- ಹರಿಯಾಣ ಕರ್ನಲ್ ಜಿಲ್ಲೆಯ ತರೌರಿ ಪಟ್ಟಣದಲ್ಲಿ ದುರಂತ
- ಅಕ್ಕಿ ಗಿರಣಿ ಕಟ್ಟಡದಲ್ಲಿ ನಿದ್ರಿಸುತ್ತಿದ್ದ ಸುಮಾರು 200 ಕಾರ್ಮಿಕರು
ಹರಿಯಾಣ ರಾಜ್ಯದ ಕರ್ನಲ್ ಜಿಲ್ಲೆಯಲ್ಲಿ ಮಂಗಳವಾರ (ಏಪ್ರಿಲ್ 18) ಬೆಳಿಗ್ಗೆ ಮೂರು ಮಹಡಿಯ ಅಕ್ಕಿ ಗಿರಣಿ ಕಟ್ಟಡದ ಒಂದು ಭಾಗ ಕುಸಿದು ಬಿದ್ದ ಪರಿಣಾಮ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ.
ಘಟನೆಯಲ್ಲಿ 20 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಲ್ ಜಿಲ್ಲೆಯ ತರೌರಿ ಪಟ್ಟಣದಲ್ಲಿ ನಡುಕಿನ ಜಾವ 3 ಗಂಟೆಯ ಹೊತ್ತಿಗೆ ಶಿವಶಕ್ತಿ ಅಕ್ಕಿ ಗಿರಣಿಯ ಕಟ್ಟಡ ಕುಸಿದಿದೆ.
ಕಟ್ಟಡ ಕುಸಿದ ಸಂದರ್ಭದಲ್ಲಿ ಸುಮಾರು 200 ಕಾರ್ಮಿಕರು ಕಟ್ಟಡದಲ್ಲಿ ನಿದ್ರಿಸುತ್ತಿದ್ದರು ಎಂದು ಸ್ಥಳದಲ್ಲಿದ್ದ ಕಾರ್ಮಿಕರು ಹೇಳಿದ್ದಾರೆ.
ಕಟ್ಟಡದ ಮೇಲಿನ ಮಹಡಿಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಇದರಿಂದ ಅಲ್ಲಿದ್ದ ನಾಲ್ವರು ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ. ಹರಿಯಾಣ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.
“ಕಟ್ಟಡ ಕುಸಿತದಲ್ಲಿ ಮೃತರೆಲ್ಲರೂ ವಲಸೆ ಕಾರ್ಮಿಕರು ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ. ಗಾಯಗೊಂಡವರನ್ನು ಸನಿಹದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ” ಎಂದು ಕರ್ನಲ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಶಶಾಂಕ್ ಕುಮಾರ್ ಸಾವನ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚುನಾವಣಾ ಆಯುಕ್ತರಾಗಿ ಅರುಣ್ ಗೋಯಲ್ ನೇಮಕ; ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಪೀಠ
ಹರಿಯಾಣ ಕಟ್ಟಡ ದುರಂತದಲ್ಲಿ ಇನ್ನೂ ಅನೇಕ ಕಾರ್ಮಿಕರು ಕಟ್ಟಡದ ಅವಶೇಷಗಳಡಿ ಸಿಲುಕಿರುವ ಶಂಕೆ ಇದ್ದು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸರು ಮತ್ತು ಆಂಬುಲೆನ್ಸ್ಗಳು ಸ್ಥಳದಲ್ಲಿ ಬೀಡು ಬಿಟ್ಟಿವೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ (ಎನ್‌ಡಿಆರ್‌ಎಫ್) ತಂಡಗಳು ಸ್ಥಳಕ್ಕೆ ದೌಡಾಯಿಸಿವೆ. ನೂರಕ್ಕೂ ಹೆಚ್ಚು ಕಾರ್ಮಿಕರು ಸ್ಥಳದಲ್ಲಿ ಜಮಾಯಿಸಿದ್ದಾರೆ. ಇವರನ್ನು ನಿಯಂತ್ರಿಸಲು ಭಾರೀ ಪ್ರಮಾಣದ ಪೊಲೀಸರು ಆಗಮಿಸಿದ್ದಾರೆ.
ಅವಶೇಷಗಳಡಿ ಸಿಲುಕಿದ ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲಾಗಿದೆ. ಸ್ಥಳದಲ್ಲಿ ಕಾರ್ಮಿಕರ ಸಂಬಂಧಿಕರು ಜಮಾಯಿಸಿದ್ದು ಅವರ ಆಕ್ರಂದನ ಮುಗಿಲು ಮುಟ್ಟುತ್ತಿದೆ. ಕಾರ್ಮಿಕರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಗಾಯಗೊಂಡ ಕಾರ್ಮಿಕರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಕೈಗೊಳ್ಳಲಾಗಿದೆ. ಕಾರ್ಮಿಕರಿಗೆ ಸ್ಥಳದಲ್ಲಿ ನೆರವು ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ.