ತನ್ನ ಪ್ರೀತಿಗೆ ಕುಟುಂಬಸ್ಥರು ಅಡ್ಡಿಪಡಿಸಿದರೆಂದು ಪ್ರಬಲ ಜಾತಿಯ ಯುವತಿ ದಲಿತ ಯುವಕನೊಂದಿಗೆ ಊರು ತೊರೆದು ಹೋಗಿದ್ದರು. ಯುವಕನ ಚಿಕ್ಕಮ್ಮನ ಮನೆಯಲ್ಲಿ ಆಶ್ರಯ ಪಡೆದು, ವಿವಾಹವಾಗಿದ್ದರು. ಆದರೆ, ಅವರ ಪ್ರೀತಿ ವಿವಾಹವಾದ ನಾಲ್ಕೇ ತಿಂಗಳಲ್ಲಿ ಅಂತ್ಯ ಕಂಡಿದೆ. ಅವರ ಪ್ರೀತಿಯನ್ನು ಜಾತಿ ಎಂಬ ಪೆಡಂಬೂತ ಕೊಂದು ಹಾಕಿದೆ.
ತಮಿಳುನಾಡಿನ ಚೆನ್ನೈನ ಪಲ್ಲಿಕರಣೈ ಪ್ರದೇಶದಲ್ಲಿ ದಲಿತ (ಪರಯ್ಯರ್ ಸಮುದಾಯ) ಯುವಕ ಪ್ರವೀಣ್‌ನನ್ನು ಯಾದವರ ಜಾತಿಯ ಯುವತಿ ಶರ್ಮಿಳಾಳ ಅಣ್ಣ ದಿನೇಶ್ ಕೊಲೆ ಮಾಡಿದ್ದಾನೆ. ತನ್ನ ನಾಲ್ವರು ಸ್ನೇಹಿತರೊಂದಿಗೆ ಸೇರಿ ಫೆಬ್ರವರಿ 24ರಂದು ಹತ್ಯೆ ಗೈದಿದ್ದಾನೆ. ಆತನ ಮೃತದೇಹದ ಮುಂದೆ ಶರ್ಮಿಳಾ ಆಕ್ರಂದನ ಮುಗಿಲು ಮುಟ್ಟಿತ್ತು. ನಿತ್ರಾಣಗೊಂಡಿದ್ದ ಆಕೆ, “ಅವನು ನನ್ನನ್ನು ಎಂದಿಗೂ ಒಂಟಿಯಾಗಿ ಬಿಟ್ಟುಹೋಗುವುದಿಲ್ಲ ಎಂದಿದ್ದ. ಆದರೆ, ಈಗ ಅವನು ನನ್ನನ್ನು ಬಿಟ್ಟುಹೋಗಿದ್ದಾನೆ” ಎಂದು ಅಳುತ್ತಿದ್ದ ದೃಶ್ಯ ಇಡೀ ವ್ಯವಸ್ಥೆಯನ್ನು ತಲೆ ತಗ್ಗಿಸುವಂತೆ ಮಾಡಿತ್ತು.
ಹತ್ಯೆಯಾದ ಬಳಿಕ ಆರೋಪಿಗಳಾದ ಶ್ರೀರಾಮ್ (18), ವಿಷ್ಣು (23), ದಿನೇಶ್ (24), ಜೋತಿ ಲಿಂಗಂ (25), ಮತ್ತು ಸ್ಟೀಫನ್ ಕುಮಾರ್ (24) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3 (2) (ವಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ, ಪೊಲೀಸರು ಆತ ಹತ್ಯೆಯನ್ನು ತಡೆಯಬಹುದಿತ್ತು, ಆದರೆ, ಅವರು ನಿರ್ಲಕ್ಷ್ಯಿಸಿದರು. ಅವರ ನಿರ್ಲಕ್ಷ್ಯದಿಂದಾಗಿಯೇ ಪ್ರವೀಣ್ ಹತ್ಯೆಯಾಗಿದೆ ಎಂದು ಆತನ ಕುಟುಂಬಸ್ಥರು ಆರೋಪಿಸಿದ್ದಾರೆ.
ದಕ್ಷಿಣ ತಮಿಳುನಾಡಿನಲ್ಲಿ ಜಾತಿ ದೌರ್ಜನ್ಯಗಳು, ಹತ್ಯೆಗಳು ನಡೆಯುವ ಬಗ್ಗೆ ಹೆಚ್ಚಾಗಿ ವರದಿಯಾಗುತ್ತವೆ. ಅದರೆ, ಉತ್ತರ ತಮಿಳುನಾಡಿನಲ್ಲಿ ಹೆಚ್ಚಿನ ಜಾತಿ ದೌರ್ಜನ್ಯ ಪ್ರಕರಣಗಳು ಕಂಡುಬಂದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಪ್ರವೀಣ್ ಹತ್ಯೆಯೇ ಜಾತಿ ಕಾರಣಕ್ಕಾದ ಮೊದಲ ಹತ್ಯೆಯೆಂದು ತೀಂಡಮೈ ಓಜಿಪ್ಪು ಮುನ್ನಾನಿ [ಅಸ್ಪೃಶ್ಯತೆ ನಿರ್ಮೂಲನೆ ಸಂಘಟನೆ] ಕಾರ್ಯಕರ್ತ ವೇಣಿ ಹೇಳಿದ್ದಾರೆ. ಈ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ ಎಂದು ಅವರು ಹೇಳುತ್ತಾರೆ.
“ಇಪ್ಪತ್ತು ವರ್ಷಗಳ ಹಿಂದೆ, ಇಬ್ಬರು – ಪರಯ್ಯರ್ ಮತ್ತು ಯಾದವ ಸಮುದಾಯ – ಪಲ್ಲಿಕರಣೈ ವಿವಾಹವಾಗಲು ನಿರ್ಧರಿಸಿದ್ದರು. ಆದರೆ, ಅವರ ಕುಟುಂಬಗಳು ಅವರ ವಿವಾಹವನ್ನು ತಡೆಯಲು ಯತ್ನಿಸಿದ್ದರು. ಅದಾದ ಬಳಿಕ, ನನಗೆ ತಿಳಿದಂತೆ ಪ್ರವೀಣ್ ಮತ್ತು ಶರ್ಮಿಣಾ ಪ್ರೀತಿಯೇ ಈ ಎರಡೂ ಸಮುದಾಯಗಳ ನಡುವಿನ ಪ್ರೀತಿಯಾಗಿದೆ” ಎಂದು ಅವರು ಹೇಳಿದ್ದಾರೆ.
“ನಮ್ಮ ಮಗ ಜಾತಿ ಆಧಾರದ ಮೇಲೆ ಜನರೊಂದಿಗೆ ಸ್ನೇಹ ಮಾಡಿದವನಲ್ಲ. ಎಲ್ಲರೊಂದಿಗೂ ಬೆರೆಯುತ್ತಿದ್ದ. ಆದರೆ, ನನ್ನ ಮಗನ ಮದುವೆ ಜಾತಿ ದ್ವೇಷಕ್ಕೆ ಕಾರಣವಾಯಿತು. ಆತನನ್ನು ಕೊಲ್ಲಲಾಗಿದೆ” ಎಂದು ಪ್ರವೀಣ್ ತಾಯಿ ಚಿತ್ರಾ ಹೇಳಿದ್ದಾರೆ.
ಪ್ರವೀಣ್-ಶರ್ಮಿಳಾ ಪ್ರೀತಿ
ಶರ್ಮಿಳಾ, ಪ್ರವೀಣ್ ಮತ್ತು ಶರ್ಮಿಳಾ ಅವರ ಪ್ರೀತಿಯನ್ನು ಆಕೆಯ ಬಗ್ಗ ಆಕೆಯ ಪೋಷಕರಿಗೆ ಕಳೆದ ವರ್ಷ ಗೊತ್ತಾಗಿತ್ತು. ಇಬ್ಬರ ಪ್ರೀತಿಗೆ ಕುಟುಂಬಸ್ಥರು ಒಪ್ಪಿರಲಿಲ್ಲ. ಅಲ್ಲದೆ, ಆಕೆಗೆ ಬೇರೆಡೆ ವರನನ್ನು ಹುಡುಕಲು ಆರಂಭಿಸಿದ್ದರು.
ಕಳೆದ ವರ್ಷ ಅಕ್ಟೋಬರ್ 17ರಂದು, ತನ್ನ ಮನೆಯ ಮುಖ್ಯ ಗೇಟ್‌ಗೆ ಬೀಗ ಹಾಕುವ ನೆಪದಲ್ಲಿ, ಶರ್ಮಿಳಾ ತನ್ನ ಮನೆ ತೊರೆದು ಪ್ರವೀಣ್ ಜೊತೆ ಮಹಿಂದ್ರಾ ನಗರದಲ್ಲಿರುವ ಆತನ ಚಿಕ್ಕಮ್ಮನ ಮನೆಗೆ ಹೋಗಿದ್ದರು. ಎರಡು ದಿನಗಳ ಕಾಲ ಅಲ್ಲಿಯೇ ತಂಗಿದ್ದರು. ಬಳಿಕ, ರಿಜಿಸ್ಟರ್ ವಿವಾಹವಾಗಿದ್ದರು. ಈ ನಡುವೆ ಶರ್ಮಿಳಾ ಪೋಷಕರು ಪಲ್ಲಿಕರನೈ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದಾರೆ.
ಅಕ್ಟೋಬರ್ 20 ರಂದು ಪ್ರವೀಣ್-ಶರ್ಮಿಳಾ ಪಲ್ಲಿಕರಣೈ ಪೊಲೀಸ್ ಠಾಣೆಗೆ ಬಂದು ತಮ್ಮ ಮದುವೆ ಪ್ರಮಾಣಪತ್ರವನ್ನು ನೀಡಿದ್ದರು.
ಪ್ರಕರಣದ ತನಿಖೆ ನಡೆಸುತ್ತಿದ್ದ ಅಧಿಕಾರಿ, ಸಹಾಯಕ ಕಮಿಷನರ್ ಕ್ರಿಸ್ಟಿನ್ ಜಯಸಿಲ್, “ನಾವು ಯುವತಿಯ ಕುಟುಂಬವನ್ನು ಠಾಣೆಗೆ ಕರೆದಿದ್ದೆವು. ಅವರು ಇನ್ನು ಮುಂದೆ, ತಮಗೂ-ತಮ್ಮ ಮಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಲಿಖಿತವಾಗಿ ಬರೆದುಕೊಟ್ಟಿದ್ದರು” ಎಂದು ಹೇಳಿರುವುದಾಗಿ ದಿ ನ್ಯೂಸ್ ಮಿನಿಟ್‌ಗೆ ವರದಿ ಮಾಡಿದೆ.
ಆದರೆ, ತನ್ನ ಅಣ್ಣ ನರೇಶ್ ಎಂಬಾತ ಪೊಲೀಸ್ ಠಾಣೆಯಲ್ಲಿ ತಮಗೆ ಬೆದರಿಕೆ ಹಾಕಿದ್ದಾನೆ ಎಂದು ಶರ್ಮಿಳಾ ಹೇಳಿದ್ದಾರೆ. ”ಪೊಲೀಸ್ ಠಾಣೆಯಲ್ಲಿ ಸದ್ದಿಲ್ಲದೆ ನಮ್ಮ ಬಳಿ ಬಂದು ನನಗೆ ಬೆದರಿಕೆ ಹಾಕಿದ್ದರು. ಅದಕ್ಕೂ ಮುಂಚೆ, ನಾವು ಮಹೀಂದ್ರಾ ನಗರದಲ್ಲಿದ್ದಾಗ, ನರೇಶ್ ಮತ್ತು ನನ್ನ ತಂದೆ ದುರೈ ಕುಮಾರ್ ಅವರು ಪ್ರವೀಣ್ ಕುಟುಂಬದ ಬಳಿ ಹೋಗಿ ನಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಪೊಲೀಸ್ ಠಾಣೆಯಲ್ಲಿಯೇ ಬೆದರಿಕೆ ಹಾಕಿದ ಬಳಿಕ, ನಮಗೆ ಜೀವ ಭಯವಿದೆ. ನಾನು ಲಿಖಿತ ದೂರು ಸಲ್ಲಿಸುತ್ತೇನೆಂದು ಪೊಲೀಸರಿಗೆ ಹೇಳಿದ್ದೆ. ಆದರೆ, ಅವರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದರು. ನನ್ನ ಕುಟುಂಬದ ಲಿಖಿತ ಹೇಳಿಕೆ ಸಾಕು ಎಂದಿದ್ದರು” ಎಂದು ಶರ್ಮಿಳಾ ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ.
ಫೆಬ್ರವರಿ 27 ರಂದು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಪ್ರಾದೇಶಿಕ ನಿರ್ದೇಶಕ ರವಿವರ್ಮನ್ ಅವರು ಪ್ರವೀಣ್ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಆಗಲೂ, ಶರ್ಮಿಳಾ ಪೊಲೀಸರ ವಿರುದ್ಧ ತಮ್ಮ ಆರೋಪವನ್ನು ಪುನರುಚ್ಚರಿಸಿದ್ದಾರೆ.
“ಪೊಲೀಸ್ ಠಾಣೆಯಲ್ಲಿ ಬೆದರಿಕ ಹಾಕಿದ್ದರ ಬಗ್ಗೆ ಪರಿಶೀಲಿಸಲು ಪೊಲೀಸರಿಗೆ ಕೇಳುತ್ತೇನೆ. ಬೆದರಿಕೆ ಹಾಕಿದ್ದ ಸತ್ಯವೆಂದು ಕಂಡುಬಂದರೆ, ನರೇಶ್ ಮತ್ತು ದುರೈ ಕುಮಾರ್ ಅವರ ಹೆಸರನ್ನೂ ಎಫ್‌ಐಆರ್‌ನಲ್ಲಿ ಸೇರಿಸಲಾಗುವುದು. ಪ್ರವೀಣ್ ಕುಟುಂಬಕ್ಕೆ 12 ಲಕ್ಷ ರೂ. ಪರಿಹಾರ ನೀಡಲಾಗುವುದು” ಎಂದು ರವಿವರ್ಮನ್ ಹೇಳಿದ್ದಾರೆ.
“ಪ್ರವೀಣ್ ಮತ್ತು ಶರ್ಮಿಳಾ ಮಹಿಂದ್ರಾ ನಗರ ಮತ್ತು ನೆಡುಂಗುಂದ್ರಂನಲ್ಲಿ ನಮ್ಮ ಸಂಬಂಧಿಕರ ಮನೆಯಲ್ಲಿದ್ದರು. ಆದರೆ, ಫೆಬ್ರವರಿ 24ರ ರಾತ್ರಿ ಆತನ ಸ್ನೇಹಿತನೇ ಆದ ಶ್ರೀರಾಮ್ (ಹತ್ಯೆಗೈದ ಗುಂಪಿನಲ್ಲಿ ಒಬ್ಬ) ಊರಿಗೆ ಬರುವಂತೆ ಪ್ರವೀಣ್‌ಗೆ ಕರೆ ಮಾಡಿ ಕರೆದಿದ್ದಾನೆ. ಅವನು ಬಂದ ಬಳಿಕ, ಐವರು ಸೇರಿ ಪ್ರವೀಣ್‌ನನ್ನು ಕೊಲ್ಲುವುದು ಅವರ ಯೋಜನೆಯಾಗಿತ್ತು” ಎಂದು ಪ್ರವೀಣ್ ತಾಯಿ ಹೇಳಿದ್ದಾರೆ.
ಜಾತಿ ಮತ್ತು ಪ್ರತೀಕಾರ
ಆರಂಭಿಕ ತನಿಖೆಯ ಪ್ರಕಾರ, ಕೆಲವು ಅಪರಾಧಿಗಳು ಹೆಚ್ಚುವರಿ ಉದ್ದೇಶವನ್ನು ಹೊಂದಿರಬಹುದು ಎಂದು ಪೊಲೀಸ್ ಅಧಿಕಾರಿ ಕ್ರಿಸ್ಟಿನ್ ಜಯಸಿಲ್ ಹೇಳಿದ್ದಾರೆ. “ಐವರು ಆರೋಪಿಗಳಲ್ಲಿ ನಾಲ್ವರು ಒಂದೇ ಜಾತಿಗೆ ಸೇರಿದವರಾಗಿದ್ದಾರೆ. ಅದನ್ನು ಹೊರತು ಪಡಿಸಿಯೂ, ಇಬ್ಬರು ಆರೋಪಿಗಳು – ವಿಷ್ಣು ಮತ್ತು ಸ್ಟೀಫನ್ – ಮೆಡವಕ್ಕಂನಲ್ಲಿ ಪ್ರವೀಣ್ ಮತ್ತು ಗ್ಯಾಂಗ್‌ನಿಂದ 2022ರಲ್ಲಿ ಹತ್ಯೆಯಾಗಿದ್ದಾನೆ ಎನ್ನಲಾಗಿರುವ ವ್ಯಕ್ತಿಯ ಸ್ನೇಹಿತರಾಗಿದ್ದಾರೆ” ಎಂದು ಜಯಸಿಲ್ ಹೇಳಿದ್ದಾರೆ.
2022ರ ಆ ಕೊಲೆ ಪ್ರಕರಣದಲ್ಲಿ ಪ್ರವೀನ್ ಆರೋಪಿಯೆಂದು ಹೆಸರಿಸಲಾಗಿತ್ತು. ಬಳಿಕ, ಆತನಿಗೆ ಜಾಮೀನು ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಶರ್ಮಿಳಾ ಅವರ ಕುಟುಂಬ, ಪ್ರವೀಣ್ ಹತ್ಯೆ ಜಾತಿ ಹತ್ಯೆಯಲ್ಲ ಎಂದು ಹೇಳಿದ್ದಾರೆ. ತಾವು ದಂಪತಿಗೆ ಬೆದರಿಕೆ ಹಾಕಿದ್ದಾರೆಂಬ ಆರೋಪಿವನ್ನು ನಿರಾಕರಿಸಿದ್ದಾರೆ.
“ನನ್ನ ಹೆಂಡತಿ ಮತ್ತು ನಾನು ಇಬ್ಬರೂ ಚೆನ್ನೈನಲ್ಲಿ ಹುಟ್ಟಿ ಬೆಳೆದಿದ್ದೇವೆ. ನಾವು ಜಾತಿವಾದಿಗಳಲ್ಲ. ನಮ್ಮ ಮಕ್ಕಳೂ ಕೂಡ ಜಾತಿವಾದಿಗಳಲ್ಲ. ಬೇರೆ ಜಾತಿಯ ಯುವಕನನ್ನು ಮದುವೆಯಾಗಿದ್ದಕ್ಕೆ ಶರ್ಮಿಳಾಳನ್ನು ದಿನೇಶ್ ಎಂದೂ ವಿರೋಧಿಸಿಲ್ಲ. ದಿನೇಶ್ ಕೂಡ ಪರಯ್ಯರ್ ಜಾತಿಯ ಯುವತಿಯನ್ನು ಪ್ರೀತಿಸುತ್ತಿದ್ದಾನೆ. ಆಕೆಯನ್ನು ಮದುವೆಯಾಗಲು ಬಯಸಿದ್ದಾನೆ. ನಾವು ಕೂಡ ಒಪ್ಪಿಕೊಂಡಿದ್ದೇವೆ ಪ್ರವೀಣ್ ಕೊಲೆ ಆರೋಪಿ ಎಂಬ ಕಾರಣಕ್ಕೆ ಅವರ ವಿವಾಹವನ್ನು ನಾವು ಒಪ್ಪಿರಲಿಲ್ಲ” ಎಂದು ಶರ್ಮಿಳಾ ತಂದೆ ದುರೈ ಕುಮಾರ್ ಹೇಳಿದ್ದಾರೆ.
ಆದರೆ, ಇದು ಸುಳ್ಳು ಎಂದು ಪ್ರವೀಣ್ ಕುಟುಂಬದವರು ಆರೋಪಿಸಿದ್ದಾರೆ. “ಪ್ರವೀಣ್ ಬಗ್ಗೆ ದಿನೇಶ್‌ಗೆ ಅಪಾರ ದ್ವೇಷವಿತ್ತು. ದುರೈ ಕುಮಾರ್ ಮತ್ತು ನರೇಶ್ ಇಬ್ಬರೂ ಕೂಡ ಪ್ರಕರಣದಲ್ಲಿ ಸಮಾನ ಆರೋಪಿಗಳು. ನರೇಶ್ ಮತ್ತು ದುರೈ ಕುಮಾರ್ ತನ್ನನ್ನು ಕಾಲೇಜಿನಲ್ಲಿ ಹಿಂಬಾಲಿಸುತ್ತಿದ್ದಾರೆಂದು ಪ್ರವೀಣ್ ಈ ಹಿಂದೆ ಹೇಳಿದ್ದನೆಂದು ಶರ್ಮಿಳಾ ಆರೋಪಿಸಿದ್ದಾರೆ. ದುರೈ ಕುಮಾರ್ ಡಿಎಂಕೆಯಲ್ಲಿ ತೊಡಗಿಸಿಕೊಂಡಿದ್ದು, ಅವರಿಗೆ ಪ್ರಬಲರ ಬೆಂಬಲ ಇರಬಹುದು” ಎಂದು ಹೇಳಿದ್ದಾರೆ.