ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿದ ನಂತರ ದೆಹಲಿ ವಿವಿಯ ನಿವೃತ್ತ ಪ್ರಾಧ್ಯಾಪಕ ಗೋಕರಕೊಂಡ ನಾಗ ಸಾಯಿಬಾಬಾ ಹಾಗೂ ಇತರ ಐವರು ನಾಗ್ಪುರ ಸೆರೆಮನೆಯಿಂದ ಬಿಡುಗಡೆಯಾಗಿದ್ದಾರೆ.
ಎರಡು ದಿನಗಳ ಹಿಂದೆ ಬಾಂಬೆ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ ಮಾವೋವಾದಿಗಳೊಂದಿಗೆ ಸಾಯಿಬಾಬಾ ಸಂಪರ್ಕ ಹೊಂದಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿತ್ತು.
“ಅನಾರೋಗ್ಯ ಕಾರಣದ ಹಿನ್ನೆಲೆಯಲ್ಲಿ ಮೊದಲು ನನಗೆ ವೈದ್ಯಕೀಯ ಚಿಕಿತ್ಸೆ ಅಗತ್ಯವಿದೆ. ಅನಂತರ ಮಾತನಾಡುತ್ತೇನೆ” ಎಂದು ಬಿಡುಗಡೆಗೊಂಡ ಸಾಯಿಬಾಬಾ ತಿಳಿಸಿದ್ದಾರೆ.
ಪತ್ನಿ ವಸಂತಕುಮಾರಿ, ಸೋದರ ರಾಮ್ ದೇವ್, ಸ್ನೇಹಿತ ರವಿ ರಂದ್ರ ಹಾಗೂ ವಕೀಲ ನಿಹಲೇಶ್ ಸಿಂಗ್ ರಾಥೋಡ್ ಅವರು ಸೆರೆಮನೆಯಿಂದ ಬಿಡುಗಡೆಯಾದ ಸಾಯಿಬಾಬಾ ಅವರನ್ನು ಕರೆದೊಯ್ಯಲು ಆಗಮಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವಿದೇಶಿ ಪ್ರವಾಸಿ ಮೇಲೆ ಅತ್ಯಾಚಾರ; ʼಅತಿಥಿ ದೇವೋಭವʼ ಎಂದ ದೇಶದಲ್ಲಿ ಇದೆಂಥಾ ಕ್ರೌರ್ಯ!
ಮಾ.06 ರಂದು ಸಾಯಿಬಾಬಾ ಅವರ ಕುಟುಂಬ ಬಿಡುಗಡೆಗೊಂಡ ಸಾಯಿಬಾಬಾ ಅವರನ್ನು ಕರೆದೊಯ್ಯಲು ಆಗಮಿಸಿತ್ತು. ಆದರೆ ಜೈಲಿನ ಅಧಿಕಾರಿಗಳಿಗೆ ಅಧಿಕೃತ ಆದೇಶ ಬಂದಿರಲಿಲ್ಲ.
ಹೈಕೋರ್ಟ್‌ನ ನಾಗ್ಪುರ ಪೀಠವು ಸಾಯಿಬಾಬಾ ಅವರಿಗೆ 2017ರಲ್ಲಿ ಸೆಷನ್ಸ್ ಕೋರ್ಟ್ ನೀಡಿದ್ದ ಜೀವಾವಧಿ ಶಿಕ್ಷೆ ತೀರ್ಪನ್ನು ರದ್ದುಗೊಳಿಸಿತ್ತು. ಹಿಂಸಾಚಾರ ಅಥವಾ ಭಯೋತ್ಪಾದನೆಯ ನಿರ್ದಿಷ್ಟ ಕೃತ್ಯಗಳಲ್ಲಿ ಪಾಲ್ಗೊಂಡಿರುವುದಕ್ಕೆ ಯಾವುದೇ ಸಾಕ್ಷಾಧಾರಗಳಿಲ್ಲ ಎಂದು ಕೋರ್ಟ್ ಹೇಳಿತ್ತು.
ಸಾಯಿಬಾಬಾ ಅವರ ಜೊತೆ ಬಿಡುಗಡೆ ಹೊಂದಿದ ಪಾಂಡು ಪೋರಾ ನರೋಟೆ 2022ರ ಆಗಸ್ಟ್‌ನಲ್ಲಿ ಮೃತಪಟ್ಟಿದ್ದರು.ಒಂದು ದಶಕದ ದೀರ್ಘಾವಧಿ ಜೈಲಿನಿದ್ದ ಸಾಯಿಬಾಬಾ ಅವರು ಎರಡು ಬಾರಿ ಕೋವಿಡ್ ಹಾಗೂ ಒಮ್ಮೆ ವಿಷಮ ಶೀತ ಜ್ವರಕ್ಕೆ ತುತ್ತಾಗಿದ್ದರು. ಮೂತ್ರಕೋಶ, ಮೆದುಳು ಸೇರಿದಂತೆ ಹಲವು ದೇಹದ ಹಲವು ಅಂಗಾಗಗಳು ವೈಫಲ್ಯತೆ ಅನುಭವಿಸುತ್ತಿದ್ದು, ಡಯಗ್ನೋಸಿಸ್ ಚಿಕಿತ್ಸೆಗೂ ಒಳಗಾಗುತ್ತಿದ್ದಾರೆ.
ಇವರಿದ್ದ ಸೆರೆಮನೆಯ ಶೌಚಾಲಯ ಹಾಗೂ ಸ್ನಾನದ ಕೋಣೆಯಲ್ಲೂ ಸಿಸಿಟಿವಿ ಕ್ಯಾಮರಾ ಅಳವಡಿಸಿರುವುದನ್ನು ವಿರೋಧಿಸಿ ಹಾಗೂ ನೀರಿನ ಬಾಟಲಿಗಾಗಿ 2022ರಲ್ಲಿ ನಾಗ್ಪುರ ಜೈಲಿನಲ್ಲಿ ಮೂರು ವಾರಗಳ ಕಾಲ ಉಪವಾಸ ಒಳಗೊಂಡು ಹೋರಾಟ ನಡೆಸಿದ್ದರು. ನಂತರದಲ್ಲಿ ಜೈಲಿನ ಅಧಿಕಾರಿಗಳು ನೀರಿನ ಬಾಟಲಿಯ ವ್ಯವಸ್ಥೆಯ ಜೊತೆಗೆ ಸಿಸಿ ಟಿವಿ ಕ್ಯಾಮರವನ್ನು ತೆರವುಗೊಳಿಸಿದ್ದರು.
ಕಳೆದ ವರ್ಷದ ಆಗಸ್ಟ್‌ನಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೋರಾಟಗಾರ್ತಿ ಮೇರಿ ಲಾಲೋರ್ ಅವರು ಸಾಯಿಬಾಬಾ ಅವರನ್ನು ದೀರ್ಘಕಾಲ ಸೆರೆಮನೆಯಲ್ಲಿಟ್ಟಿರುವುದನ್ನು ಅಮಾನವೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಅವರ ಅನಾರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಲಾಲೋರ್ ಶೀಘ್ರ ಬಿಡುಗಡೆಗೆ ಆಗ್ರಹಿಸಿದ್ದರು.
