- ‘ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡಿದ್ದು ಸ್ವಾಗತಾರ್ಹ’
- ‘ಸದಾಶಿವ ಆಯೋಗದ ವರದಿ ಜಾರಿ ಹೋರಾಟಕ್ಕೆ ಶ್ರಮಿಸಿದವರಿಗೆ ಅಭಿನಂದನೆ’
ಶತ-ಶತಮಾನಗಳಿಂದ ಅಸ್ಪ್ರಶ್ಯತೆಯಲ್ಲಿ ಬೆಂದ ಅತ್ಯಂತ ಶೋಷಿತ ಸಮುದಾಯಗಳಾದ ಮಾದಿಗ, ಛಲವಾದಿ, ಸಮಗಾರ, ಡೋಹರ ಮತ್ತು ಮೋಚಿಗಾರ ಸಮುದಾಯಗಳಿಗೆ ನ್ಯಾಯಯುತವಾಗಿ ಸಿಗಬೇಕಾದ ಮೀಸಲಾತಿ ಸೌಲಭ್ಯಗಳು ಸಿಗದೇ ವಂಚಿತರನ್ನಾಗಿ ಮಾಡಲಾಗಿದೆ ಎಂದು ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ರಾಮಣ್ಣ ಗಡದ ಕಿಡಿಕಾರಿದ್ದಾರೆ.
ಗದಗ ಜಿಲ್ಲೆ ಲಕ್ಷೇಶ್ವರ ನಗರದ ಪ್ರವಾಸಿ ಮಂದಿರಲ್ಲಿ ಸೋಮವಾರ ದಲಿತ ಮುಖಂಡರು ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ ರಾಮಣ್ಣ ಗಡದ ಮಾತನಾಡಿ, “ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಪಾರಸ್ಸು ಮಾಡಬೇಕೆಂದು ಹಲವು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿತ್ತು. ಹೋರಾಟವನ್ನು ಪರಿಗಣಿಸಿ ಬಿಜೆಪಿ ಆಡಳಿತ ಸರ್ಕಾರ ಕೊನೆಗೂ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿಯನ್ನು ಕೇಂದ್ರಕ್ಕೆ ಸಲ್ಲಿಸಿರುವುದು ಸ್ವಾಗತಾರ್ಹ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಕೀಲ ಮೈಲಾರಪ್ಪ ಡಿ ಎಚ್ ಮಾತನಾಡಿ, “ಮೂಲ ಪರಿಶಿಷ್ಟ ಸಮುದಾಯದ ಬಹುದಿನಗಳ ಬೇಡಿಕೆಯಾದ ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವುದರಿಂದ ಮಾದಿಗ, ಹೊಲೆಯ, ಸಮಗಾರ, ಡೋಹರ ಮತ್ತು ಮೋಚಗಾರ ಪಂಚಮ ಸಮುದಾಯ ಹೆಮ್ಮೆಪಡುವ ಸಂಗತಿಯಾಗಿದೆ” ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? : ಪ್ರಸ್ತುತ ವಿಧಾನಸಭಾ ಚುನಾವಣೆ ಜನತೆಯ ಪಾಲಿಗೆ ಮಹತ್ವದ್ದಾಗಿದೆ: ಸಮಾನ ಮನಸ್ಕರ ಒಕ್ಕೂಟ
“ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿಯನ್ನು ಅನುಮೋದನೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶ್ರಮವಹಿಸಿದ ಸಚಿವರು, ಸಮುದಾಯದ ಹಿರಿಯರು, ಚಿತ್ರದುರ್ಗದ ಮಾದರ ಚೆನ್ನಯ್ಯ ಸ್ವಾಮೀಜಿ ಮತ್ತು 30 ವರ್ಷಗಳ ಕಾಲ ಎಲ್ಲ ರೀತಿಯ ಹೋರಾಟ, ಪಾದಯಾತ್ರೆ, ಬೈಕ್ ರ್ಯಾಲಿ ಹೀಗೆ ಹಲವಾರು ರೀತಿಯಲ್ಲಿ ಹೋರಾಟ ಮಾಡಿದ ಹಿರಿಯ ಮತ್ತು ಯುವ ಹೋರಾಟಗರಾರಿಗೆ ಸಮುದಾಯದ ಪರವಾಗಿ ಧನ್ಯವಾದಗಳು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಯುವ ನಾಯಕ ಗಾಳೆಪ್ಪ ಹರಿಜನ ಮತ್ತು ಮಂಜುನಾಥ ದೊಡ್ಡಮನಿ ಸೇರಿದಂತೆ ಹಲವರು ಹಾಜರಿದ್ದರು.