ಸುಮಾರು 28 ವರ್ಷಗಳ ಬಳಿಕ ಭಾರತವು 71ನೇ ವಿಶ್ವ ಸುಂದರಿ ಸ್ಪರ್ಧೆಯನ್ನು ಆಯೋಜಿಸಿದ್ದು, ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾ ಅವರು 2024ನೇ ಸಾಲಿನ ವಿಶ್ವಸುಂದರಿ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಲೆಬನಾನ್‌ನ ಯಾಸ್ಮಿನಾ ಜೈಟೌನ್ ರನ್ನರ್-ಅಪ್ ಆಗಿದ್ದಾರೆ.
ಮುಂಬೈನ ಬಿಕೆಸಿಯ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಈ ಸಮಾರಂಭವು ನಡೆದಿದ್ದು, 112 ಸುಂದರಿಯರು ಸ್ಪರ್ಧೆಯಲ್ಲಿ ಭಾಗಿಯಾಗಿದ್ದಾರೆ. ಕಳೆದ ವರ್ಷದ ವಿಶ್ವ ಸುಂದರಿ ವಿಜೇತೆ ಪೋಲೆಂಡ್‌ನ ಕರೋಲಿನಾ ಬಿಲಾವ್ಸ್ಕಾ ಕ್ರಿಸ್ಟಿನಾ ಪಿಸ್ಕೋವಾಗೆ ಕಿರೀಟಧಾರಣೆ ಮಾಡಿದರು.
ಈ ಸೌಂದರ್ಯ ಸ್ಪರ್ಧೆಯನ್ನು ಸೋನಿಲೈವ್‌ನಲ್ಲಿ ನೇರ ಪ್ರಸಾರ ಮಾಡಲಾಗಿದ್ದು, 140ಕ್ಕೂ ಅಧಿಕ ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಪ್ರಸಾರ ಮಾಡಲಾಗಿದೆ. ಈ ವರ್ಷ ಮಿಸ್ ಇಂಡಿಯಾ ವಿಜೇತೆ ಉಡುಪಿ ಜಿಲ್ಲೆಯ ಇನ್ನಂಜೆ ಮೂಲದ 22 ವರ್ಷದ ಸಿನಿ ಶೆಟ್ಟಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, ಅಗ್ರ 4ರೊಳಗೆ ಬರಲು ಅವರಿಗೆ ಸಾಧ್ಯವಾಗಲಿಲ್ಲ.
ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್, ಮಾಜಿ ವಿಶ್ವ ಸುಂದರಿ ಫಿಲಿಪ್ಪೀನ್ಸ್‌ನ ಮೇಗನ್ ಯಂಗ್ ಕಾರ್ಯಕ್ರಮ ನಿರ್ವಹಣೆ ಮಾಡಿದ್ದು ಸಮಾರಂಭದಲ್ಲಿ ನಟಿಯರಾದ ಕೃತಿ ಸನೋನ್, ಪೂಜಾ ಹೆಗ್ಡೆ ಮತ್ತು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ರಜತ್ ಶರ್ಮಾ, ಸಮಾಜ ಸೇವಕಿ ಅಮೃತಾ ಫಡ್ನವಿಸ್, ವಿನೀತ್ ಜೈನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
28 ವರ್ಷಗಳ ಬಳಿಕ ಭಾರತದಲ್ಲಿ ವಿಶ್ವ ಸುಂದರಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಭಾರತದಲ್ಲಿ ಈ ಹಿಂದೆ 1996ರಲ್ಲಿ ವಿಶ್ವ ಸುಂದರಿ ಸ್ಪರ್ಧೆಯ 46ನೇ ಆವೃತ್ತಿಯನ್ನು ಆಯೋಜಿಸಲಾಗಿತ್ತು. ಆಗ ಗ್ರೀಸ್‌ನ ಐರಿನ್ ಸ್ಕ್ಲಿವಾ ವಿಶ್ವ ಸುಂದರಿ ಪಟ್ಟ ತನ್ನದಾಗಿಸಿಕೊಂಡಿದ್ದರು.