ಇತ್ತೀಚೆಗೆ ತನ್ನ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾದ ಕೋಲ್ಕತ್ತಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಈಗ ಗಾಂಧಿಯೇ ಗೋಡ್ಸೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ಸಮಯ ಬೇಕಾಗುತ್ತದೆ ಎಂದು ಹೇಳುವ ಮೂಲಕ ಸುದ್ದಿಯಾಗಿದ್ದಾರೆ.
ಮಾಧ್ಯಮದಲ್ಲಿ ನಡೆದ ಸಂದರ್ಶನದಲ್ಲಿ ಮಹಾತ್ಮ ಗಾಂಧಿ ಅಥವಾ ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆಯ ಪೈಕಿ ಒಬ್ಬರನ್ನು ಆಯ್ಕೆ ಮಾಡಲು ಹೇಳಿದ್ದು, ಇದಕ್ಕೆ ಉತ್ತರಿಸಲು ಸಮಯ ಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಹೇಳಿದ್ದಾರೆ.
ಕೋಲ್ಕತ್ತಾ ಹೈಕೋರ್ಟ್‌ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ ಬಳಿಕ ಅಭಿಜಿತ್ ಗಂಗೋಪಾಧ್ಯಾಯರ ಮುಂದಿನ ಜೀವನದ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದು ಈ ಸಂದರ್ಭದಲ್ಲೇ ಕೆಲವು ಪ್ರಶ್ನೆಗಳನ್ನು ಕೇಳಲಾಗಿದೆ.
ಕೊನೆಯಲ್ಲಿ ರ‍್ಯಾಪಿಡ್ ಫೈರ್ ರೌಂಡ್‌ನಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿ, ಎರಡು ಆಯ್ಕೆಯಲ್ಲಿ ಒಂದನ್ನು ಆರಿಸಲು ತಿಳಿಸಲಾಗಿದೆ. ಈ ವೇಳೆ ಕಾರ್ಲ್ ಮಾರ್ಕ್ಸ್ ಅಥವಾ ದಾಮೋದರ್ ವಿನಾಯಕ ಸಾವರ್ಕರ್ ನಡುವೆ ಗಂಗೋಪಾಧ್ಯಾಯ ಸಾವರ್ಕರ್ ಆಯ್ಕೆ ಮಾಡಿಕೊಂಡಿದ್ದಾರೆ.
ಇನ್ನು ಜಾತ್ಯಾತೀತ ಭಾರತ ಮತ್ತು ಹಿಂದೂ ರಾಷ್ಟ್ರದ ನಡುವೆ ಜಾತ್ಯಾತೀತ ಭಾರತವನ್ನು ನಿವೃತ್ತ ನ್ಯಾಯಾಧೀಶರು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಗಾಂಧಿ ಮತ್ತು ಗೋಡ್ಸೆ ನಡುವೆ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಲು ಒಪ್ಪಿಕೊಂಡಿಲ್ಲ. “ನಾನು ಈ ಪ್ರಶ್ನೆಗೆ ಈಗ ಉತ್ತರಿಸಲ್ಲ. ನಾನು ಈ ಬಗ್ಗೆ ಕೊಂಚ ಆಲೋಚನೆ ಮಾಡಬೇಕಾಗುತ್ತದೆ,” ಎಂದು ಹೇಳಿದರು.
ಆದರೆ ವಿಪಕ್ಷಗಳು ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನ್ಯಾಯಾಧೀಶರಾಗಿದ್ದವರಿಗೆ ಗಾಂಧಿ ಮತ್ತು ಗೋಡ್ಸೆ ನಡುವೆ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಅಂತಹ ವ್ಯಕ್ತಿ ನ್ಯಾಯಾಲಯದಲ್ಲಿ ಯಾವ ಮನಸ್ಥಿತಿಯಲ್ಲಿ ಇದ್ದಿರಬಹುದು, ಹೇಗೆ ತೀರ್ಪು ನೀಡಿರಬಹುದು,” ಎಂದು ಟಿಎಂಸಿ ಸಂಸದ ಸಾಕೇತ್ ಗೋಖಲೆ ಪ್ರಶ್ನಿಸಿದ್ದಾರೆ.