ಸಂವಿಧಾನದ ಆಶಯ ರಕ್ಷಿಸುವುದಾಗಿ ಹೇಳುವ ರಾಜ್ಯ ಸರ್ಕಾರ ʼಮೈ ಬ್ರದರ್ʼ ಪಾಲಿಸಿಯಿಂದ ದೇಶ ವಿರೋಧಿಗಳ ರಕ್ಷಣೆಗೆ ನಿಂತಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ರವಿಕುಮಾರ್ ಆರೋಪಿಸಿದರು.
ರಾಯಚೂರಿನಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, “ವಿಧಾನಸೌಧದಲ್ಲಿ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಆಕಾಂಕ್ಷಿಯ ಬೆಂಬಲಿಗರು ಪಾಕಿಸ್ತಾನಕ್ಕೆ ಜೈ ಎನ್ನುತ್ತಾರೆ. 34 ಜನರಲ್ಲಿ ಮೂವರನ್ನು ಮಾತ್ರ ಬಂಧಿಸಿದೆ. ಮಂಗಳೂರಿನ ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿಯೂ ಕೂಡ ಡಿ.ಕೆ ಶಿವುಕುಮಾರ್ ಅವರು ಬ್ಲಾಸ್ಟ್ ಮಾಡಿದವರನ್ನು ಬ್ರದರ್ಸ್ ಎಂದು ಹೇಳಿಕೊಂಡಿದ್ದರು. ಈಗ ಸೂಪರ್ ಸಿಎಂ ಆಗಿ ವರ್ತಿಸುತ್ತಿರುವ ಪ್ರಿಯಾಂಕ ಖರ್ಗೆಯವರು ಪಾಕಿಸ್ತಾನದ ಪರ ಘೋಷಣೆಯೇ ಕೂಗಿಲ್ಲ ಎನ್ನುತ್ತಿದ್ದಾರೆ. ಆದರೆ, ಎಸ್‌ಎಫ್‌ಎಲ್ ವರದಿಯಲ್ಲಿ ಸತ್ಯ ಬಹಿರಂಗವಾಗಿದೆ. ಆದರೂ ಸರ್ಕಾರ ಒಪ್ಪುತ್ತಿಲ್ಲ. ಸರ್ಕಾರ ವರದಿ ಪಡೆಯಲು ಇನ್ನೆಷ್ಟು ದಿನ ಬೇಕು” ಎಂದು ಪ್ರಶ್ನಿಸಿದರು.
“ಬೆಂಗಳೂರಿನ ಕೆಫೆಯಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿಯೂ ಸರ್ಕಾರ ನಡೆಯಿಂದ ವಿದ್ರೋಹಿ ಚಟುವಟಿಕೆಗಳು ಹೆಚ್ಚಳವಾಗಲು ಕಾರಣವಾಗಿದೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿಯೇ ಪಿಎಫ್‌ಐ, ಕೆಎಫ್‌ಡಿ ಸಂಘಟನೆಗಳ ಮೇಲೆ ಹಾಕಲಾಗಿದ್ದ ಕೇಸ್‌ಗಳನ್ನು ಹಿಂಪಡೆಯಲಾಗಿತ್ತು. ಡಿಜೆ ಹಳ್ಳಿ, ಕೆಜಿ ಹಳ್ಳಿ ಘಟನೆಯಲ್ಲಿಯೂ ಶಾಸಕರ ಮೇಲೆ ದಾಳಿಯಾದರೂ ಆರೋಪಿಗಳನ್ನು ರಕ್ಷಿಸಲಾಯಿತು. ಸಮಾಜ ದ್ರೋಹಿಗಳನ್ನು ರಕ್ಷಣೆ ಮಾಡಲು ಸರ್ಕಾರ ನಿಂತಿದೆ” ಎಂದು ದೂರಿದರು.
ಹಿಂದೂ ಧರ್ಮ ವಿರೋಧಿಯಾಗಿರುವ ಸರ್ಕಾರ ಬಹುಸಂಖ್ಯಾತರ ಜನರನ್ನು ಕಡೆಗಣಿಸಿ ಅಲ್ಪಸಂಖ್ಯಾತರಿಗೆ ₹10 ಸಾವಿರ ಕೋಟಿ ಅನುದಾನ ನೀಡುವುದಾಗಿ ಹೇಳುತ್ತಿದೆ. ಅನುದಾನ ನೀಡಲು ವಿರೋಧವಿಲ್ಲ. ಆದರೆ, ಬಹುಸಂಖ್ಯಾತರಿಗೂ ನ್ಯಾಯ ಕೊಡಬೇಕಿತ್ತು. ತುಷ್ಠೀಕರಣಕ್ಕಾಗಿ ಅನುದಾನ ಹಂಚಿಕೆ ಮಾಡಲಾಗಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ದಲಿತ ಸಿಎಂ ಚರ್ಚೆ ಅಪ್ರಸ್ತುತ: ಗೃಹ ಸಚಿವ ಪರಮೇಶ್ವರ್
ಕರ್ನಾಟಕ ನಂಬರ್ ಒನ್ ಸುಳ್ಳಗಾರರಾಗಿರುವ ಸಿದ್ದರಾಮಯ್ಯನವರು ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿದ್ದರೂ ರಾಜ್ಯ ಸರ್ಕಾರ ಹೇಳುತ್ತಿಲ್ಲ. ರಾಜ್ಯಗಳಿಗೆ ತಾರತಮ್ಯವಾದರೆ ಸುಪ್ರಿಂಕೋರ್ಟಿನಲ್ಲಿ ಪ್ರಶ್ನಿಸಲಿ” ಎಂದರು
ಈ ಸಂದರ್ಭದಲ್ಲಿ ಮಾಜಿ ಶಾಸಕ ಎ ಪಾಪಾರೆಡ್ಡಿ, ನಗರ ಅಧ್ಯಕ್ಷ ರಾಘವೇಂದ್ರ ಉಟ್ಕೂರು, ಜಿ ಶಂಕರರೆಡ್ಡಿ, ರವೀಂದ್ರ ಜಲ್ದಾರ, ಗಿರೀಶ್ ಕನಕವೀಡು, ಶಿವಬಸ್ಸಪ್ಪ ಮಾಲಿಪಾಟೀಲ್ ಇದ್ದರು.
ವರದಿ : ಹಫೀಜುಲ್ಲ