ನ್ಯಾಯಾಲಯದ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಆಚರಣೆಗಳನ್ನು ಕೊನೆಗೊಳಿಸುವಂತೆ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಅವರು ಕರೆ ನೀಡಿದ್ದಾರೆ.
ಮಾರ್ಚ್ 3ರಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ ಹೊಸ ನ್ಯಾಯಾಲಯದ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಸಂವಿಧಾನದ ಪೀಠಿಕೆಯಲ್ಲಿನ ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ಎಂಬ ಪದಗಳು ನನಗೆ ಬಹಳ ಮುಖ್ಯ” ಎಂದು ತಿಳಿಸಿದ್ದಾರೆ.
“ಭಾರತದ ಸಂವಿಧಾನವನ್ನು ಅಳವಡಿಸಿಕೊಂಡು 75 ವರ್ಷ ತುಂಬುತ್ತಿದೆ. ಈ ಸಂದರ್ಭದಲ್ಲಿ ಸಂವಿಧಾನದಲ್ಲಿ ಪ್ರತಿಪಾದಿಸಲಾಗಿರುವ ಜಾತ್ಯತೀತತೆಯನ್ನು ಉತ್ತೇಜಿಸಬೇಕು” ಎಂದಿರುವ ನ್ಯಾಯಮೂರ್ತಿ, “ನ್ಯಾಯಾಲಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಸಂವಿಧಾನದ ಪೀಠಿಕೆಯ ಪ್ರತಿಗೆ ತಲೆಬಾಗುವ ಮೂಲಕ ಪ್ರಾರಂಭಿಸಬಹುದು” ಎಂದು ಸಲಹೆ ನೀಡಿದ್ದಾರೆ.
Stop pooja-archana during court programs, bow down to Constitution instead: Justice Abhay S Oka
Read more here: https://t.co/TgUpjw7k2t pic.twitter.com/olI0NXqFRN
— Bar & Bench (@barandbench) March 6, 2024
“ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನವನ್ನು ಅಳವಡಿಸಿಕೊಂಡು ಈ ವರ್ಷ ನವೆಂಬರ್ 26 ರಂದು 75 ವರ್ಷಗಳು ತುಂಬಲಿದೆ. ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಎರಡು ಪ್ರಮುಖ ಪದಗಳಿವೆ. ಅವುಗಳಲ್ಲಿ ಒಂದು ‘ಜಾತ್ಯತೀತ’ ಮತ್ತು ಎರಡನೆಯದ್ದು ‘ಪ್ರಜಾಪ್ರಭುತ್ವ’. ಜಾತ್ಯತೀತತೆ ಎಂದರೆ ಧರ್ಮ ನಿರಪೇಕ್ಷ ಅಥವಾ ಸರ್ವ ಧರ್ಮ ಸಮಭಾವ. ನಾನು ಯಾವಾಗಲೂ ನ್ಯಾಯಾಂಗ ವ್ಯವಸ್ಥೆಯ ತಿರುಳು ಸಂವಿಧಾನ ಎಂದು ಭಾವಿಸುತ್ತೇನೆ” ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ತಿಳಿಸಿದ್ದಾರೆ.
“ಕೆಲವೊಮ್ಮೆ ನ್ಯಾಯಾಧೀಶರು ಸ್ಪಷ್ಟ ನಿಲುವನ್ನು ತೆಗೆದುಕೊಂಡು ಕೆಲವು ಮಾತುಗಳನ್ನು ಹೇಳಬೇಕಾಗುತ್ತದೆ. ನಾನು ಅಂಥದ್ದೇ ನಿಲುವು ತೆಗೆದುಕೊಂಡು ಹೇಳಲಿದ್ದೇನೆ. ನ್ಯಾಯಾಲಯದ ಕಾರ್ಯಕ್ರಮಗಳಲ್ಲಿ ಪೂಜೆ-ಅರ್ಚನೆಯನ್ನು ನಿಲ್ಲಿಸಬೇಕು ಎಂದು ನಾನು ಭಾವಿಸುತ್ತೇನೆ. ಬದಲಿಗೆ, ನಾವು ಸಂವಿಧಾನದ ಪೀಠಿಕೆಯ ಪ್ರತಿಯನ್ನು ಇಟ್ಟುಕೊಂಡು ಅದಕ್ಕೆ ನಮಸ್ಕರಿಸಬೇಕಾಗಿದೆ. ಸಂವಿಧಾನವು ಜಾರಿಯಾಗಿ 75 ವರ್ಷಗಳನ್ನು ಪೂರೈಸಿದಾಗ, ಅದರ ಘನತೆಯನ್ನು ಕಾಪಾಡಿಕೊಳ್ಳಲು, ನಾವು ಈ ಹೊಸ ಪದ್ಧತಿಯನ್ನು ಪ್ರಾರಂಭಿಸಬೇಕು” ಎಂದು ನ್ಯಾಯಮೂರ್ತಿ ಓಕಾ ತಿಳಿಸಿದ್ದಾರೆ.
“ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅವಧಿಯಲ್ಲಿ ನ್ಯಾಯಾಲಯದ ಆವರಣದಲ್ಲಿ ಧಾರ್ಮಿಕ ಆಚರಣೆಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದೆ. ಆದರೆ ಅವುಗಳನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಾಗಲಿಲ್ಲ” ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಭಾಷಣಗಳಲ್ಲಿ ‘ಪನೌತಿ, ಕಿಸೆಗಳ್ಳ’ ಎಂದು ಬಳಸಬೇಡಿ: ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ಸೂಚನೆ
ದೇಶದ ಸಂವಿಧಾನ ಅಂಗೀಕಾರವಾಗಿ 75 ವರ್ಷಗಳು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ನ್ಯಾಯಾಲಯದ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಆಚರಣೆಗಳನ್ನು ಕೊನೆಗೊಳಿಸುವಂತೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಕರೆ ನೀಡಿದ್ದಾರೆ.
