ಚಿಕ್ಕಬಳ್ಳಾಪುರ ನಗರಸಭೆ ಆಯುಕ್ತ ಎ.ಎಸ್ ಮಂಜುನಾಥ್ ಅವರನ್ನು ಅನರ್ಹತೆ ಆಧಾರದ ಮೇಲೆ ನೇಮಕಾತಿ ರದ್ದುಗೊಳಿಸಿ ಹೈಕೋರ್ಟ್ ಆದೇಶಿಸಿದೆ. ಹೀಗಾಗಿ, ನಗರಸಭೆ ವಾರ್ಡ್ ಸದಸ್ಯರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಇದೇ ರೀತಿ ಸಾಕಷ್ಟು ಮಂದಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿದ್ದಾರೆ. ಕೆಲ ಸದಸ್ಯರ ಮಾತಿಗೆ ಕಿಮ್ಮತ್ತು ನೀಡಿಲ್ಲವೆಂಬ ಕಾರಣಕ್ಕೆ ಈ ರೀತಿ ಮಾಡಿರುವುದು ಸರಿಯಲ್ಲ ಎಂದು ನಗರಸಭೆ ವಾರ್ಡ್ ಸದಸ್ಯ ನರಸಿಂಹಮೂರ್ತಿ ಅಸಮಾಧಾನ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, “ಪೌರಾಯುಕ್ತ ಮಂಜುನಾಥ್ ಅಧಿಕಾರ ವಹಿಸಿಕೊಂಡ ಬಳಿಕ ತೆರಿಗೆ ವಸೂಲಿ, ನಗರದ ಸ್ವಚ್ಛತೆ ಸೇರಿದಂತೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದ್ದವು. ಹಲವು ವರ್ಷಗಳಿಂದ ಮುಂದೂಡಲಾಗಿರುವ ನಗರಸಭೆ ಮಳಿಗೆಗಳ ಹರಾಜು ಪ್ರಕ್ರಿಯೆ, ಮಳಿಗೆಗಳ ಬಾಡಿಗೆ ಹೆಚ್ಚಳ ಮಾಡಬೇಕು ಎಂಬುದು ನಮ್ಮ ಬೇಡಿಕೆಯಾಗಿತ್ತು. ಅದನ್ನ ಹಾಲಿ ಅಧ್ಯಕ್ಷರು ಮಾಡಿದ್ದರು. ಇದು ಕೆಲ ಸದಸ್ಯರಿಗೆ ಭಾರವಾಗಿದ್ದು, ಆಯುಕ್ತರ ನೇಮಕಾತಿ ರದ್ದುಗೊಳಿಸಲು ಕಾರಣವಾಗಿದೆ. ಇದೇ ರೀತಿ ಮುಂದುವರಿದರೆ ಯಾವುದೇ ಅಧಿಕಾರಿ ಬಂದರೂ ನಗರದ ಅಭಿವೃದ್ಧಿ ಎಂದಿಗೂ ಸಾಧ್ಯವಿಲ್ಲ” ಎಂದು 17ನೇ ವಾರ್ಡ್ ಸದಸ್ಯ ಎಸ್ ಎಂ ರಫೀಖ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.
21ನೇ ವಾರ್ಡ್ ಸದಸ್ಯ ಅಫ್ಜಲ್ ಮಾತನಾಡಿ, “ಯಾರೊಂದಿಗೂ ಚರ್ಚೆ ಮಾಡದೇ ಪೌರಾಯುಕ್ತರ ನೇಮಕಾತಿ ರದ್ದಿಗೆ ಆದೇಶ ತಂದಿದ್ದಾರೆ. ನಗರ ಸ್ವಚ್ಛತೆ ಸೇರಿದಂತೆ ಶೇ.35ರಷ್ಟು ತೆರಿಗೆ ವಸೂಲಿ ಹೆಚ್ಚಾಗಿತ್ತು. ವೈಯಕ್ತಿಕ ಉದ್ದೇಶಕ್ಕಾಗಿ ಈ ರೀತಿ ಮಾಡಿರುವುದು ಸರಿಯಾದ ಕ್ರಮವಲ್ಲ” ಎಂದರು.
ಸದಸ್ಯ ನರಸಿಂಹಮೂರ್ತಿ ಧ್ವನಿಗೂಡಿಸಿದ್ದು, “ಈ ಹಿಂದೆ ಅಗತ್ಯ ಸೇವಾನುಭವ, ವಿದ್ಯಾರ್ಹತೆ ಹೊಂದಿಲ್ಲದ ಅಧಿಕಾರಿಗಳು, ಪರಿಸರ ಎಂಜಿನಿಯರ್‌ಗಳೂ ಸಹ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ. ವೈಯಕ್ತಿಕ ಕಾರಣಕ್ಕೆ ಈ ರೀತಿ ಮಾಡಿರುವುದು ಎಷ್ಟು ಸರಿ” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ರಾಜ್ಯ ಮಟ್ಟದ ʼಮಹಿಳಾ ಚೈತನ್ಯ ದಿನʼ
ಹಿನ್ನೆಲೆ : ಆಯುಕ್ತರ ಹುದ್ದೆಗೆ ಬೇಕಿರುವ ಸೇವಾನುಭವ ಮತ್ತು ವಿದ್ಯಾರ್ಹತೆ ಇಲ್ಲದ ಕಾರಣ ಆಯುಕ್ತ ಎ ಎಸ್ ಮಂಜುನಾಥ್ ಅವರನ್ನು ಬದಲಾವಣೆ ಮಾಡುವಂತೆ 17ನೇ ವಾರ್ಡ್ ಸದಸ್ಯ ರಫೀಕ್ ಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರ ನಡೆಸಿರುವ ಹೈಕೋರ್ಟ್ ನಗರಸಭೆ ಆಯುಕ್ತ ಮಂಜುನಾಥ್ ಅವರ ನೇಮಕಾತಿಯನ್ನು ರದ್ದುಗೊಳಿಸಿ ಆದೇಶಿಸಿದೆ. ನಾಲ್ಕು ವಾರಗಳಲ್ಲಿ ಸೂಕ್ತ ಅಧಿಕಾರಿಯನ್ನು ನೇಮಿಸುವಂತೆ ಪೌರಾಡಳಿತ ನಿರ್ದೇಶನಾಲಯಕ್ಕೆ ಸೂಚಿಸಿದೆ.
ಸುದ್ದಿಗೋಷ್ಟಿಯಲ್ಲಿ 3ನೇ ವಾರ್ಡ್ ಸದಸ್ಯೆ ನೇತ್ರಾವತಿ, 27ನೇ ವಾರ್ಡ್ ಸದಸ್ಯೆ ಶಕೀಲಾ ಬಾನು ಇದ್ದರು.