ಚುನಾವಣಾ ಬಾಂಡ್ ವಿವರಗಳನ್ನು ನೀಡಲು ಸಮಯದ ವಿಸ್ತರಿಸುವಂತೆ ಸುಪ್ರೀಂ ಕೋರ್ಟ್‌ಗೆ ಎಸ್‌ಬಿಐ ಮನವಿ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್, “ತನ್ನ ಘನತೆಯನ್ನು ಕಾಪಾಡಿಕೊಳ್ಳುವುದು ಸುಪ್ರೀಂ ಕೋರ್ಟ್‌ನ ಜವಾಬ್ದಾರಿಯಾಗಿದೆ. ಎಸ್‌ಬಿಐ ಮನವಿಯನ್ನು ಸ್ವೀಕರಿಸುವುದು ಸುಲಭವಲ್ಲ” ಎಂದು ಹೇಳಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಚುನಾವಣಾ ಬಾಂಡ್ ಯೋಜನೆಯ ವಿರುದ್ಧದ ಪ್ರಕರಣದಲ್ಲಿ ಅರ್ಜಿದಾರರ ಪರವಾಗಿ ವಾದಿಸುತ್ತಿರುವವರಲ್ಲಿ ಸಿಬಲ್ ಕೂಡ ಒಬ್ಬರು. “ಎಸ್‌ಬಿಐ ಡೇಟಾವನ್ನು ಸಾರ್ವಜನಿಕಗೊಳಿಸಲು ಹಲವಾರು ವಾರಗಳನ್ನು ಕೇಳುತ್ತಿದೆ. ಯಾರನ್ನಾದರೂ ರಕ್ಷಿಸಲು ಬ್ಯಾಂಕ್ ಬಯಸುತ್ತಿದೆಯೇ?” ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
“ಸರ್ಕಾರವನ್ನು ರಕ್ಷಿಸುವುದು ಎಸ್‌ಬಿಐನ ಉದ್ದೇಶವಾಗಿದೆ. ಇಲ್ಲದಿದ್ದರೆ, ಏಪ್ರಿಲ್-ಮೇನಲ್ಲಿ ಚುನಾವಣೆ ನಡೆಯುತ್ತಿರುವಾಗ, ಚುನಾವಣಾ ಬಾಂಡ್ ವಿವರಗಳನ್ನು ಬಹಿರಂಗಪಡಿಸಲು ಜೂನ್ 30 ರವರೆಗೆ ವಿಸ್ತರಣೆ ಕೋರಿ ಬ್ಯಾಂಕ್ ಅರ್ಜಿ ಸಲ್ಲಿಸುತ್ತಿರಲಿಲ್ಲ” ಎಂದು ಆರೋಪಿಸಿದ್ದಾರೆ
ಕಳೆದ ತಿಂಗಳು ಚುನಾವಣಾ ಬಾಂಡ್ ಯೋಜನೆಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಅಲ್ಲದೆ, ಮಾರ್ಚ್ 6ರರೊಳಗೆ ಯಾವೆಲ್ಲ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಪಡೆದಿವೆ. ಎಷ್ಟು ಮೊತ್ತದ ಚುನಾವಣಾ ಬಾಂಡ್‌ಗಳು ರಾಜಕೀಯ ಪಕ್ಷಗಳ ಬಳಿ ಇವೆ ಎಂಬ ಮಾಹಿತಿಯನ್ನು ಎಸ್‌ಬಿಐ ಸಲ್ಲಿಸಬೇಕು. ಆ ಮಾಹಿತಿಯನ್ನು ಮಾರ್ಚ್ 13ರೊಳಗೆ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಆದರೆ, ಮಾಹಿತಿಯನ್ನು ಸಂಗ್ರಹಿಸಲು ಸಮಯ ಬೇಕು ಎನ್ನುತ್ತಿರುವ ಎಸ್‌ಬಿಐ, ಜೂನ್ 30ರವರೆಗೆ ಗಡುವು ವಿಸ್ತರಿಸಲು ಕೇಳುತ್ತಿದೆ. ಅಂದಹಾಗೆ, ಆ ವೇಳೆಗೆ ಲೋಕಸಭಾ ಚುನಾವಣೆಗಳು ಮುಗಿದಿರುತ್ತವೆ. ಎಸ್‌ಬಿಐ ಕೇಳಿರುವ ಸಮಯ ವಿಸ್ತರಣೆಯ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನ ಐವರು ನಾಯಾಧೀಶರ ಸಂವಿಧಾನ ಪೀಠ ಮಾರ್ಚ್ 11ರಂದು ವಿಚಾರಣೆ ನಡೆಸಲಿದೆ.
ಅಲ್ಲದೆ, ಮಾರ್ಚ್ 6ರೊಳಗೆ ಚುನಾವಣಾ ಬಾಂಡ್‌ಗಳ ಮಾಹಿತಿ ನೀಡದೇ ಇರುವ ಎಸ್‌ಬಿಐ ವಿರುದ್ಧ ‘ನ್ಯಾಯಾಂಗ ನಿಂದನೆ’ ಆರೋಪದ ಮೇಲೆ ಪ್ರತ್ಯೇಕ ಅರ್ಜಿಯನ್ನೂ ಸಲ್ಲಿಸಲಾಗಿದೆ. ಎಸ್‌ಬಿಐ ಉದ್ದೇಶಪೂರ್ವಕವಾಗಿ ಸುಪ್ರೀಂ ಕೋರ್ಟ್‌ನ ನಿರ್ದೇಶನವನ್ನು ಉಲ್ಲಂಘಿಸಿದೆ ಎಂದು ಆರೋಪಿಸಲಾಗಿದೆ. ಆ ಅರ್ಜಿಯ ವಿಚಾರಣೆಯು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠದದ ಮುಂದೆ ಇದೆ.
ಲೋಕಸಭಾ ಚುನಾವಣೆಗಳು ಏಪ್ರಿಲ್-ಮೇ ತಿಂಗಳಲ್ಲಿ ನಡೆಯುತ್ತವೆ ಎಂಬುದು ಎಸ್‌ಬಿಐಗೆ ತಿಳಿದಿದೆ. ಚುನಾವಣಾ ಬಾಂಡ್‌ಗಳ ವಿವರಗಳನ್ನು ಸಾರ್ವಜನಿಕಗೊಳಿಸಿದರೆ, ಚುನಾವಣಾ ಸಮಯದಲ್ಲಿ ಅದು ಸಾರ್ವಜನಿಕ ಚರ್ಚೆಯ ವಿಷಯವಾಗುತ್ತದೆ. ಹೀಗಾಗಿ, ಉದ್ದೇಶಪೂರ್ವಕವಾಗಿ ಎಸ್‌ಬಿಐ ಸಮಯದ ಗಡುವು ವಿಸ್ತರಿಸುವಂತೆ ಕೇಳುತ್ತಿದೆ” ಎಂದು ಸಿಬಲ್ ಹೇಳಿದ್ದಾರೆ.
“ಎಸ್‌ಬಿಐ ಸಮಯ ಕೇಳುತ್ತಿರುವುದಕ್ಕೆ ಕಾರಣಗಳು ಸ್ಪಷ್ಟವಾಗಿವೆ. ನ್ಯಾಯಾಲಯವು ಅವರ ನಡೆಗಳನ್ನು ಗಮನಿಸುತ್ತಿದೆ ಎಂದು ನಾನು ಭಾವಿಸಿದ್ದೇನೆ. ನಾವು ಮಾಹಿತಿಗಳನ್ನು ಒಟ್ಟುಗೂಡಿಸಬೇಕು, ಫೈಲ್‌ಗಳನ್ನು ಸಂಗ್ರಹಿಸಬೇಕು ಎಂಬ ಎಸ್‌ಬಿಐ ಹೇಳಿಕೆ ಪುರಾತನ ಕಾಲದ ಸಮಜಾಯಷಿಯಾಗಿದೆ. ಇದು 21ನೇ ಶತಮಾನ ಮತ್ತು ನಮ್ಮ ಪ್ರೀತಿಯ ಪ್ರಧಾನಿ (ನರೇಂದ್ರ ಮೋದಿ) ಎಲ್ಲವನ್ನೂ ಡಿಜಿಟಲೀಕರಣದ ಬಗ್ಗೆ ಮಾತನಾಡುತ್ತಿರುವ ಕಾಲ. ಯಾರು ಯಾರಿಗೆ ಹಣ ನೀಡಿದ್ದಾರೆ ಎಂಬುದನ್ನು ಪತ್ತೆ ಕ್ಷಣಗಳಲ್ಲಿ ಹೇಳಬಹುದಲ್ಲವೇ?” ಎಂದಿದ್ದಾರೆ.
ಎಸ್‌ಬಿಐ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಕೋರಿ ಸಲ್ಲಿಸಿರುವ ಅರ್ಜಿ ಬಗ್ಗೆ ಮಾತನಾಡಿದ ಸಿಬಿಲ್, “ಇವುಗಳು ನ್ಯಾಯಾಂಗ ನಿಂದನೆಯ ವಿಷಯಗಳಾಗಿವೆ. ಇದು ನ್ಯಾಯಾಲಯದ ಘನತೆಯ ಮೇಲೆ ಪರಿಣಾಮ ಬೀರುತ್ತದೆ. ತನ್ನ ಘನತೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನ್ಯಾಯಾಲಯದ ಮೇಲಿದೆ. ಎಸ್‌ಬಿಐ ನೀಡಿದ ಈ ವಿಶೇಷವಾದ ವಿವರಣೆಯನ್ನು ನ್ಯಾಯಾಲಯವು ಒಪ್ಪಿಕೊಳ್ಳುತ್ತಿದೆ ಎಂದಾದರೆ, ನ್ಯಾಯಾಲಯವು ತನ್ನ ಆದೇಶಗಳನ್ನು ಹೇಗೆ ರಕ್ಷಿಸುತ್ತದೆ ಎಂಬುದನ್ನು ತೋರಿಸುತ್ತದೆ” ಎಂದು ಸಿಬಲ್ ಹೇಳಿದ್ದಾರೆ.
“ಎಸ್‌ಬಿಐ ಅರ್ಜಿಯನ್ನು ಸಲ್ಲಿಸಿರುವುದು ಬಹುಶಃ ನ್ಯಾಯಾಲಯವು ಪಶ್ಚಾತ್ತಾಪ ಪಡುತ್ತದೆ ಎಂಬ ಭರವಸೆಯಿಂದಲೇ ಇರಬಹುದು. ಆದರೆ, ನನ್ನ ತಿಳುವಳಿಕೆ ಏನೆಂದರೆ, ಒಮ್ಮೆ ಸಾಂವಿಧಾನಿಕ ಪೀಠವು ತೀರ್ಪು ನೀಡಿದ ಬಳಿಕ, ‘ನೀವು (ಎಸ್‌ಬಿಐ) ಹೇಳುವುದನ್ನು ನಾವು ಒಪ್ಪಿಕೊಳ್ಳುತ್ತೇವೆ’ ಎಂದು ಕೋರ್ಟ್ ಹೇಳುವುದು ಸುಲಭವಲ್ಲ. ಆದರೆ, ಏನಾಗುತ್ತದೆ ಎಂಬುದು ಕೋರ್ಟ್ ನಿರ್ಧಾರಕ್ಕೆ ಬಿಟ್ಟ ವಿಚಾರವಾಗಿದೆ” ಎಂದು ಹೇಳಿದ್ದಾರೆ.
“ಪ್ರಮುಖ ಸಂಗತಿಯೆಂದರೆ, ಬಿಜೆಪಿಯು ಚುನಾವಣಾ ಬಾಂಡ್ ಮೂಲಕ 6,000 ಕೋಟಿ ರೂಪಾಯಿಗೂ ಹೆಚ್ಚು ಹಣ ಪಡೆದಿದೆ. ಚುನಾವಣೆಯ ಸಂದರ್ಭದಲ್ಲಿ 6,000 ಕೋಟಿ ರೂಪಾಯಿಗಳನ್ನಿಟ್ಟುಕೊಂಡು ಅವರು ಏನೆಲ್ಲ ಮಾಡಬಹುದು ಎಂಬುಂದೇ ಮಹತ್ವದ್ದಾಗಿದೆ. ಆದ್ದರಿಂದ ನಿಸ್ಸಂಶಯವಾಗಿ, ಇದು (ಚುನಾವಣಾ ಬಾಂಡ್ ಯೋಜನೆ) ನಾನ್-ಲೆವೆಲ್ ಪ್ಲೇಯಿಂಗ್ ಫೀಲ್ಡ್‌ಗೆ ಕಾರಣವಾಗಿದೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಲೋಕಸಭಾ ಚುನಾವಣೆ | ಕಡೆ ಕ್ಷಣದಲ್ಲಿ ಚುನಾವಣಾ ಆಯುಕ್ತ ಸ್ಥಾನಕ್ಕೆ ಗೋಯೆಲ್ ರಾಜೀನಾಮೆ ನೀಡಿದ್ದೇಕೆ?
“ಇಡೀ ಯೋಜನೆಯನ್ನು ಬಿಜೆಪಿಯ ಖಜಾನೆ ತುಂಬಿಸುವ ಮತ್ತು ವಿಶ್ವದ ಶ್ರೀಮಂತ ಪಕ್ಷವನ್ನಾಗಿ ಮಾಡುವ ರಾಜಕೀಯ ಉದ್ದೇಶದಿಂದ ರೂಪಿಸಲಾಗಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರ್ಕಾರದ ಬೊಕ್ಕಸಕ್ಕೆ ಹಣ ಬರುವಂತೆ ನೋಡಿಕೊಳ್ಳುವುದು ಈ ಯೋಜನೆಯ ಉದ್ದೇಶವಾಗಿದೆ” ಎಂದು ಅವರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಸರ್ಕಾರವನ್ನು ಮೂಲೆಗುಂಪು ಮಾಡಲು ವಿರೋಧ ಪಕ್ಷಗಳು ಒಟ್ಟಾಗಿ ಚುನಾವಣಾ ಬಾಂಡ್‌ಗಳ ವಿಷಯವನ್ನು ಮುನ್ನೆಲೆಗೆ ತಂದು ಚರ್ಚಿಸಬೇಕಿತ್ತು. ಆದರೆ, ಸೀಟು ಹಂಚಿಕೆ ಸಮಸ್ಯೆಯನ್ನು ಇತ್ಯರ್ಥಪಡಿಸಲು ವಿರೋಧ ಪಕ್ಷಗಳು ಹೆಣಗಾಡುತ್ತಿವೆ” ಎಂದು ಸಿಬಲ್ ಅಸಮಧಾನ ವ್ಯಕ್ತಪಡಿಸಿದ್ದಾರೆ.