ಶನಿವಾರ ರಾತ್ರಿ ಚುನಾವಣಾ ಆಯುಕ್ತ ಅರುಣ್ ಗೋಯೆಲ್ ಅವರು ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ಅಚ್ಚರಿ ಮೂಡಿಸಿದೆ. ಮಾತ್ರವಲ್ಲದೆ, ದೇಶದಲ್ಲಿ ನ್ಯಾಯಸಮ್ಮತ ಮತ್ತು ಮುಕ್ತ ಚುನಾವಣೆ ನಡೆಯುವ ಕುರಿತು ಊಹಾಪೋಹಗಳು ಮತ್ತು ಅನುಮಾನಗಳಿಗೂ ದಾರಿ ಮಾಡಿಕೊಟ್ಟಿದೆ.
ಲೋಕಸಭಾ ಚುನಾವಣೆಯ ಘೋಷಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಚುನಾವಣಾ ಆಯುಕ್ತರು ಯಾಕೆ ರಾಜೀನಾಮೆ ನೀಡಬೇಕು? ವಿಶೇಷವಾಗಿ, ಅವರ ಅಧಿಕಾರಾವಧಿಯು 2027ರ ಡಿಸೆಂಬರ್ 5ರಂದು ಮಾತ್ರ ಕೊನೆಗೊಳ್ಳುತ್ತದೆ. ಅಂದಹಾಗೆ, ಅವರು ರಾಜೀನಾಮೆ ನೀಡದಿದ್ದರೆ, ಅವರು ಮುಖ್ಯ ಚುನಾವಣಾ ಆಯುಕ್ತರಾಗುತ್ತಿದ್ದರು.
ಅರುಣ್ ಗೋಯೆಲ್ ತಮ್ಮ ರಾಜೀನಾಮೆಗೆ ‘ವೈಯಕ್ತಿಕ ಕಾರಣಗಳನ್ನು’ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ. ಆದರೆ, ಅವರು ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂದು ಕೆಲವು ಅಧಿಕಾರಿಗಳು ಹೇಳಿರುವುದಾಗಿಯೂ ವರದಿಯಾಗಿದೆ.
ಅರುಣ್ ಗೋಯೆಲ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಗೀಕರಿಸಿದ್ದಾರೆ ಎಂದು ಕಾನೂನು ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಫೆಬ್ರವರಿಯಲ್ಲಿ ಅನುಪ್ ಚಂದ್ರ ಪಾಂಡೆ ನಿವೃತ್ತಿಯಾಗಿದ್ದಾರೆ. ಇದೀಗ, ಗೋಯೆಲ್ ರಾಜೀನಾಮೆ ನೀಡಿದ್ದಾರರೆ. ಹೀಗಾಗಿ, ಮೂರು ಸದಸ್ಯರ ಚುನಾವಣಾ ಆಯೋಗವು ಈಗ ಕೇವಲ ಒಬ್ಬ ಸದಸ್ಯ, ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್‌ಗೆ ಸೀಮಿತವಾಗಿದೆ.
ಅಂದಹಾಗೆ, ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ನೇಮಕವನ್ನು ನಿಯಂತ್ರಿಸಲು ಕೇಂದ್ರವು 2024ರ ಜನವರಿ 2ರಂದು ಹೊಸ ಕಾನೂನನ್ನು ಜಾರಿಗೆ ತಂದಿದೆ. ಅದರಂತೆ, ಕಾನೂನು ಸಚಿವರ ನೇತೃತ್ವದಲ್ಲಿ ಇಬ್ಬರು ಸಚಿವರು ಹಾಗೂ ಇಬ್ಬರು ಕೇಂದ್ರ ಕಾರ್ಯದರ್ಶಿಗಳನ್ನು ಒಳಗೊಂಡ ಶೋಧನಾ ಸಮಿತಿಯು ಐದು ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸುತ್ತದೆ. ಬಳಿಕ, ಆ ಪಟ್ಟಿಯನ್ನು ಪ್ರಧಾನಿ ಮೋದಿ ನೇತೃತ್ವದ ಮೂವರು ಸದಸ್ಯರ ಸಮಿತಿ (ಪ್ರಧಾನಿ, ಓರ್ವ ಸಚಿವ ಹಾಗೂ ವಿಪಕ್ಷ ನಾಯಕ) ಚುನಾವಣಾ ಆಯುಕ್ತರನ್ನು ನೇಮಿಸುತ್ತದೆ. ಈ ಹಿಂದೆ, ಈ ಮೂವರ ಸಮಿತಿಯಲ್ಲಿ ಪ್ರಧಾನಿ, ವಿಪಕ್ಷ ನಾಯಕ ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಇರುತಿದ್ದರು. ಆದರೆ, ಈಗ ಮುಖ್ಯ ನ್ಯಾಯಮೂರ್ತಿಯನ್ನು ತೆಗೆದು, ಸರ್ಕಾರದ ಸಚಿವರನ್ನು ಸೇರಿಸಲಾಗಿದೆ. ಹೀಗಾಗಿ, ಆಯುಕ್ತರ ನೇಮಕಾತಿಯು ಸರ್ಕಾರದ ಪರವಾಗಿದ್ದವರೇ ಆಗಿರುತ್ತಾರೆ ಎಂಬ ಕಳವಳಕ್ಕೆ ಕಾರಣವಾಗಿದೆ.
ಗೋಯಲ್ ಅವರು ಪಂಜಾಬ್ ಕೇಡರ್‌ನ 1985-ಬ್ಯಾಚ್ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಅವರನ್ನು 2022ರ ನವೆಂಬರ್‌ನಲ್ಲಿ ಚುನಾವಣಾ ಆಯೋಗಕ್ಕೆ ನೇಮಿಸಲಾಗಿತ್ತು. ಅವರ ನೇಮಕವನ್ನು ಪ್ರಸ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಯನ್ನೂ ಸಲ್ಲಿಸಲಾಗಿತ್ತು. ಆದರೆ, ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು.
ಆದರೆ, ಈಗ ಗೋಯಲ್ ಅವರು ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆ ಬಗ್ಗೆ ವಿಪಕ್ಷಗಳು ಕಳವಳ ವ್ಯಕ್ತಪಡಿಸಿದೆ. ತೃಣಮೂಲ ಕಾಂಗ್ರೆಸ್ ನಾಯಕ ಸಾಕೇತ್ ಗೋಖಲೆ ತಮ್ಮ ‘ಎಕ್ಸ್’ ಖಾತೆಯಲ್ಲಿ, “ಹಠಾತ್ ನಡೆಯಲ್ಲಿ, ಚುನಾವಣಾ ಆಯುಕ್ತ ಅರುಣ್ ಗೋಯಲ್ ಅವರು ಹಠಾತ್ತನೆ ರಾಜೀನಾಮೆ ನೀಡಿದ್ದಾರೆ. ಮತ್ತೊಂದು ಹುದ್ದೆ ಖಾಲಿಯಾಗಿದೆ. ಮೋದಿ ಸರ್ಕಾರವು ಹೊಸ ಕಾನೂನನ್ನು ಪರಿಚಯಿಸಿದೆ. ಖಾಲಿ ಹುದ್ದೆಗಳಿಗೆ ಪ್ರಧಾನಿ ಮೋದಿ ಮತ್ತು ಸಚಿವರು ಆಯುಕ್ತರನ್ನು ಆಯ್ಕೆ ಮಾಡುತ್ತಾರೆ. ಆದ್ದರಿಂದ, 2024ರ ಲೋಕಸಭಾ ಚುನಾವಣೆಯ ಮೊದಲು ಈ ಬೆಳವಣಿಗೆ ಸಂದೇಹ ಮೂಡಿಸಿದೆ” ಎಂದು ಹೇಳಿದ್ದಾರೆ.
ಹಿರಿಯ ಪತ್ರಕರ್ತ ರವೀಶ್ ಕುಮಾರ್, “ಅರುಣ್ ಗೋಯೆಲ್ ರಾಜೀನಾಮೆ ನೀಡಲು ತುಂಬಾ ಧೈರ್ಯ ಮಾಡಿದ್ದಾರೆ. ಹೀಗಾಗಿ, ಅವರು ಪತ್ರಿಕಾಗೋಷ್ಠಿ ನಡೆಸಿ ತಮ್ಮ ರಾಜೀನಾಮೆಗೆ ಕಾರಣವನ್ನು ವಿವರಿಸಬೇಕು. ಅವರ ಮೇಲೆ ಒತ್ತಡವಿತ್ತೇ ಎಂಬುದನ್ನು ತಿಳಿಸಬೇಕು” ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್, “ಗೋಯೆಲ್ ರಾಜೀನಾಮೆ ಗಂಭೀರ ವಿಷಯವಾಗಿದೆ. ಚುನಾವಣಾ ಆಯೋಗವು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದರಲ್ಲಿ ಸಂಪೂರ್ಣವಾಗಿ ಯಾವುದೇ ಪಾರದರ್ಶಕತೆ ಇಲ್ಲವಾಗಿದೆ” ಎಂದಿದ್ದಾರೆ.