ಕೊಪ್ಪಳ ಜಿಲ್ಲೆಯ ಕಾರಾಟಗಿ ತಾಲೂಕಿನ ಬೂದಗುಂಪಾ ಗ್ರಾಮದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸುಮಾರು 400 ಕುಟುಂಬಗಳಿಗೆ ಮನೆಗಳ ಹಕ್ಕಪತ್ರ ಸಿಕ್ಕಿಲ್ಲ. ನಿತ್ಯವೂ ನಮ್ಮ ಜನರು ತಾಲೂಕು ಕಚೇರಿಯಲ್ಲಿ ಅಲೆದಾಡುವಂತಹ ಉದ್ವಿಗ್ನ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಕೂಡಲೇ ಅಷ್ಟೂ ಕುಟುಂಬಗಳಿಗೂ ಹಕ್ಕುಪತ್ರ ನೀಡಬೇಕು ಎಂದು ಅಂಬೇಡ್ಕರ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಶಿವಕುಮಾರ ಕಾರಟಗಿ ಹೇಳಿದರು.
ಜಿಲ್ಲೆಯ ಕಾರಟಗಿ ತಾಲೂಕು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, “ಯಾವುದೇ ಸರ್ಕಾರ ಬಂದರೂ ನಮ್ಮ ಸಮುದಾಯದ ಗೋಳು ಕೇಳುವವರೇ ಇಲ್ಲ. ಆದರೆ ಈಗಿನ ಸರ್ಕಾರ ನಮ್ಮ ದಲಿತ ಸಮುದಾಯದ ಪರವಾಗಿದ್ದು, ನಮ್ಮ ದಲಿತ ಸಮುದಾಯದ ಬಹುದೊಡ್ಡ ಸಮಸ್ಯೆ ಎಂದರೆ, ಸದರಿ ಬೂದಗುಂಪಾ ಗ್ರಾಮದಲ್ಲಿ ಜಮೀನು ಸರ್ವೆ ನಂ: 134ರಲ್ಲಿ ಬರುವ 400 ಮನೆಗಳಿಗೆ ಅನೇಕ ವರ್ಷಗಳಿಂದ ಹಕ್ಕುಪತ್ರ ಕೊಟ್ಟಿರುವುದಿಲ್ಲಾ. ಸದರಿ 30-40 ವರ್ಷಗಳಿಂದ ದಲಿತ ಸಮುದಾಯಕ್ಕೆ ಮಾತ್ರ ಹಕ್ಕುಪತ್ರ ಕೊಟ್ಟಿಲ್ಲ. ಈ ರಾಜ್ಯ ಸರ್ಕಾರದ ಅವಧಿಯಲ್ಲಿ ನಮ್ಮ ದಲಿತ ಸಮುದಾಯಕ್ಕೆ ಅನ್ಯಾಯವಾಗದಂತೆ ತಾವು ನಮ್ಮ ಸಮುದಾಯದ ಬಗ್ಗೆ ಕಾಳಜಿ ವಹಿಸಿ, ಮನೆಗಳ ಹಕ್ಕುಪತ್ರ ಒದಗಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಗದಗ | ಗ್ರಾಮ ಮಟ್ಟದಲ್ಲಿ ಉತ್ತಮ ಶಿಕ್ಷಣದ ಜತೆಗೆ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿ: ರಾಜ್ಯಪಾಲರು
ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇವಾ ಸಮಿತಿ ಜಿಲ್ಲಾ ಘಟಕದ ಪದಾಧಿಕಾರಿಗಳು, ಕರ್ನಾಟಕ ಭೀಮ್ ಸೇನೆ ಯುವ ಶಕ್ತಿ ಸಂಘದ ಪದಾಧಿಕಾರಿಗಳು ಇದ್ದರು.
