ಶಿವರಾತ್ರಿಯ ಶಿವಲಿಂಗ ಪ್ರತಿಷ್ಠೆ: ಅರವಿಪ್ಪುರಂನಲ್ಲಿ ನಾರಾಯಣ ಗುರುಗಳ ಮೊದಲ ಕ್ರಾಂತಿಕಾರಿ ಹೆಜ್ಜೆ

Date:

Advertisements

ಇತ್ತೀಚೆಗಿನ ಕೆಲವು ದಿನಗಳಿಂದ ದೇಶದ ವಿವಿಧೆಡೆಗಳಲ್ಲಿ ದಲಿತರು ದೇವಸ್ಥಾನ ಪ್ರವೇಶಿಸುವುದನ್ನು ತಡೆಯುವುದು ಗೋಮೂತ್ರ ಅಥವಾ ಗಂಗಾ ಜಲ ಬಳಸಿ ಅವರು ಮೆಟ್ಟಿದ ಜಾಗವನ್ನು ಶುಚಿಗೊಳಿಸುವುದು ಸಾರ್ವಜನಿಕ ಬಾವಿ, ಕೆರೆಯ ನೀರನ್ನು ಬಳಸಿದರು ಎಂಬ ಕಾರಣಕ್ಕೆ ಅವರ ಮೇಲೆ ಹಲ್ಲೆ ಮಾಡುವುದು, ನಿಂದಿಸುವುದು ಇತ್ಯಾದಿ ಪ್ರಕರಣಗಳು ಹಿಂದಿಗಿಂತ ವ್ಯಾಪಕವಾಗಿ ನಡೆಯುತ್ತಿದೆ.

ದಲಿತರ ಮೇಲೆ ನಡೆಯುತ್ತಿರುವ ಈ ಅಮಾನವೀಯ ಕೃತ್ಯಕ್ಕೆ ಶಾಶ್ವತ ಪರಿಹಾರವೆಂದರೆ ಬ್ರಹ್ಮಶ್ರೀ ನಾರಾಯಣ ಗುರು ಕಲಿಸಿದ ಸ್ವಾವಲಂಬಿ ಜೀವನ. ಇದು ವೃತ್ತಿಯಲ್ಲಿ ಮಾತ್ರವಲ್ಲದೆ ನಂಬಿಕೆಯಲ್ಲೂ ಇರಬೇಕೆಂದಿದ್ದರು. “ನಮ್ಮ ಮಂದಿರಗಳನ್ನು ನಾವೇ ಕಟ್ಟೋಣ” ಎಂಬ ಹೊಸ ಚಿಂತನೆ 1888ರ ಶಿವರಾತ್ರಿ ದಿನದಂದು ನಡೆದ ಐತಿಹಾಸಿಕ ಅರವಿಪ್ಪುರಂ ಕ್ರಾಂತಿಯಿಂದ ರೂಪುಗೊಂಡಿತು. ಇದು ಶ್ರೀ ನಾರಾಯಣ ಗುರುವಿನ ಮೊದಲ ದಿಟ್ಟ ಹೆಜ್ಜೆಯಾಗಿದೆ.

ಪರಿವ್ರಾಜಕರಾಗಿ ದೇಶ ಪರ್ಯಟನೆ ನಡೆಸುತ್ತಿದ್ದ ನಾರಾಯಣ ಗುರುಗಳು 1886ರಲ್ಲಿ ತಿರುವನಂತಪುರಂನ ನೆಯ್ಯಾರ ಹೊಳೆಯ ದಡದಲ್ಲಿರುವ ಅರುವಿಪ್ಪುರಂಗೆ ಬಂದರು. ಆಗ ಅದು ಜನ ಸಂಪರ್ಕವಿಲ್ಲದ ದಟ್ಟ ಕಾಡಾಗಿತ್ತು. ದನ, ಕುರಿಗಳನ್ನು ಮೇಯಿಸಲು ಬರುವವರಿಂದ, ತೋಟಕ್ಕೆ ಸೊಪ್ಪಿಗೆ ಬರುವವರಿಂದ ಗುರುಗಳ ಪರಿಚಯವಾಗತೊಡಗಿತು.

Advertisements

ದಿನ ಕಳೆದಂತೆ ಅಲ್ಲಿನ ಜನರು ರೋಗ ರುಜಿನ ಸಂಕಷ್ಟಗಳ ಪರಿಹಾರಕ್ಕೆ ಗುರುಗಳ ಬಳಿ ಬರಲಾರಂಭಿಸಿದರು. ಆಯುರ್ವೇದ ಪಾಂಡಿತ್ಯವನ್ನು ಬಲ್ಲವರಾದ್ದರಿಂದ ಗಿಡಮೂಲಿಕೆಗಳಿಂದ ಔಷಧಿ ತಯಾರಿಸಿ ಸುತ್ತಮುತ್ತಲ ಜನರಿಗೆ ಸಾಧ್ಯವಾದಷ್ಟು ಶುಶ್ರೂಷೆ ಮಾಡುತಿದ್ದರು. ಇದರ ಜೊತೆಗೆ ಅರವಿಪ್ಪುರಂನ ಪ್ರದೇಶದ ಕೆಳವರ್ಗದ ಮಕ್ಕಳಿಗೆ ವೇದದ ಸೂತ್ರಗಳನ್ನು, ಸಂಸ್ಕ್ರತ ಪಾಠಗಳನ್ನು ಮಲಯಾಳಂ ಭಾಷಾ ಜ್ಞಾನವನ್ನು ಕಲಿಸುವ ಕಾರ್ಯವನ್ನು ಮಾಡತೊಡಗಿದರು. ಅವರಲ್ಲಿ ನಾಯರ್, ಈಳವ, ಪುಲಯ್ಯ, ಪರಯ್ಯ, ನಾಯಾಡಿ ಮತ್ತು ಮುಸ್ಲಿಂ ಮಾಪಿಳ್ಳೆಯರು ಸೇರಿ ಹೆಚ್ಚಿನವರು ಕೆಳ ಜಾತಿಯ ಬಡವರೇ ಆದ್ದರಿಂದ ಗುರುಗಳನ್ನು ಅವರು ದೇವರ ಅವತಾರವೆಂಬಂತೆ ಭಕ್ತಿ ತೋರಿದರು.

ಗುರುಗಳ ಸಮಕಾಲೀನ ಕೇರಳದಲ್ಲಿ ಕೆಳಜಾತಿಯವರಿಗೆ ದೇವಸ್ಥಾನ ಪ್ರವೇಶ ಸಂಪೂರ್ಣವಾಗಿ ನಿಷೇಧಿಸಲ್ಪಟ್ಟಿತ್ತು. ದೇವಸ್ಥಾನದ ಬಾವಿ, ಕರೆಗಳಿಂದ ನೀರು ಸೇದುವ ಹಕ್ಕನ್ನು ನಿರಾಕರಿಸಲಾಗಿತ್ತು. ಪೂಜೆ ಪುನಸ್ಕಾರಗಳಿಂದ ದೂರವಿಡಲಾಗಿತ್ತು. ದೇವಸ್ಥಾನವಿರುವ ಹಾದಿಯಲ್ಲಿ ನಡೆಯವುದನ್ನು ಕೂಡ ತಡೆಹಿಡಿಯಲಾಗಿತ್ತು ಆದ್ದರಿಂದ ಹಿಂದುಳಿದ ವರ್ಗಗಳ ಮಟ್ಟಿಗೆ ಅರವಿಪ್ಪುರಂನ ಗುರುಗಳ ಸಾನಿದ್ಯ ಅದೊಂದು ತೀರ್ಥಕ್ಷೇತ್ರದಂತಾಯಿತು.

ಅಂದಿನ ಕಾಲದಲ್ಲಿ ಶೂದ್ರರಿಗೆ ದೇವಸ್ಥಾನವನ್ನು ಪ್ರವೇಶಿಸುವ ಅವಕಾಶವಿಲ್ಲವಾದರೂ ಅವರು ದೇವರ ಮೇಲೆ ಅತಿಯಾದ ಭಕ್ತಿ ಮತ್ತು ನಂಬಿಕೆಯನ್ನು ಇರಿಸಿದ್ದರು. ಈ ನಂಬಿಕೆ ಶೋಷಣೆಗೂ ಒಳಪಟ್ಟಿತ್ತು. ಗುರುಗಳು ಅವರ ಬೇಡಿಕೆಯಂತೆ ಅರವಿಪ್ಪುರಂ ನಲ್ಲಿ ದೇವಾಲಯವನ್ನು ಸ್ಥಾಪಿಸಿಲು ತೀರ್ಮಾನಿಸಿದರು. ಪುಳಿವತ್ತುಕ್ಕಳ್ ಕುಟುಂಬದ ನೆರವಿನಿಂದ ಗುಡಿಯೊಂದು ನಿರ್ಮಾಣವಾಗಿತ್ತಾದರೂ ಶಿವಲಿಂಗ ಪ್ರತಿಷ್ಠಾಪನೆಯ ಅಧಿಕಾರ ಬ್ರಾಹ್ಮಣರಿಗೆ ಮಾತ್ರ ಎಂಬ ವಾದ ಅಂದು ಚಾಲ್ತಿಯಲ್ಲಿತ್ತು. ಆದರೆ, ಶಿವರಾತ್ರಿಯಂದು ಶಿವಲಿಂಗ ಪ್ರತಿಷ್ಠಾಪನೆ ಮಾಡುವುದಾಗಿ ಗುರುಗಳು ಭಕ್ತರಿಗೆ ತಿಳಿಸಿದರು.

1888ರಲ್ಲಿ ಮಹಾ ಶಿವರಾತ್ರಿ ದಿನದಂದು ಶಿವನಿಗಾಗಿ ಗುಂಡಿಯನ್ನು ಸಿಂಗರಿಸಲು ಅರವಿಪ್ಪುರಂನ ಜನರಲ್ಲಿ ಹೇಳಿದರು. ಸಿಂಗಾರಗೊಂಡ ಗುಡಿಯಲ್ಲಿ ಶಿವಲಿಂಗ ಪ್ರತಿಷ್ಠೆಯ ಸುದ್ದಿ ಊರಲ್ಲಿ ಹರಡಿತು. ಜನರು ತಂಡೋಪ ತಂಡವಾಗಿ ಬಂದು ಸೇರಿದರು. ಪರಂಪರಾಗತವಾಗಿ ಬ್ರಾಹ್ಮಣರೇ ಪ್ರತಿಷ್ಠಾಪಿಸುತ್ತಿದ್ದ ಶಿವಲಿಂಗ ಇಂದು ಕೆಳಜಾತಿಯ ಈಳವರಿಂದ ಪ್ರತಿಷ್ಠಾಪನೆಗೊಳ್ಳಲಿರುವ ಕುತೂಹಲ ಎಲ್ಲರಲ್ಲಿ ಮನೆ ಮಾಡಿತ್ತು.

ಅರ್ಧರಾತ್ರಿಯ ವೇಳೆ ಗುರುಗಳು ನೈಯ್ಯಾರ್ ನದಿಯಲ್ಲಿ ಮುಳುಗಿ, ಸುಮಾರು ತಾಸುಗಳ ಬಳಿಕ ಶಿವಲಿಂಗ ರೂಪದ ಶಿಲೆಯೊಂದನ್ನು ಎತ್ತಿ ತಂದು ಶಾಸ್ತ್ರದ ಚೌಕಟ್ಟನ್ನು ಮೀರಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದರು. ಈ ಐತಿಹಾಸಿಕ ಘಟನೆಗೆ ಜನಸಾಗರವೇ ಸಾಕ್ಷಿಯಾಗಿತ್ತು ಪರಂಪರಾಗತವಾಗಿ ಬೆಳೆದು ಬಂದಿದ್ದ ಸಂಪ್ರದಾಯವನ್ನು ಮುರಿದು ಬದಲಾವಣೆಯ ಮುನ್ನುಡಿ ಬರೆದರು.

WhatsApp Image 2024 03 08 at 7.05.24 PM

ಶಿವಲಿಂಗ ಪ್ರತಿಷ್ಠಾಪನೆಗೆ ಬ್ರಾಹ್ಮಣರು ಮಾತ್ರ ಹಕ್ಕುದಾರರು. ಈ ಪ್ರತಿಷ್ಠಾಪನೆ ಸಿಂಧುವಾಗುವುದಿಲ್ಲ ಎಂದು ಮೇಲ್ವರ್ಗ ಜನರು ಪ್ರಚಾರ ಮಾಡಲಾರಂಭಿಸಿದರು. ಈಳವರಿಗೆ ಮೂರ್ತಿ ಪ್ರತಿಷ್ಠೆಗೆ ಅಧಿಕಾರ ಕೊಟ್ಟವರಾರು? ಎಂದು ನಂಬೂದರಿ ಬ್ರಾಹ್ಮಣರು ಪ್ರಶ್ನಿಸತೊಡಗಿದರು. ಅದಕ್ಕೆ ನಾರಾಯಣ ಗುರುಗಳು, “ನಾವೇನು ಪ್ರತಿಷ್ಠಾಪಿಸಿದ್ದೇವೋ ಅದು ಬ್ರಾಹ್ಮಣ ಶಿವನಲ್ಲ ಇದು ಕೇವಲ ನಮ್ಮ ಶಿವ” ಎಂದು ಮಾರ್ಮಿಕವಾಗಿ ಉತ್ತರಿಸಿದರು. ನೂರಾರು ವರ್ಷಗಳ ನಂತರ ಬ್ರಾಹ್ಮಣೇತರರಿಂದ ಶಿವಲಿಂಗ ಪ್ರತಿಷ್ಠಾಪನೆಯಾದದ್ದು ಹತ್ತೊಂಬತ್ತನೇ ಶತಮಾನದ ಪ್ರಮುಖ ಘಟನೆಯಲ್ಲೊಂದಾಗಿ ಇಂದಿಗೂ ಗುರುತಿಸಲ್ಪಡುತ್ತದೆ.

ಈ ಘಟನೆಯನ್ನು ಅವಲೋಕಿಸುತ್ತಾ ಕವಿ ಕುಮಾರ ಆಶಾನ್ ಹೀಗೆ ಬರೆಯುತ್ತಾರೆ:

“ಸ್ವಾಮಿಗಳು ಏನು ಮಾಡಿದರು ಮತ್ತು ಇದರ ಪ್ರಯೋಜನ ಏನು ಎಂದು ತಿಳಿದವರು ವಿರಳ. ಸಾವಿರಾರು ವರ್ಷಗಳಿಂದ ಬೆಳೆದು ಬಂದ ಜಾತಿ ವೃಕ್ಷದ ಬೇರನ್ನೇ ಕಡಿದು ಬಿಡುವ ಕೊಡಲಿ ಅದು ಎಂದು ಎಷ್ಟು ಜನರಿಗೆ ತಿಳಿದಿದೆ?” (ಶ್ರೀ ನಾರಾಯನ ಗುರು ವಿಜಯ ದರ್ಶನ: ಬಾಬು ಶಿವಪ್ಪ ಪೂಜಾರಿ ಪುಟ ಸಂಖ್ಯೆ – 107)

“ಗುರುಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಅರುವಿಪ್ಪುರಂ ಶಿವಾಲಯವನ್ನು ಜಗತ್ತು ಕೇರಳದಲ್ಲಿಯ ಪುನುರುತ್ಥಾನದ ಆರಂಭೋತ್ಸವದ ಸ್ಪಂದನದ ನೆಲೆಯಲ್ಲಿ ಕಂಡಿತು” ಎಂದು ಎಂ.ಕೆ ಕುಮಾರನ್ ಅಭಿಪ್ರಾಯ ಪಡುತ್ತಾರೆ. “Thus the first victory of the Guru was over” ಎಂದು ನಟರಾಜ ಗುರು ಬರೆಯುತ್ತಾರೆ.

ಶೂದ್ರರಿಂದ ಶಿವಲಿಂಗ ಪ್ರತಿಷ್ಠೆಯಾದುದು ಮಹಾಪಾಪ, ಶಾಸ್ತ್ರಕ್ಕೆ ವಿರುದ್ಧ ಇನ್ನು ಮುಂದೆ ಹಲವಾರು ಅನಾಹುತಗಳು ಸಂಭವಿಸಲಿದೆ ಎಂಬ ವದಂತಿಯನ್ನು ನಂಬೂದರಿಗಳು ಊರಿಡೀ ಆತಂಕ ಹಬ್ಬಿಸಿದರು. ಕೆಲವು ಕಾಲ ಜನರು ಭಯಬೀತರಾಗಿ ಕಾದು ಕೂತರೂ, ಏನೂ ಸಂಭವಿಸದ ಕಾರಣ ಗುರುಗಳ ಬಗ್ಗೆ ಅವರಿಗೆ ಇನ್ನಷ್ಟು ಅಭಿಮಾನ, ಭಕ್ತಿ ಹೆಚ್ಚಾಯಿತು.

ಈ ಘಟನೆಯು ತಿರುವಂಕೂರಿನ ಈಳವರಾದಿಯಾಗಿ ದೌರ್ಜನ್ಯಕ್ಕೊಳದವರಲ್ಲಿ ಹೊಸ ಪರಿವರ್ತನೆಗೆ ದಾರಿಯಾಯಿತು. ಕೆಳವರ್ಗದವರ ಹೃದಯವನ್ನು ಬಡಿದೆಬ್ಬಿಸಿತು. “ಮೇಲ್ವರ್ಗ ಎಂದು ಕರೆಸಿಕೊಳ್ಳುವವರು ಅವರ ದೇವಸ್ಥಾನಗಳಲ್ಲಿ ನಿಮಗೆ ಪ್ರವೇಶ ಕೊಡದಿದ್ದರೆ, ನೀವು ನಿಮ್ಮದೇ ದೇವಸ್ಥಾನಗಳನ್ನು ಕಟ್ಟಿಕೊಳ್ಳಿ” ಎಂದು ಕರೆ ನೀಡಿದರು. (ಶ್ರೀ ನಾರಾಯನ ಗುರು ವಿಜಯ ದರ್ಶನ ಬಾಬು ಶಿವಪ್ಪ ಪೂಜಾರಿ ಪುಟ ಸಂಖ್ಯೆ 160).

ಇಂತಹ ಹೇಳಿಕೆಗಳು ಅವರ್ಣರಲ್ಲಿ ಚೈತನ್ಯ ಮೂಡಿಸಿತು. ಸವರ್ಣರಂತೆ ನಮಗೂ ಪೂಜೆ ಪುರಸ್ಕಾರಗಳು ಮಾಡಲು ಸಾಧ್ಯವಿದೆ ಎಂದು ಅರಿಯತೊಡಗಿದರು. ಸುತ್ತಮುತ್ತಲಿನ ಪ್ರದೇಶದ ಜನರು ದೇವಸ್ಥಾನ ನಿರ್ಮಾಣಕ್ಕಾಗಿ ಗುರುಗಳಲ್ಲಿ ಬೇಡಿಕೆಯಿಟ್ಟರು.

ಕನ್ನಂಪಾರು, ವಕ್ಕಂ, ಕರುನಾಗಪಲ್ಲಿ, ಕೋಳತ್ತುರ್, ಅಂಚುತೆಂಗು, ವೇಳಿಕ್ಕಾಟ್ಟು, ಪುತ್ತೋಟ್ಟು, ಆಲುವ, ತಲಶೇರಿ, ಕೋಲತ್ತುಕ್ಕರ ಹಾಗೂ ದಕ್ಷಿಣ ಕರ್ನಾಟಕದ ಮಂಗಳೂರು ಸೇರಿ ಸುಮಾರು 41 ದೇವಸ್ಥಾನಗಳನ್ನು ಗುರುಗಳ ನೇತೃತ್ವದಿಂದ ಪ್ರತಿಷ್ಠಾಪಿಸಲಾಯಿತು. ವೈಕ್ಕಂ ಶಿವ ದೇವಾಲಯವನ್ನು ‘ಅಸ್ಪೃಶ್ಯರು’ ಪ್ರವೇಶಿಸುವುದನ್ನು ಮಾತ್ರವಲ್ಲದೆ ಸುತ್ತಮುತ್ತಲಿನ ರಸ್ತೆಗಳಲ್ಲಿ ನಡೆಯುವುದನ್ನು ನಿಷೇಧಿಸಿದರಿಂದ ಅದರ ವಿರುದ್ಧ ಗುರುಗಳ ಅನುಯಾಯಿಗಳಾದ ಟಿ.ಕೆ ಮಾಧವನ್, ಕೆ. ಕೇಳಪ್ಪನ್, ಕೆ. ಪಿ ಕೇಶವ ಮೇನೂನ್ ರವರ ನೇತೃತ್ವದಲ್ಲಿ 1924ರಲ್ಲಿ ಈಳವರು ನಡೆಸಿದ ವೈಕ್ಕಂ ಸತ್ಯಾಗ್ರಹ ಅಹಿಂಸಾತ್ಮಕ ಆಂದೋಲನವಾಗಿ ಗುರುತಿಸಿಕೊಂಡಿದೆ. ಶ್ರೀ ನಾರಾಯಣ ಗುರು, ಮಹಾತ್ಮ ಗಾಂಧಿ, ಇ ವಿ ರಾಮಸ್ವಾಮಿ ನಾಯರ್, ಸಿ ರಾಜಗೋಪಾಲಚಾರಿ ಹಾಗೂ ಪೆರಿಯಾರ್ ಈ ಹೋರಾಟದ ಭಾಗವಾಗಿರುವುದು ವಿಶೇಷ.

ಮೂಢನಂಬಿಕೆ, ಕಂದಾಚಾರ, ಅಂಧಶ್ರದ್ಧೆ, ಭೂತಪ್ರೇತ ನಿರ್ಮೂಲನ, ಪ್ರಾಣಿ ಬಲಿ, ಮದ್ಯಪಾನ ಮೊದಲಾದ ಸಾಮಾಜಿಕ ಕೆಡುಕುಗಳನ್ನು ದೇವಾಲಯ ಸ್ಥಾಪಿತವಾದ ಪ್ರದೇಶಗಳಲ್ಲಿ ನಿಷೇಧಿಸಿದರು, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಸೇವೆಯನ್ನು ನೀಡುವ ಮತ್ತು ಸ್ವಉದೋಗಗಳನ್ನು ಸೃಷ್ಟಿಸುವ ಕೇಂದ್ರವಾಗಿ ಬದಲಾಯಿಸಿದರು. ಹಿಂದುಳಿದ ಜನರು ಸ್ವಾವಲಂಬಿಗಳಾಗಿ ಬದುಕುವ ವಾವಾವರಣವನ್ನು ಉಂಟು ಮಾಡಿದರು. ಎಲ್ಲ ಜಾತಿ ಧರ್ಮದವರಿಗೆ ಸಮಾನ ಸ್ಥಾನವನ್ನು ನೀಡುವ ಪುಣ್ಯ ಸ್ಥಳವಾಗಿ ದೇವಾಲಯಗಳನ್ನು ಬದಲಾಯಿಸಿದರು. ಹಲವಾರು ಸೌಹಾರ್ದ ಸಂಗಮಗಳನ್ನು ನಡೆಸಿದರು.

“ಜಾತಿ ಭೇದವು ಧರ್ಮ ದ್ವೇಷವು ಯಾವುದಿಲ್ಲದೇ, ಎಲ್ಲರೂ ಸಹೋದರತ್ವದಿ ಬಾಳು ಸವೆಸುವ ಪುಣ್ಯಸ್ಥಳವೇ ನಿಜವಿದು” ಎಂಬ ಸಮಾನತೆಯ ಸಂದೇಶವನ್ನು ಸಾರ್ವತ್ರಿಕವಾಗಿ ಸಾರಿದರು. ‘ಸತ್ಯ- ದಯೆ-ಶಾಂತಿ-ಧರ್ಮ’ ಎಂಬ ಸಂದೇಶಗಳನ್ನು ದೇವಸ್ಥಾನಗಳಲ್ಲಿ ಕೆತ್ತಿಸಿದರು. ದೇವಾಲಯಗಳ ಮುಖಾಂತರ ಸಮಾನತೆಯನ್ನು ಸಾಧಿಸಲು ಹೊಸ ಹೆಜ್ಜೆ ಹಾಕುತ್ತಾ, ನಾರಾಯಣ ಗುರುಗಳು ದೇಶಾದ್ಯಂತ ಧಾರ್ಮಿಕ ಮತ್ತು ಸಾಮಾಜಿಕ ಬದಲಾವಣೆಗೆ ಹೊಸ ರೂಪ ಕೊಟ್ಟರು.

ashir
ಲೇಖಕರು: ಎಂ. ಅಶೀರುದ್ದೀನ್ ಆಲಿಯಾ, ಸಾರ್ತಬೈಲ್, ಮಂಗಳೂರು
ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X