ ಯೋಜನೆಯು ಗ್ರಾಮೀಣ ಕಾರ್ಮಿಕರಿಗೆ ವರದಾನವಾಗಿದ್ದು, ಗ್ರಾಮೀಣ ಕಾರ್ಮಿಕರಿಗೆ ಅವರ ಸ್ವಂತ ಗ್ರಾಮಗಳಲ್ಲಿ ಉದ್ಯೋಗ ನೀಡುವುದು ಯೋಜನೆಯ ಉದ್ದೇಶ. ಗ್ರಾಮ ಪಂಚಾಯತಿಯಿಂದ ಅನುಷ್ಠಾನಗೊಳ್ಳುವ ಯೋಜನೆಗಳಿಗೆ, ಜಿಲ್ಲಾ ಪಂಚಾಯತಿಯಿಂದ ಅನುಮೋದನೆ ಪಡೆದು ಗ್ರಾಮೀಣ ಪ್ರದೇಶದ ಕೂಲಿಕಾರರನ್ನು ಬಳಸಿಕೊಳ್ಳಬೇಕು. ಹೆಸರು ನೋಂದಾಯಿಸಿದ ಹಾಗೂ ಜಾಬ್ ಕಾರ್ಡ್ ಹೊಂದಿರುವ ಕೂಲಿಕಾರ್ಮಿಕರಿಗೆ ದಿನಕ್ಕೆ 316 ರೂ. ಪಾವತಿಸಿ ಗ್ರಾಮೀಣ ಕಾಮಗಾರಿಗೆ ಬಳಸಿಕೊಳ್ಳಬೇಕು ಎಂಬ ನಿರ್ದೇಶನವಿದೆ. ಮೊತ್ತವನ್ನು ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಬಾಗಲಕೋಟೆಯಲ್ಲಿ ಕೂಲಿ ಕಾರ್ಮಿಕರಿಗೆ ಸೇರಬೇಕಿದ್ದ 13.3 ಕೋಟಿ ರೂ. ಬಾಕಿ ಇದೆ, ಬಳ್ಳಾರಿಯಲ್ಲಿ 2.8 ಕೋಟಿ, ಬೆಳಗಾವಿಯಲ್ಲಿ 50.2 ಕೋಟಿ, ಬೀದರ್‌ನಲ್ಲಿ 23.9 ಕೋಟಿ, ಧಾರವಾಡದಲ್ಲಿ 8.6 ಕೋಟಿ, ಗದಗದಲ್ಲಿ 8.9, ಹಾವೇರಿಯಲ್ಲಿ 16.7, ಕಲಬುರಗಿಯಲ್ಲಿ 17. 1 ಕೋಟಿ, ಕೊಪ್ಪಳದಲ್ಲಿ 23.3 ಕೋಟಿ, ರಾಯಚೂರಿನಲ್ಲಿ 23 ಕೋಟಿ, ವಿಜಯನಗರದಲ್ಲಿ 19.1 ಕೋಟಿ, ವಿಜಯಪುರದಲ್ಲಿ 16.2 ಕೋಟಿ, ಯಾದಗಿರಿಯಲ್ಲಿ 28.7 ಕೋಟಿ ರೂ. ವೇತನ ಬಾಕಿ ಇದೆ ಎಂದು ವರದಿಯಾಗಿದೆ.
ʼನಮ್ಮ ಬೇಡಿಕೆಯಂತೆ ಪ್ರತೀ ಕುಟುಂಬಕ್ಕೆ 100 ದಿನಗಳ ವಾರ್ಷಿಕ ಉದ್ಯೋಗಾವಕಾಶವನ್ನು 150 ದಿನಗಳಿಗೆ ಹೆಚ್ಚಳಮಾಡಲಾಗಿದೆ. ಆದರೆ, ತಾಂತ್ರಿಕ ಕಾರಣಗಳಿಂದ ಗ್ರಾಮೀಣ ಭಾಗದಲ್ಲಿ ಜಾರಿಯಾಗುತ್ತಿಲ್ಲ. ಇನ್ನೊಂದೆಡೆ ಕಳೆದ ಎರಡು ತಿಂಗಳಿಂದ ಎಂಜಿಎನ್‌ಇಆರ್‌ಜಿಎ ವೇತನ ಪಾವತಿಯಾಗಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಕೆಲಸ ಅನಿವಾರ್ಯ. ಆದರೆ, ಬಾಕಿ ಉಳಿಸಿಕೊಂಡಿರುವುದರಿಂದ ಕಾರ್ಮಿಕರಿಗೆ ಸಮಸ್ಯೆಯಾಗುತ್ತಿದೆ,ʼ ಎಂದು ಕಾರ್ಯಕರ್ತೆ ನಿಗಮ್ಮ ಸವಣೂರ ಮಾದ್ಯಮದವರಿಗೆ ಮಾಹಿತಿ ನೀಡಿದ್ದಾರೆ.
ಡಿಸೆಂಬರ್ 2ರಂದು ಕೂಲಿ ಸಿಕ್ಕಿತ್ತು, ಅಂದಿನಿಂದ ವೇತನ ಸಿಕ್ಕಿಲ್ಲ. ಧಾರವಾಡ ಜಿಲ್ಲೆಯಲ್ಲಿ 8.6 ಕೋಟಿ ರೂ. ಬಾಕಿ ಇದೆ. ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ಉದ್ಯೋಗಕ್ಕೆ ಸಾಕಷ್ಟು ಬೇಡಿಕೆ ಇದೆ. ಅಲ್ಲದೆ ಇತ್ತೀಚೆಗೆ ಕಲಘಟಗಿ ತಾಲೂಕಿನ ತಾವರಗೇರಿ, ದಾಸ್ತಿಕೊಪ್ಪ, ಸೂಳಿಕಟ್ಟಿ, ತಂಬೂರು ಸುತ್ತಮುತ್ತಲಿನ ಗ್ರಾಮಗಳ ಕೂಲಿ ಕಾರ್ಮಿಕರು ವೇತನ ಬಿಡುಗಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಶೀಘ್ರವೇ ವೇತನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.