ಸಿಎಂ ಸಿದ್ದರಾಮಯ್ಯ ಅವರ ಆಪ್ತ ಸಲಹೆಗಾರರಾದ ಆಳಂದ ಶಾಸಕ ಬಿ.ಆರ್. ಪಾಟೀಲ್ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರು ಬೀದರ್‌ನಿಂದ ಲೋಕಸಭೆ ಚುನಾವಣೆಗೆ ಸ್ಫರ್ಧಿಸುವುದಾದರೆ ಸ್ವಾಗತಿಸುತ್ತೇನೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಹೇಳಿದ್ದಾರೆ.
“ಮಾ.7ರಂದು ಬಸವಕಲ್ಯಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿನಂದನಾ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಆಸನ ನೀಡಿರಲಿಲ್ಲ ಎಂದು ಬಿ.ಆರ್.ಪಾಟೀಲ್ ಅವರ ಅಸಮಾಧಾನದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಈಶ್ವರ ಖಂಡ್ರೆ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ತಾವೇ ಸ್ವತಃ ಬಿ.ಆರ್.ಪಾಟೀಲರಿಗೆ 2 ಬಾರಿ ದೂರವಾಣಿ ಕರೆ ಮಾಡಿ ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೆ, ಆದರೆ ಅವರು ಕಾರ್ಯಕ್ರಮಕ್ಕೆ ಬಂದಿದ್ದು ತಮ್ಮ ಗಮನಕ್ಕೇ ಬಂದಿಲ್ಲ ನಂತರ ಫೋನ್ ಮಾಡಿದರೂ ಕರೆ ಸ್ವೀಕರಿಸಲಿಲ್ಲ” ಎಂದು ತಿಳಿಸಿದ್ದಾರೆ.
“ವೇದಿಕೆಯ ಮೊದಲ ಸಾಲಿನಲ್ಲಿ ಬಿ.ಆರ್. ಪಾಟೀಲ್ ಅವರ ಹೆಸರಿನ ಚೀಟಿ ಅಂಟಿಸಿ ಪ್ರತ್ಯೇಕ ಆಸನ ಮೀಸಲಿಡಲಾಗಿತ್ತು. ನಾನೇ ಹಿಂದಿನ ರಾತ್ರಿ ಖುದ್ದು ಎಲ್ಲ ಆಹ್ವಾನಿತರ ಹೆಸರನ್ನು ಆಸನಗಳ ಮೇಲೆ ಅಂಟಿಸಿರುವುದನ್ನು ಖಾತ್ರಿಪಡಿಸಿಕೊಂಡಿದ್ದೆ, ಆದರೆ ಹಿರಿಯರಾದ ಬಿ.ಆರ್.ಪಾಟೀಲ್ ಅವರು ಕಾರ್ಯಕ್ರಮಕ್ಕೆ
ಬಂದಿದ್ದನ್ನು ತಾವು ಗಮನಿಸಿಲ್ಲ. ಅವರು ಬಂದಿರುವುದು ನನಗೆ ತಿಳಿದಿಲ್ಲ. ಅರಿಯದೇ ಆಗಿರುವ ಅಚಾತುರ್ಯಕ್ಕೆ ತೀವ್ರ ವಿಷಾದ ವ್ಯಕ್ತಪಡಿಸುತ್ತೇನೆ” ಎಂದು ಹೇಳಿದ್ದಾರೆ.
“ಬೀದರ್‌ನಲ್ಲಿ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನೆ ಮತ್ತು 371(ಜೆ) ದಶಮಾನೋತ್ಸವ ಕಾರ್ಯಕ್ರಮವನ್ನು ಹಲವು ಸಂಘ ಸಂಸ್ಥೆಗಳು ಸೇರಿ ನಡೆಸಿದ್ದವು. ಅಲ್ಲಿ ಸಹ ಅವರಿಗೆ ಆಸನ ಇಡಲಾಗಿತ್ತೋ ಇಲ್ಲವೋ ಅದು ತಮಗೆ ತಿಳಿದಿಲ್ಲ. ಆ ಬಗ್ಗೆ ಈವರೆಗೆ ಬಿ.ಆರ್. ಪಾಟೀಲ್ ಅವರು ತಮ್ಮ ಗಮನಕ್ಕೂ ತಂದಿಲ್ಲ” ಎಂದು ಹೇಳಿದ್ದಾರೆ.
“ತಮ್ಮ ತಂದೆ ಮಾಜಿ ಸಚಿವ ಡಾ. ಭೀಮಣ್ಣ ಖಂಡ್ರೆ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಕೂಡ ಬಿ.ಆರ್. ಪಾಟೀಲ್ ಅವರ ಹೆಸರು ಹಾಕಿಸಿದ್ದೆ. ಕರೆ ಮಾಡಿ ಆಹ್ವಾನಿಸಿದ್ದೆ. ಅವರ ಹೆಸರಿನಲ್ಲಿ ಆಸನವನ್ನೂ ಮೀಸಲಿಡಲಾಗಿತ್ತು. ಆದರೆ ಅದೇಕೆ ಅವರು ನನ್ನ ವಿರುದ್ಧ ಅಸಮಾಧಾನ ಆಗಿದ್ದಾರೋ ತಿಳಿಯದಾಗಿದೆ” ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹೊಸ ಓದು | ನಡುಬಗ್ಗಿಸದ ಎದೆಯ ದನಿ: ಶೂದ್ರ ಯುವಕರು ಓದಬೇಕಾದ ಪುಸ್ತಕ
“ಬಿ.ಆರ್. ಪಾಟೀಲ್ ಅವರು ನಮ್ಮ ಪಕ್ಷದ ಮತ್ತು ನಮ್ಮ ಸಮುದಾಯದ ಶಾಸಕರಾಗಿದ್ದು, ಅವರ ಬಗ್ಗೆ ನನಗೆ ಅಪಾರ ಪ್ರೀತಿ, ಗೌರವ ಇದೆ. ನಾನು ಉದ್ದೇಶಪೂರ್ವಕವಾಗಿ ಅವರಿಗೆ ಅವಮಾನ ಮಾಡುವ ಪ್ರಮೇಯವೇ ಬರುವುದಿಲ್ಲ. ತಿಳಿದೋ ತಿಳಿಯದೆಯೋ ಅಚಾತುರ್ಯವಾಗಿದ್ದು, ಅವರ ಮನಸ್ಸಿಗೆ ನೋವಾಗಿದೆ. ಇದಕ್ಕಾಗಿ ವಿಷಾದಿಸುತ್ತೇನೆ” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.